
ಹುಳಿಯಾರು: ಗಣಿ ಬಾಧಿತ ಪ್ರದೇಶಗಳ ಪುನರುಜ್ಜೀವನಕ್ಕಾಗಿ ಮೀಸಲಿಟ್ಟ ಕೋಟ್ಯಂತರ ರೂಪಾಯಿ ಹಣ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಮಣ್ಣು ಪಾಲಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ, ಹುಳಿಯಾರು ಹೋಬಳಿಯಲ್ಲಿ ಸಿಇಪಿಎಂಐಝ್ಡ್ ಯೋಜನೆಯಡಿ ಬರೋಬ್ಬರಿ ೯ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೆಂಕೆರೆ-ಗೌಡಗೆರೆ-ಕAಪನಹಳ್ಳಿ ಕಾಂಕ್ರೀಟ್ ರಸ್ತೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಆಗಲೇ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿ, ಕಳಪೆ ಕಾಮಗಾರಿಯ ನಗ್ನ ಸತ್ಯವನ್ನು ಸಾರುತ್ತಿದೆ.
ಯೋಜನೆಯ ವಿವರ ಮತ್ತು ಪ್ರಸ್ತುತ ಸ್ಥಿತಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ (ತುಮಕೂರು ಜಿಲ್ಲಾ ಪಂಚಾಯತ್) ವತಿಯಿಂದ ಈ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎನ್‌ಎಚ್-೨೩೪ ರಿಂದ ಎನ್‌ಎಚ್-೧೫೦ಎ ವರೆಗಿನ ಮಾರ್ಗ ಕಂಪನಹಳ್ಳಿ, ಗೌಡಗೆರೆ ಕೆಂಕೆರೆ ರಸ್ತೆ ಅಭಿವೃದ್ಧಿಗೆ ರೂ. ೯೦೦.೦೦ ಲಕ್ಷ (೯ ಕೋಟಿ) ಅಂದಾಜು ಮೊತ್ತ ನಿಗದಿಯಾಗಿದೆ. ಹೈದರಾಬಾದ್ ಮೂಲದ ಎಂ.ವೆAಕಟಕಿರಣ್ (ಉಷಾ ಕಿರಣ್ ಕನ್ಸ÷್ಟçಕ್ಷನ್ಸ್) ಎಂಬುವರು ಗುತ್ತಿಗೆ ಪಡೆದಿದ್ದು, ೧೬-೧೨-೨೦೨೪ ರಂದು ಕರಾರು ಆಗಿದ್ದು, ೧೧ ತಿಂಗಳ ಅವಧಿ ನೀಡಲಾಗಿದೆ. ಇಷ್ಟೊತ್ತಿಗೆ ಕಾಮಗಾರಿ ಮುಗಿಯಬೇಕಿದ್ದರೂ ಸಹ ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ವಾಸ್ತವ ಸ್ಥಿತಿ ಬೇರೆಯೇ ಇದೆ.
ಕಿತ್ತು ಹೋದ ರಸ್ತೆ, ಬಯಲಾದ ಕಳಪೆತನ (ಚಿತ್ರಗಳು ಸಾಕ್ಷಿ): ಕಾಮಗಾರಿ ಮುಗಿಯುವ ಮುನ್ನವೇ ರಸ್ತೆ ಕಿತ್ತು ಹೋಗುತ್ತಿದೆ. ಕಾಂಕ್ರೀಟ್ ಹಾಕಿದ ಕೆಲವೇ ದಿನಗಳಲ್ಲಿ ರಸ್ತೆ ಮೇಲ್ಭಾಗ ಕಿತ್ತು ಹೋಗಿ, ಒಳಗಿನ ಜಲ್ಲಿಕಲ್ಲುಗಳು ಸಂಪೂರ್ಣವಾಗಿ ಹೊರಬಂದಿವೆ. ಕೆಲವೆಡೆ ಮೇಲ್ಬದರದ ಕಾಂಕ್ರಿಟ್ ಎದ್ದು ಜಲ್ಲಿಕಲ್ಲುಗಳು ಕಾಣಿಸುತ್ತಿವೆ. ಹೊಸದಾಗಿ ನಿರ್ಮಿಸಿದ ರಸ್ತೆ ಹೀಗೆ ಕಿತ್ತು ಹೋಗುತ್ತಿರುವುದು ಕಳಪೆ ಗುಣಮಟ್ಟದ ಕಾಂಕ್ರೀಟ್ ಬಳಕೆಯಾಗಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಅಲ್ಲದೆ ರಸ್ತೆಯ ಮಧ್ಯಭಾಗದಲ್ಲಿ ರೈತರು ಪೈಪ್ ಲೈನ್ ಅಳವಡಿಸಲು ರಸ್ತೆಯನ್ನು ಅಗೆದಿದ್ದಾರೆ. ಆದರೆ, ಪೈಪ್ ಲೈನ್ ಅಳವಡಿಸಿದ ನಂತರ ಪುನಃ ಆ ಜಾಗದಲ್ಲಿ ಕಾಂಕ್ರೀಟ್ ಹಾಕಿ ರಸ್ತೆಯನ್ನು ಸಮತಟ್ಟು ಮಾಡದೆ ಕೈಬಿಟ್ಟಿದ್ದಾರೆ. ಬಹುಮುಖ್ಯವಾಗಿ ರಸ್ತೆಯ ಏಳೆಂಟುಕಡೆ ಏರ್ ಕ್ರಾಕ್ ಬಂದಿದೆ.
ದ್ವಿಚಕ್ರ ವಾಹನ ಸವಾರರ ಪ್ರಮುಖ ಸಮಸ್ಯೆಗಳು: ಕಾಂಕ್ರೀಟ್ ಮೇಲ್ಪದರ ಕಿತ್ತು ಹೋಗಿ ಜಲ್ಲಿಕಲ್ಲುಗಳು ಸಡಿಲವಾಗಿ ರಸ್ತೆಯಲ್ಲೇ ಹರಡಿಕೊಂಡಿರುವುದರಿAದ, ಬ್ರೇಕ್ ಹಾಕಿದ ತಕ್ಷಣ ಬೈಕ್ ಹಾಗೂ ಸ್ಕೂಟರ್‌ಗಳು ಸ್ಕಿಡ್ ಆಗಿ ಸವಾರರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ. ಪೈಪ್‌ಲೈನ್‌ಗಾಗಿ ರಸ್ತೆ ಬಗೆದು ಹಾಗೆಯೇ ಬಿಟ್ಟಿರುವ ಹಾಗೂ ಏರ್ ಕ್ರಾಕ್ ಬಂದಿರುವ ಕಡೆಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ಅಥವಾ ಸೂಚನಾ ಫಲಕಗಳಿಲ್ಲ. ರಾತ್ರಿ ವೇಳೆಯಲ್ಲಿ ಈ ತಗ್ಗುಗಳು ಕಣ್ಣಿಗೆ ಕಾಣದೆ ವಾಹನಗಳು ಸೀದಾ ತಗ್ಗಿಗೆ ಬಿದ್ದು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಹರಿತವಾದ ಕಾಂಕ್ರೀಟ್ ಚೂರುಗಳು ಮತ್ತು ಎದ್ದಿರುವ ಕಲ್ಲುಗಳಿಂದಾಗಿ ದ್ವಿಚಕ್ರ ವಾಹನಗಳ ಟೈರ್‌ಗಳು ಕಟ್ ಆಗುವುದು, ಪಂಚರ್ ಆಗುವುದು ಮತ್ತು ವೀಲ್ ರಿಮ್‌ಗಳು ಬೆಂಡ್ ಆಗುವ ಸಮಸ್ಯೆ ಎದುರಾಗಿದೆ.
ಅಧಿಕಾರಿಗಳು, ಜನಪ್ರತಿನಿಧಿಗಳ ಮೌನ ಸಮ್ಮತಿ?: ಇಷ್ಟೊಂದು ಬೃಹತ್ ಮೊತ್ತದ ಕಾಮಗಾರಿ ಕಣ್ಣೆದುರೇ ಕಳಪೆಯಾಗಿ ನಡೆಯುತ್ತಿದ್ದರೂ, ಸಂಬAಧಪಟ್ಟ ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗುತ್ತಿಗೆದಾರರು ಹೈದರಾಬಾದ್ ಮೂಲದವರಾಗಿದ್ದು, ಸ್ಥಳೀಯವಾಗಿ ಸರಿಯಾದ ಮೇಲ್ವಿಚಾರಣೆ ಇಲ್ಲದೆ ಕಾಮಗಾರಿ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ರಸ್ತೆ ಕಿತ್ತು ಹೋಗಿ ತಿಂಗಳುಗಳಾಗುತ್ತಿದ್ದರೂ ಗುತ್ತಿಗೆದಾರರು ಇತ್ತ ತಿರುಗಿಯೂ ನೋಡಿಲ್ಲ. ಇನ್ನು, ಈ ಭಾಗದ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಾರ್ವಜನಿಕರ ಒತ್ತಾಯ: ಗಣಿ ಬಾಧಿತ ಪ್ರದೇಶಗಳ ಜನರ ಅನುಕೂಲಕ್ಕಾಗಿ ಬಳಸಬೇಕಾದ ಹಣ ಹೀಗೆ ಪೋಲಾಗುತ್ತಿರುವುದು ಖಂಡನೀಯ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಈ ಕಳಪೆ ರಸ್ತೆ ಕಾಮಗಾರಿಯನ್ನು ತಪಾಸಣೆ ನಡೆಸಬೇಕು. ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕಿತ್ತು ಹೋಗಿರುವ ರಸ್ತೆಯನ್ನು ತಕ್ಷಣವೇ ಗುಣಮಟ್ಟದ ಕಾಂಕ್ರೀಟ್ ಬಳಸಿ ದುರಸ್ತಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



