ತುಮಕೂರು: ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್‌ಅವರು ನಗರದ ಅಸಹಾಯಕ ಒಬ್ಬಂಟಿ ಮಹಿಳೆ, ವಿಕಲಚೇತನೆಯಾದ ಬ್ರಾಹ್ಮಣ ಸಮುದಾಯದ ಮಹಿಳೆಯನ್ನು ಗುರುವಾರ ದತ್ತು ಸ್ವೀಕಾರ ಮಾಡಿ, ಅವರ ಜೀವಿತಾವಧಿವರೆಗೆ ಆರೋಗ್ಯ, ಆರೈಕೆ, ಜೀವನ ನಿರ್ವಹಣೆಯ ಹೊಣೆಯನ್ನು ವಹಿಸಿಕೊಳ್ಳುವುದಾಗಿ ಪ್ರಕಟಿಸಿದರು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಜಿಲ್ಲಾ ಸೇವಾದಳ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟದ್ದ ಶಿವಪ್ರಸಾದ್ ಅವರು ಇತ್ತೀಚೆಗೆ ನಿಧನರಾದರು. ತಮ್ಮ ಸಹೋದರಿ, ಅವಿವಾಹಿತೆ, ವಿಕಲಚೇತನರಾದ ಹಂಸಮಾಲಿನಿ ಅವರಿಗೆ ಶಿವಪ್ರಸಾದ್ ಅವರು ಆಧಾರಸ್ತಂಭವಾಗಿದ್ದರು. ಶಿವಪ್ರಸಾದ್ ಅವರ ಅಕಾಲಿಕ ಮರಣದಿಂದ ಹಂಸಮಾಲಿನಿ ಅವರು ದಿಕ್ಕಿಲ್ಲದಂತಾದರು. ಇಂತಹ ಪರಿಸ್ಥಿತಿ ಅರ್ಥಮಾಡಿಕೊಂಡ ಇಕ್ಬಾಲ್ ಅಹಮದ್ ಅವರು ತಮ್ಮ ಆತ್ಮೀಯ ಗೆಳೆಯ ಶಿವಪ್ರಸಾದ್ ಅವರ ಸ್ಥಾನದಲ್ಲಿ ನಿಂತು ಅವರ ಸಹೋದರಿ ಹಂಸಮಾಲಿನಿ ಅವರಿಗೆ ಸಹೋದರರಾಗಿ ಸಲಹುವ ಸಂಕಲ್ಪ ಮಾಡಿದರು.
ಇದರ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಇಕ್ಬಾಲ್ ಅಹಮದ್ ಅವರು, ಬರಗಾಲ ಪರಿಸ್ಥಿತಿ ಇರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ವಿಜೃಂಭಣೆಯಿAದ ತಮ್ಮ ಜನ್ಮದಿನ ಆಚರಿಸಿಬೇಡಿ, ಸಾಮಾಜಿಕ ಸೇವೆಯಾಗಿ, ಅಸಹಾಯಕರಿಗೆ ಸಹಾಯ ಮಾಡುವ ರೀತಿಯಲ್ಲಿ ಆಚರಿಸಿ ಎಂದು ತಮ್ಮ ನಾಯಕರಾದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಹೇಳಿದ್ದರು. ಸೇವಾ ಕಾರ್ಯಕ್ರಮವಾಗಿ ಗೆಳೆಯ ಶಿಪ್ರಸಾದ್ ಅವರ ಸಹೋದರಿಯನ್ನು ದತ್ತು ಪಡೆಯುತ್ತಿರುವುದಾಗಿ ಹೇಳಿದರು.
ಯಾವುದೇ ಆದಾಯ ಮೂಲವಿಲ್ಲದ, ಒಬ್ಬಂಟಿ ಮಹಿಳೆ ಹಂಸಮಾಲಿನಿ ಅವರಿಗೊಂದು ಮನೆ ವ್ಯವಸ್ಥೆ ಮಾಡುವ ಸಂಬAಧ ಕಾಂಗ್ರೆಸ್ ಮುಖಂಡ ರೇವಣಸಿದ್ಧಯ್ಯ ಅವರಿಗೆ ಇಕ್ಬಾಲ್ ಅಹಮದ್ ಅವರು ೫೦ ಸಾವಿರ ರೂ.ಗಳ ಮುಂಗಡ ಹಣ ನೀಡಿದರು. ಮುಂದೆ ಹಂಸಮಾಲಿನಿಯವರ ಊಟ, ವಸತಿ, ಆರೋಗ್ಯ ಮತ್ತಿತರ ಎಲ್ಲಾ ಜವಾಬ್ದಾರಿಯನ್ನು ಒಟ್ಟಾಗಿ ನಿರ್ವಹಿಸೋಣ ಎಂದು ಕಾಂಗ್ರೆಸ್ ಮುಖಂಡರಿಗೆ ಹೇಳಿದರು.
ಮುಖಂಡರಾದ ಷಣ್ಮುಖಪ್ಪ, ರೇವಣಸಿದ್ಧಯ್ಯ, ಸಿದ್ಧಲಿಂಗೇಗೌಡ, ಬೈಲಪ್ಪ, ಶಿವಾಜಿ, ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ಫಯಾಜ್, ಮುಖಂಡರಾದ ಫೀರ್, ರಮೇಶ್, ಅಸ್ಲಾಂಖಾನ್, ಆಲಂ, ರಾಮಯ್ಯ, ಚಕ್ರವರ್ತಿ ಪ್ರಕಾಶ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಹಾಜರಿದ್ದು ಇಕ್ಬಾಲ್ ಅಹಮದ್ ಅವರ ಸೇವಾ ಕಾರ್ಯ ಶ್ಲಾಘಿಸಿದರು.

(Visited 1 times, 1 visits today)