ತುಮಕೂರು
ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು. ಪೌರಕಾರ್ಮಿಕರ ರೀತಿ ನೇರ ನೇಮಕಾತಿ ಮಾಡಬೇಕು,ಸೇವಾ ಅವಧಿಯಲ್ಲಿ ಮೃತರಾದರೆ 10 ಲಕ್ಷ ರೂ ಇಡಿ ಗಂಟು ನೀಡಬೇಕೆಂದು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಪೌರ ನೀರು ಸರಬರಾಜು ನೌಕರರ ಮಹಾ ಸಂಘ(ರಿ) ವತಿಯಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಸಂಘದ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ನೇತೃತ್ವದಲ್ಲಿ ನೂರಾರು ಪೌರ ನೀರು ಸರಬರಾಜು ನೌಕರರು ನಗರದ ಸಿದ್ದಗಂಗಾ ಮಠದಿಂದ ಮುಖ್ಯಮಂತ್ರಿಗಳ ನಿವಾಸದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ನಗರದ ಟೌನ್‍ಹಾಲ್ ಮುಂಭಾಗದಲ್ಲಿರುವ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಮುಂಭಾಗದಿಂದ ಚಾಲನೆ ದೊರೆಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಪೌರ ಸೇವಾ ನೀರು ಸರಬರಾಜು ನೌಕರರ ಮಹಾ ಸಂಘದ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್,ಸತತ 25ಕ್ಕೂ ಹೆಚ್ಚು ವರ್ಷಗಳಿಂದ ಮಳೆ,ಚಳಿ,ಹಬ್ಬ, ಹರಿದಿನಗಳೆನ್ನದೆ ಜೀವ ಜಲ ಸರಬರಾಜು ಮಾಡುತ್ತಿರುವ ನೌಕರರಿಗೆ ಇಲ್ಲಿಯವರೆಗೂ ಕನಿಷ್ಠ ವೇತನ ಇಲ್ಲ.ಸೇವಾ ಭದ್ರತೆ ಇಲ್ಲ.ಮೂರು ತಿಂಗಳಿಗೋ, ಆರು ತಿಂಗಳಿಗೋಮ್ಮೆ ವೇತನ ನೀಡಲಾಗುತ್ತಿದೆ. ಇದರಿಂದ ನೀರು ಸರಬರಾಜು ನೌಕರರು ಜೀವನ ನಡೆಸುವುದು ಕಷ್ಟವಾಗಿದೆ.ಅಲ್ಲದೆ ನೀರು ಸರಬರಾಜು ನೌಕರರ ಹುದ್ದೆಯಲ್ಲಿರುವ ಕೆಲವರನ್ನು ಕಂಪ್ಯೂಟರ್ ಅಪರೇಟರ್,ಪೀವನ್ ಕೆಲಸಕ್ಕೆ ನೇಮಿಸಿಕೊಂಡು ಪುಲ್‍ಟೈಮ್ ಕೆಲಸ ಮಾಡಿಸಿಕೊಳ್ಳುತ್ತಿರುವ ಪಾಲಿಕೆಯ ಹಿರಿಯ ಅಧಿಕಾರಿಗಳು, ವೇತನವನ್ನು ಮಾತ್ರ ನೀರು ಸರಬರಾಜು ನೌಕರರ ಹೆಸರಿನಲ್ಲಿ ನೀಡುತ್ತಿದ್ದಾರೆ. ಇವರಿಗೆ ಹೆರಿಗೆ ರಜೆ ಇಲ್ಲ.ಕನಿಷ್ಠ ವೇತನ,ಭತ್ಯೆಗಳಿಲ್ಲ.ಹಾಗಾಗಿ ನಮ್ಮನ್ನು ನೇರ ನೇಮಕಾತಿ ಮತ್ತು ನೇರ ಪಾವತಿಗೆ ಒಳಪಡಿಸಬೇಕು ಹಾಗೆಯೇ ನಿವೃತ್ತಿ ಅಥವಾ ಮೃತರಾದ ಸಂದರ್ಭದಲ್ಲಿ ಹತ್ತು ಲಕ್ಷ ರೂ ಇಡಿಗಂಟು ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಕಳೆದ 25 ವರ್ಷಗಳ ನಮ್ಮ ಹೋರಾಟಕ್ಕೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ.ಇದುವರೆಗೂ ನಮಗೆ ಅಧಿಕೃತ ಸಂಘ ಇರಲಿಲ್ಲ.ಬೇರೆ ಸಂಘಟನೆಗಳ ಜೊತೆ ಸೇರಿ ಹೋರಾಟ ಮಾಡಬೇಕಿತ್ತು.ಆದರೆ ಕಳೆದ ಎರಡು ವರ್ಷಗಳಿಂದ ನಮ್ಮದೇ ಆದ ಸಂಘಟನೆ ಇದೆ. ನಮ್ಮ ಹೋರಾಟಕ್ಕೆ ಸ್ಪಂದಿಸಿ, ಸರಕಾರ ನೇರ ನೇಮಕಾತಿ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಿದೆ.ಆದರೆ ತಾಂತ್ರಿಕ ಕಾರಣದಿಂದ ಹಣಕಾಸು ಇಲಾಖೆ ಪೌರಾಡಳಿತ ಇಲಾಖೆಗೆ ವಾಪಸ್ಸು ಮಾಡಿದೆ.ಈ ಬಾರಿ ರಾಜ್ಯದ 6 ಸಾವಿರ ನೀರು ಸರಬರಾಜು ನೌಕರರು ಒಗ್ಗೂಡಿ, ಮುಖ್ಯಮಂತ್ರಿಗಳ ಮನೆಯವರೆಗೆ ಪಾದಯಾತ್ರೆ ಕೈಗೊಂಡಿದ್ದು, ಸರಕಾರದ ಸ್ಪಷ್ಟ ಆದೇಶ ಬರುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಪಾವಗಡ ಶ್ರೀರಾಮ್ ಸ್ಪಷ್ಟಪಡಿಸಿದರು.
ಪೌರ ನೀರು ಸರಬರಾಜು ನೌಕರರ ಪಾದಯಾತ್ರೆಗೆ ಬೆಂಬಲ ಸೂಚಿಸಿ ಮಾತನಾಡಿದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಧನಿಯಕುಮಾರ್, ನೀರು ಸರಬರಾಜು ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ.ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿರುವ ನೌಕರರಿಗೆ ನ್ಯಾಯ ಸಿಗಬೇಕು. ಇಂದಿನ ಬೆಲೆ ಹೆಚ್ಚಳದ ಸಂದರ್ಭದಲ್ಲಿ ಸರಕಾರ ಇವರ ಮನವಿಗೆ ಸ್ಪಂದಿಸಬೇಕು.ಅಲ್ಲದೆ ಪೌರಕಾರ್ಮಿಕರು, ನೀರು ಸರಬರಾಜು ನೌಕರರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡಬೇಕೆಂದು ಒತ್ತಾಯಿಸಿದರು.
ಪಾಲಿಕೆಯ ಪರವಾಗಿ ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತರಾದ ಶುಭ, 2016 ರಲ್ಲಿಯೇ ಇಲಾಖೆಯ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2017 ರಲ್ಲಿ ವಿಶಾಲ್ ಅವರು ಪೌರಾಡಳಿತ ಇಲಾಖೆಯ ಆಯುಕ್ತರಾಗಿದ್ದ ಸಂದರ್ಭದಲ್ಲಿ ನೇರ ನೇಮಕ ಹಾಗೂ ನೇರಪಾವತಿಗೆ ಒಳಪಡಿಸುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಸರಕಾರದ ಮುಂದಿದೆ.ಅಲ್ಲದೆ ಕನಿಷ್ಠ ವೇತನ ಯೋಜನೆಗೆ ತಾತ್ಕಾಲಿಕ ತಡೆ ಇದೆ. ಅದು ತೆರವಾದ ತಕ್ಷಣ ತುಮಕೂರು ಪಾಲಿಕೆಯವತಿಯಿಂದ ಎಲ್ಲಾ ಪೌರ ಸೇವಾ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಲು ಸಿದ್ದ,ಸೆಪ್ಟಂಬರ್ 23ಕ್ಕೆ ಪೌರಕಾರ್ಮಿಕರ ದಿನಾಚರಣೆ ಇದ್ದು, ಅವರ ರೀತಿಯಲ್ಲಿಯೇ ನೀರು ಸರಬರಾಜು ನೌಕರರ ದಿನವನ್ನು ಆಚರಿಸುವಂತಾಗಲಿ ಎಂದು ಪಾದಯಾತ್ರೆ ಶುಭ ಕೋರಿದರು.
ಈ ವೇಳೆ ದಸಂಸ ಮುಖಂಡ ಕಿರಣ್‍ಕುಮಾರ್,ಕರ್ನಾಟಕ ರಾಜ್ಯ ಪೌರ ನೀರು ಸರಬರಾಜು ನೌಕರರ ಮಹಾ ಸಂಘದ ಉಪಾಧ್ಯಕ್ಷರಾದ ಸತೀಶ್, ಮಂಜುನಾಥ್.ಡಿ.ಆರ್, ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿಗಳಾದ ಕಿರಣಕುಮಾರ್, ನವೀನಾಕ್ಷ,ರಮೇಶ್.ಕೆ.ಎಸ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ತುಮಕೂರು ನಗರದಿಂದ ಹೊರಟ ಪಾದಯಾತ್ರೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ,ರಾತ್ರಿ ಸಿದ್ದಗಂಗಾ ಮಠದಲ್ಲಿ ತಂಗಲಿದ್ದು,ಮಂಗಳವಾರ ಬೆಳಗ್ಗೆ ಮಠದಿಂದ ಮುಂದೆ ಸಾಗಲಿದೆ.





