ತುಮಕೂರು: ಜಿಲ್ಲೆಯ ಚಿಕ್ಕನಹಳ್ಳಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಯಿತು.
“ಜೀವನದ ಸುಸ್ಥಿರ ಆರಂಭಕ್ಕಾಗಿ ಸ್ತನ್ಯಪಾನ: ಪರಿಣಾಮಕಾರಿ ಕಾರ್ಯವಿಧಾನಗಳನ್ನು ಬಳಸಿಕೊಳ್ಳೋಣ” ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮವು ತಾಯಂದಿರಿಗೆ ಸ್ತನ್ಯಪಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿತ್ತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ: ಸಿದ್ದರಾಮಣ್ಣ, ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿ ಹಾಲು ಕುಡಿಸುವುದು ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು. ಕನಿಷ್ಠ ಆರು ತಿಂಗಳವರೆಗೆ ಕೇವಲ ತಾಯಿಯ ಹಾಲು ಮಾತ್ರ ನೀಡಬೇಕು ಮತ್ತು ಎರಡು ವರ್ಷದವರೆಗೆ ಪೂರಕ ಆಹಾರದೊಂದಿಗೆ ಎದೆಹಾಲು ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅನುಷಾ ಡಿ, ತಾಯಿಯ ಮೊದಲ ಹಾಲಿನಲ್ಲಿ (ಕೊಲೆಸ್ಟಾçಮ್) ಮಗುವಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅಂಶಗಳಿರುತ್ತವೆ ಮತ್ತು ಇದು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹಕಾರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ತನ್ಯಪಾನವು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅಡಿಪಾಯವಾಗಿದೆ ಎಂಬುದನ್ನು ಒತ್ತಿಹೇಳುತ್ತಾ, ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ತಾಯಂದಿರು ಪಾಲಿಸಬೇಕಾದ ನಿಯಮಗಳು ಹಾಗೂ ಶಿಶುವಿನ ಆರೈಕೆಯ ಬಗ್ಗೆ ತಜ್ಞರು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಅಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯರು, ಗರ್ಭಿಣಿಯರು ಮತ್ತು ಬಾಣಂತಿಯರು ಭಾಗವಹಿಸಿದ್ದರು.
(Visited 1 times, 1 visits today)



