ಕೊರಟಗೆರೆ: ಕೆಲಸಕ್ಕೆ ಹಾಜರಾಗದೇ ಸಂಬಳ ಪಡೆಯುತ್ತಿದ್ದು, ತನಿಖೆ ಮಾಡದೇ ಸರ್ವ ಸದಸ್ಯರ ಸಭೆ ನಡೆಯಬಾರದು ಎಂದು ಮಾಜಿ ಅಧ್ಯಕ್ಷ ಹಾಗೂ ಸ್ಥಳೀಯ ಮುಖಂಡರ ಆಗ್ರಹ. ಎರಡು ಗುಂಪುಗಳ ಗಲಾಟೆಗೆ ಸರ್ವ ಸದಸ್ಯರ ಸಭೆ ಅರ್ಧಕ್ಕೆ ನಿಂತು ಹೋಗಿರುವ ಘಟನೆ ಮಾವತ್ತೂರು ಗ್ರಾಮದಲ್ಲಿ ಗುರುವಾರ ನಡೆದಿದೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುರುವಾರ ೨೦೨೫-೨೬ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನ ಆಯೋಜನೆ ಮಾಡಲಾಗಿತ್ತು. ಕಳೆದ ಕೆಲವು ವರ್ಷಗಳಿಂದ ಸೊಸೈಟಿಯಲ್ಲಿ ಮಾವತ್ತೂರು ಗ್ರಾಮದಲ್ಲಿ ಎರಡು ಗುಂಪುಗಳಾಗಿ ಸರಿಯಾಗಿ ಕೆಲಸವನ್ನ ಮಾಡದೇ ಗುಂಪುಗಾರಿಕೆ ಮಾಡಿಕೊಂಡು ರೈತರಿಗೆ ಸೇರಬೇಕಾದ ಸರ್ಕಾರದ ಸವಲತ್ತುಗಳು ಅವರ ಕೈಗೆ ಸೇರುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸರ್ವ ಸದಸ್ಯರ ಸಭೆಯಲ್ಲಿ ಮಾಜಿಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ನಡುವೆ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದ್ದು, ಸಭೆಯೇ ರಣರಂಗವಾಗಿ ಮಾರ್ಪಡಿತ್ತು. ಒಂದು ಹಂತಕ್ಕೆ ಕೈ ಕೈ ಮಿಲಾಸುವ ಹಂತಕ್ಕೆ ತಲುಪಿತ್ತು.ಕೋಳಾಲ ಪೋಲಿಸರು ಮದ್ಯ ಪ್ರವೇಶಿಸಿ ಎಲ್ಲರನ್ನ ಸಮಾಧಾನ ಮಾಡಿದರು.
ಗದ್ದಲದ ನಡುವೆಯೇ ಸಭೆ ಮುಂದೂಡಿಕೆ: ಮಾವತ್ತೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಹಾ ಮೋಸದ ಆರೋಪ ಕೇಳಿಬಂದಿದೆ. ಅಮಾಯಕ ನಿರುದ್ಯೋಗಿಗೆ ಕೆಲಸ ಕೊಡಿಸುವ ನೆಪದಲ್ಲಿ ೩ ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ. ಎಂದು ಸಂಘದ ಮಾಜಿ ಅಧ್ಯಕ್ಷರು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ಕಾರ್ಯದರ್ಶಿಯವರು ಒಂದು ವರ್ಷದಿಂದ ಕೆಲಸಕ್ಕೆ ಹಾಜರಾಗದೆ ಲಕ್ಷಾಂತರ ರೂಪಾಯಿ ಸಂಬಳ ಪಡೆದಿದ್ದಾರೆ ಎಂದು ಗಲಾಟೆಯಾದ ಹಿನ್ನಲೇ ಸರ್ವ ಸದಸ್ಯರ ಸಭೆ ಮುಂದೂಡಿದರು.
ಮಾವತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಧನಂಜಯ ಮಾತನಾಡಿ, ಸಂಘದ ಕಾರ್ಯದರ್ಶಿ ತಿಮ್ಮಯ್ಯ ಅವರು ಒಂದು ವರ್ಷದಿಂದ ಕರ್ತವ್ಯಕ್ಕೆ ಹಾಜರಾಗದೆ ಸಂಬಳ ಪಡೆದಿದ್ದಾರೆ. ಇದರ ಜೊತೆಗೆ ಸರ್ಕಾರದ ನಿಯಮಾನುಸಾರ ಇಲ್ಲದೇ ಕಾರ್ಯದರ್ಶಿಯ ಮಗನನ್ನೇ ಕಂಪ್ಯೂಟರ್ ಆಪರೇಟರ್ ಆಗಿ ಆಯ್ಕೆ ಮಾಡಿದ್ದಾರೆ, ಇವೇಲ್ಲವು ತನಿಖೆ ಮಾಡದೆ ಸರ್ವ ಸದಸ್ಯರ ಸಭೆಯನ್ನ ಮಾಡಬಾರದು, ಇವರಿಗೆ ಎಆರ್ ಹಾಗೂ ಡಿಆರ್ ಅವರ ಕುಮ್ಮಕ್ಕು ಇರುವುದರಿಂದ ತನಿಖೆ ಮುಗಿಯವರೆಗೂ ಕಾರ್ಯದರ್ಶಿ ಹಾಗೂ ಮಗನನ್ನ ಕಚೇರಿಯಿಂದ ಹೊರಗಿಟ್ಟು ತನಿಖೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಮಾವತ್ತೂರು ಮಂಜುನಾಥ್ ಮಾತನಾಡಿ, ಈ ಹಿಂದೆ ಅಧ್ಯಕ್ಷನಾಗಿದ್ದ ಧನಂಜಯ ಅವರು ಕಾಲದಲ್ಲಿ ರೈತರಿಗೆ ಸರ್ಕಾರದಿಂದ ಯಾವುದೇ ಸವಲತ್ತು ನೀಡದೇ ಇರುವ ಕಾರಣ ೬ ಜನ ನಿರ್ದೇಶಕರು ರಾಜಿನಾಮೆ ನೀಡಿದ್ದೇವೆ. ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೂಪರ್ ಸೀಡ್ ಆಗಿದ್ದು, ಮಾಜಿ ಅಧ್ಯಕ್ಷ ಅಧಿಕಾರಿಗಳಿಗೆ ಕೆಲಸ ಮಾಡಲು ಬಿಡದೇ ಗಲಾಟೆ ಮಾಡುತ್ತಾರೆ ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ ಮಾತನಾಡಿ ವಿನಾಕಾರಣ ನನಗೆ ಕೆಲಸ ಮಾಡಲು ಬಿಡುತ್ತಿಲ್ಲ. ನಾನು ಯಾವುದೇ ಕಾರಣಕ್ಕೂ ಸಂಘದ ಹಣ ದುರುಪಯೋಗ ಮಾಡಿಕೊಂಡಿಲ್ಲ. ಒಂದು ವೇಳೆ ಆ ತರ ಹಣ ಪಡೆದುಕೊಂಡಲ್ಲಿ ನನ್ನ ಮೇಲೆ ಯಾವುದೇ ಕ್ರಮ ತೆಗೆದುಕೊಂಡರೂ ನಾನು ಸ್ವಿಕರಿಸುತ್ತೇನೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಹೆಚ್.ಸಿ.ತಿಮ್ಮರಾಜು ಮಾತನಾಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ ಅವರು ಜೂನ್ನಿಂದ ಇಲ್ಲಿಯವರೆಗೆ ಅವರು ಸಂಬಳ ತೆಗೆದುಕೊಂಡಿಲ್ಲ. ನಮ್ಮ ಸಹಕಾರ ಸಂಘದಲ್ಲಿ ಯಾವುದೇ ರೀತಿಯ ಅವ್ಯವಹಾರ ನೆಡೆದಿಲ್ಲ. ಇದು ಎರಡು ಗುಂಪುಗಳ ನಡುವೆ ಇರುವ ವೈಮನಸ್ಸಿನಿಂದ ಸಂಘದಲ್ಲಿ ಗಲಾಟೆಯಾಗುತ್ತಿದ್ದು ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಸಂಘದ ನಿರ್ದೇಶಕರು ಹಾಗೂ ರೈತರು ಮುಖಂಡರು ಹಾಜರಿದ್ದರು.
(Visited 1 times, 1 visits today)




