ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯ್ತಿ ಕಸ ವಿಲೇವಾರಿ ಘಟಕಕ್ಕೆ ಸಮೀಪದ ಹೊಸಹಳ್ಳಿ ಕೈಮರ ಬಳಿ ಕೆರೆಸೂರಗೊಂಡನಹಳ್ಳಿ ಸರ್ವೆ ನಂಬರ್ ೩೨ ರಲ್ಲಿ ೫.೧೦ ಎಕರೆ ಭೂಮಿ ಮಂಜೂರು ಮಾಡಿ ಮಂಜೂರಾತಿ ಪತ್ರ ಹಸ್ತಾಂತರಿಸಲಾಯಿತು. ೫.೧೦ ಎಕರೆ ಜಮೀನಿನಲ್ಲಿ ೪ ಎಕರೆ ಪ್ರದೇಶವನ್ನು ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ನಿರ್ಮಾಣಕ್ಕೂ ಮತ್ತು ೧ ಎಕರೆ ೧೦ ಕುಂಟೆ ಜಮೀನನ್ನು ತ್ಯಾಜ್ಯ ನೀರು ಸಂಸ್ಕರಣೆ ಮಾಡಲು ಮೀಸಲಿಡಲಾಗಿದೆ.
ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪ್ರೀತಿ ರಾಘವೇಂದ್ರ ಅವರು ಉಪತಹಸೀಲ್ದಾರ್ ವಿನೂತ ಅವರಿಂದ ಮಂಜೂರಾತಿ ಪತ್ರ ಪಡೆದು ಮಾತನಾಡಿ ಹುಳಿಯಾರು ಪಂಚಾಯ್ತಿಯ ಕಸ ವಿಲೇವಾರಿ ಘಟಕ ಇಲ್ಲದೆ ನಿತ್ಯ ಸಾವಿರಾರೂ ರೂ. ವೆಚ್ಚ ಮಾಡಿ ಚಿಕ್ಕನಾಯಕನಹಳ್ಳಿ ಘಟಕಕ್ಕೆ ಕಳುಹಿಸಬೇಕಿತ್ತು. ಇದರಿಂದ ಪಂಚಾಯ್ತಿ ನಷ್ಟವೇ ವಿನಃ ಆದಾಯ ಇರಲಿಲ್ಲ. ಈಗ ಭೂಮಿ ಕೊಟ್ಟಿರುವುದರಿಂದ ಹಣ ಮತ್ತು ಪೌರಕಾರ್ಮಿಕರ ಸಮಯ ಎರಡೂ ಉಳಿದಿದೆ. ನಮ್ಮ ಕಾಲದಲ್ಲೇ ಮಂಜೂರು ಆಗಿರುವುದು ಅತ್ಯಂತ ಸಂತಸ ತಂದಿದೆ ಈ ಯೋಜನೆಗೆ ಸಹಕರಿಸಿದ ಶಾಸಕರು, ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರಿಗೆ ವಿಶೇಷ ಧನ್ಯವಾದಗಳನ್ನು ಮತ್ತು ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಇಂಜಿನಿಯರ್ ಮಂಜುನಾಥ್ ಅವರು ಮಾತನಾಡಿದ ೨೦೧೮ ರಿಂದಲೂ ಪಟ್ಟಣ ಪಂಚಾಯಿತಿಗೆ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಸೂಕ್ತ ಜಾಗದ ಕೊರತೆ ಇತ್ತು. ಇದೀಗ ಶಾಸಕರು ಹಾಗೂ ಜಿಲ್ಲಾ ಮತ್ತು ತಾಲೂಕು ಆಡಳಿತದ ವಿಶೇಷ ಮುತುವರ್ಜಿಯಿಂದ ಜಾಗ ದೊರೆತಿದ್ದು, ಸ್ಥಳೀಯ ಆಡಳಿತಕ್ಕೆ ನೆರವಾಗಿದೆ. ಇಲ್ಲಿ ಪಟ್ಟಣದಲ್ಲಿ ಉತ್ಪತ್ತಿಯಾಗುವ ಕಸವನ್ನು ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತದೆ. ಇದರ ಮೂಲಕ ಪ್ಲಾಸ್ಟಿಕ್, ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸಂಸ್ಕರಣೆ ಮಾಡಲಾಗುವುದು. ಸಂಸ್ಕರಣೆಯ ಬಳಿಕ ಉತ್ಪತ್ತಿಯಾಗುವ ಗೊಬ್ಬರವನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಂಜುನಾಥ್, ಪರಿಸರ ಅಧಿಕಾರಿ ಚಂದ್ರಶೇಖರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
(Visited 1 times, 1 visits today)





