ಕೊರಟಗೆರೆ: ಅಧಿಕಾರಿಗಳು ಬರುತ್ತಾರೆ, ಕರ್ತವ್ಯ ನಿರ್ವಹಿಸುತ್ತಾರೆ, ವರ್ಗಾವಣೆಯಾಗಿ ತೆರಳುತ್ತಾರೆ. ಆದರೆ ತಮ್ಮ ಸೇವೆ ಹಾಗೂ ಸರಳ ನಡವಳಿಕೆಯಿಂದ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯುವ ಅಧಿಕಾರಿಗಳು ವಿರಳ. ಅಂತಹ ಅಪರೂಪದ ಬಾಂಧವ್ಯಕ್ಕೆ ಕೊರಟಗೆರೆ ಸಾಕ್ಷಿಯಾಗಿದೆ.
ಕೊರಟಗೆರೆಯಲ್ಲಿ ತಹಶೀಲ್ದಾರರಾಗಿ ಕರ್ತವ್ಯ ನಿರ್ವಹಿಸಿ, ಸದ್ಯ ತುಮಕೂರು ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನಾಹೀದ್ ಜಮ್ ಜಮ್ ಅವರಿಗಾಗಿ ಕೊರಟಗೆರೆ ಜನತೆಯೇ ಮುಂದೆ ನಿಂತು ಅದ್ದೂರಿ ಸೀಮಂತ ಕಾರ್ಯಕ್ರಮ ಆಯೋಜಿಸುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.
ಪಟ್ಟಣದ ಕನ್ನಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಸೀಮಂತ ಸಮಾರಂಭದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು, ಗಣ್ಯರು, ಅಭಿಮಾನಿಗಳು ಹಾಗೂ ನಾಹೀದ್ ಜಮ್ ಜಮ್ ಅವರ ಕುಟುಂಬಸ್ಥರು ಭಾಗವಹಿಸಿ ಶುಭ ಹಾರೈಸಿದರು.
ಜನರೊಂದಿಗೆ ಬೆಸೆದಿದ್ದ ಆತ್ಮೀಯತೆ: ಕೊರಟಗೆರೆಯಲ್ಲಿ ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ್ದ ಅವಧಿಯಲ್ಲಿ ನಾಹೀದ್ ಜಮ್ ಜಮ್ ಅವರು ಕೇವಲ ಕಚೇರಿ ಕೆಲಸಗಳಿಗೆ ಸೀಮಿತವಾಗದೆ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಂಡಿದ್ದರು. ಸರಳ ನಡೆ, ಆತ್ಮೀಯ ಮಾತು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವದಿಂದಾಗಿ ಅವರು ತಾಲೂಕಿನ ಜನರ ಗಮನ ಸೆಳೆದಿದ್ದರು.
ವರ್ಗಾವಣೆಯಾಗಿ ತೆರಳಿದ ಬಳಿಕವೂ ಅವರೊಂದಿಗಿನ ಈ ಆತ್ಮೀಯತೆ ಕಡಿಮೆಯಾಗಿರಲಿಲ್ಲ. ಇದೀಗ ಅವರು ಒಂಬತ್ತು ತಿಂಗಳ ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ, ಇವರು ನಮ್ಮ ಊರಿನ ಮನೆ ಮಗಳು ಎಂಬ ಭಾವನೆಯೊಂದಿಗೆ ಕೊರಟಗೆರೆ ಜನತೆ ಸೀಮಂತ ಕಾರ್ಯಕ್ರಮವನ್ನು ಕುಟುಂಬದ ಕಾರ್ಯಕ್ರಮದಂತೆ ಆಚರಿಸಿದ್ದಾರೆ.
ಸಂಪ್ರದಾಯಬದ್ಧವಾಗಿ ಸೀಮಂತ: ಕನ್ನಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ಸೀಮಂತ ನೆರವೇರಿಸಲಾಯಿತು. ಹೂವು, ಹಣ್ಣು, ಸೀರೆ ಸೇರಿದಂತೆ ವಿವಿಧ ಉಡುಗೊರೆಗಳನ್ನು ನೀಡಿ ನಾಹೀದ್ ಜಮ್ ಜಮ್ ಅವರಿಗೆ ಶುಭ ಹಾರೈಸಲಾಯಿತು. ತಾಯಿ ಹಾಗೂ ಮಗುವಿನ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಗಾಗಿ ಗಣ್ಯರು ಹಾಗೂ ಸಾರ್ವಜನಿಕರು ಹಾರೈಸಿದರು.
ಕಾರ್ಯಕ್ರಮದಲ್ಲಿ ದೊರೆತ ಆತ್ಮೀಯ ಸ್ವಾಗತ ಹಾಗೂ ಜನರ ಅಭಿಮಾನದಿಂದ ನಾಹೀದ್ ಜಮ್ ಜಮ್ ಅವರು ಭಾವುಕರಾದರು.
ಕೊರಟಗೆರೆ ಜನರ ಪ್ರೀತಿ ಮರೆಯಲು ಸಾಧ್ಯವಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಉಪವಿಭಾಗಾಧಿಕಾರಿ ನಾಹೀದ್ ಜಮ್ ಜಮ್, ಕೊರಟಗೆರೆಯಲ್ಲಿ ತಹಶೀಲ್ದಾರರಾಗಿ ಕೆಲಸ ಮಾಡಿದ ಸಮಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು ಡಾ. ಜಿ. ಪರಮೇಶ್ವರ್ ಅವರು ನನ್ನನ್ನು ಕೊರಟಗೆರೆಗೆ ತಹಶೀಲ್ದಾರರಾಗಿ ನೇಮಕ ಮಾಡದಿದ್ದರೆ, ಇಲ್ಲಿನ ಜನರೊಂದಿಗೆ ಇಂತಹ ಆತ್ಮೀಯ ಬಾಂಧವ್ಯ ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಎಂದು ಸ್ಮರಿಸಿದರು.
ಕೊರಟಗೆರೆಯ ಜನರು ನನ್ನನ್ನು ಕೇವಲ ಅಧಿಕಾರಿಯಾಗಿ ನೋಡದೆ, ತಮ್ಮ ಮನೆಯವರಂತೆ ಪ್ರೀತಿಸಿದ್ದಾರೆ. ಇಂದು ನನ್ನ ಸೀಮಂತ ಕಾರ್ಯಕ್ರಮವನ್ನು ಜನರೇ ಮುಂದೆ ನಿಂತು ಇಷ್ಟು ಅದ್ದೂರಿಯಾಗಿ ಆಯೋಜಿಸಿರುವುದು ನನ್ನ ಜೀವನದ ಅತ್ಯಂತ ಭಾವುಕ ಕ್ಷಣ. ಜನತೆ ನೀಡಿರುವ ಈ ಪ್ರೀತಿ, ಅಭಿಮಾನ ಹಾಗೂ ಆಶೀರ್ವಾದವನ್ನು ಜೀವನಪೂರ್ತಿ ಮರೆಯುವುದಿಲ್ಲ, ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಮಗಳ ಸೇವೆಗೆ ದೊರೆತ ಗೌರವ: ನಾಹೀದ್ ಜಮ್ ಜಮ್ ಅವರ ತಂದೆ ಮಾತನಾಡಿ, ?ಡಾ. ಜಿ. ಪರಮೇಶ್ವರ್ ಅವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಕರೆ ಮಾಡಿ, ನಿಮ್ಮ ಮಗಳನ್ನು ಕೊರಟಗೆರೆ ತಹಶೀಲ್ದಾರರಾಗಿ ನೇಮಕ ಮಾಡುತ್ತಿದ್ದೇನೆ, ಕಳುಹಿಸಿಕೊಡಿ ಎಂದು ಹೇಳಿದ್ದರು. ಅಂದು ಅವರು ಮಗಳಿಗೆ ಕೊರಟಗೆರೆಯಲ್ಲಿ ಕೆಲಸ ಮಾಡುವ ಅವಕಾಶ ನೀಡದಿದ್ದರೆ, ಇಂದು ನಾವು ಇಲ್ಲಿನ ಜನರ ಈ ಅಪಾರ ಪ್ರೀತಿಯನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ, ಎಂದು ಹೇಳಿದರು.
ಮಗಳು ಕರ್ತವ್ಯ ನಿರ್ವಹಿಸಿದ ಊರಿನ ಜನರು ಇಷ್ಟು ಪ್ರೀತಿಯಿಂದ ಮುಂದೆ ಬಂದು ಸೀಮಂತ ಕಾರ್ಯಕ್ರಮ ಆಯೋಜಿಸುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಕೊರಟಗೆರೆಯ ಜನರು ನಮ್ಮ ಕುಟುಂಬದವರAತೆ ನಡೆದುಕೊಂಡಿದ್ದಾರೆ. ಮಗಳ ಸೇವೆಗೆ ದೊರೆತಿರುವ ಈ ಪ್ರೀತಿ ನಮಗೆ ಅತ್ಯಂತ ದೊಡ್ಡ ಗೌರವ, ಎಂದು ಭಾವುಕರಾದರು.
ಸರಳತೆ, ಆತ್ಮೀಯತೆಯಿಂದ ಜನಮನ ಗೆದ್ದಿದ್ದಾರೆ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ನಾಹೀದ್ ಜಮ್ ಜಮ್ ಅವರು ಕೊರಟಗೆರೆಯಲ್ಲಿ ತಹಶೀಲ್ದಾರರಾಗಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಜನಸಾಮಾನ್ಯರೊಂದಿಗೆ ಉತ್ತಮವಾಗಿ ಸ್ಪಂದಿಸಿದ್ದರು. ಅಧಿಕಾರಿಯಾಗಿ ಬಂದು ವರ್ಗಾವಣೆಯಾದ ನಂತರವೂ ಜನರ ಮನಸ್ಸಿನಲ್ಲಿ ಉಳಿಯುವುದು ಸುಲಭದ ಮಾತಲ್ಲ. ಆದರೆ ಅವರ ಸರಳತೆ, ಆತ್ಮೀಯತೆ ಹಾಗೂ ಜನರೊಂದಿಗೆ ಬೆರೆತು ಕೆಲಸ ಮಾಡಿದ ರೀತಿಯಿಂದಾಗಿ ವಿಶೇಷ ಸ್ಥಾನ ಪಡೆದಿದ್ದಾರೆ. ಅದಕ್ಕಾಗಿಯೇ ಜನರೇ ಮುಂದೆ ನಿಂತು ಸೀಮಂತ ಕಾರ್ಯಕ್ರಮ ಆಯೋಜಿಸಿದ್ದಾರೆ, ಎಂದರು.
(Visited 1 times, 1 visits today)



