ಹುಳಿಯಾರು: ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯ ನಿಮಿತ್ತ ಹುಳಿಯಾರು ಭಾಗದಲ್ಲಿ ಕೈಗೊಳ್ಳಲಾಗಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮತ್ತು ಇಂಜಿನಿಯರ್ಗಳ ಗೊಂದಲದ ಹಾಗೂ ಬೇಜವಾಬ್ದಾರಿಯ ಧೋರಣೆಯಿಂದ ರೈತರಿಗೆ ತೀವ್ರ ಸ್ವರೂಪದ ಅನ್ಯಾಯವಾಗಿದೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಮುನ್ಸೂಚನೆ ಅಥವಾ ಸಮರ್ಪಕ ಮಾಹಿತಿ ನೀಡದೆ, ರೈತರ ತೋಟಗಳಲ್ಲಿನ ಮರ-ಗಿಡಗಳು ಹಾಗೂ ಬೆಳೆಗಳ ಸಮೀಕ್ಷೆಯಲ್ಲಿ ಭಾರೀ ಲೋಪ ಎಸಗಲಾಗಿದೆ ಎಂದು ಕೃಷಿಕ ಸಮಾಜದ ತಾಲೂಕು ಉಪಾಧ್ಯಕ್ಷ ಎಂ.ಸಿ.ಬಸವರಾಜು ದೂರಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಮರಾಠಿಪಾಳ್ಯ, ಭಟ್ಟರಹಳ್ಳಿ ಜಮೀನು ಸ್ವಾದೀನಕ್ಕೆ ಒಳಪಡುತ್ತದೆ. ಸ್ವಾತಂತ್ರö್ಯ ಬಂದು ಇಷ್ಟು ವರ್ಷಗಳ ನಂತರ ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತಿರುವುದರಿಂದ ಈ ಯೋಜನೆಯನ್ನು ನಾವು ಸ್ವಾಗತಿಸುತ್ತೇವೆ. ಅಲ್ಲದೆ ಈ ಯೋಜನೆಗೆ ಭೂಮಿ ಬಿಟ್ಟುಕೊಡಲು ನಾವು ಸಿದ್ದರಿದ್ದೇವೆ. ಆದರೆ ಭೂಮಿಯ ಬೆಲೆ ಹಾಗೂ ಮರಗಳಿಗೆ ಪರಿಹಾರ ನಿಗದಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಿದರೆ ಮಾತ್ರ ಎಂದು ತಿಳಿಸಿದ್ದಾರೆ.
ಏಳೆಂಟು ವರ್ಷಗಳ ಹಿಂದೆ ಜಮೀನು ಸರ್ವೆಗೆ ಬಂದಿದ್ದಾಗ ಜಮೀನಿನಲ್ಲಿ ದಾಳಿಂಬೆ, ಅಡಿಕೆ, ತೆಂಗು, ನೇರಳೆ, ಮಾವು, ನಿಂಬೆ, ಸೀಬೆ, ಬಾಳೆ ಸೇರಿದಂತೆ ಅನೇಕ ಗಿಡಗಳು ಇದ್ದವು. ಆದರೆ ಅಧಿಕಾರಿಗಳು ಮರಗಳ ಸಂಖ್ಯೆಯನ್ನು ಕಡಿಮೆ ಬರೆದು, ಬೋರ್ವೆಲ್ಗಳು ಮತ್ತು ಪೈಪ್ಲೈನ್ಗಳ ವಿವರಗಳನ್ನು ಕೈಬಿಟ್ಟು ಅನೇಕ ರೈತರಿಗೆ ಅನ್ಯಾಯ ಮಾಡಿದ್ದಾರೆ. ಅಲ್ಲದೆ ಪರಿಹಾರದ ಹಣವನ್ನೂ ಸಹ ಅವೈಜ್ಞಾನಿಕವಾಗಿ ನಮೂದಿಸಿದ್ದಾರೆ. ಒಂದು ಗುಂಟೆ ಜಮೀನಿಗೆ ಮಾರುಕಟ್ಟೆಯಲ್ಲಿ ೬೦ ರಿಂದ ೭೦ ಸಾವಿರ ಇದ್ದು ಇವರು ಮಾತ್ರ ಏಳೆಂಟು ಸಾವಿರ ಪರಿಹಾರ ಘೋಷಿಸಿದ್ದಾರೆ. ಹಾಗಾಗಿ ನಮಗೆ ಪರಿಹಾರದ ಹಣಕ್ಕೆ ಬದಲಾಗಿ ನಾವು ಕಳೆದುಕೊಂಡ ಭೂಮಿಯಷ್ಟೆ ಈಗಿರುವ ಹೈವೆ ರಸ್ತೆಗೆ ಸಮೀಪದಲ್ಲೇ ಬದಲಿ ಭೂಮಿ ಕೊಡಲಿ ಎಂದು ಒತ್ತಾಯಿಸಿದ್ದಾರೆ.
ರೈತ ರಘುಸ್ವಾಮಿ ಡಿ.ಎಸ್. ಮಾತನಾಡಿ ಸರ್ಕಾರಿ ಜಮೀನಿನಲ್ಲಿ ಭದ್ರಾ ಕಾಮಗಾರಿ ನೆಯುವಾಗ “ರೈತರಿಗೆ ಅನುಕೂಲವಾಗಲಿ, ಜಾಗ ಬಿಟ್ಟುಕೊಡಿ, ನಾವೇ ಒಳ್ಳೆ ಬೆಲೆ ಕೊಡುತ್ತೇವೆ” ಎಂದು ಅಧಿಕಾರಿಗಳು ಭರವಸೆ ನೀಡಿ ತಮ್ಮ ಒಡೆತನದ ೧ ಎಕರೆ ೬೬ ಕುಂಟೆ ಜಮೀನಲ್ಲಿನ ಮಾವು, ೫೦ ಹುಣಸೆ ಮರಗಳು, ೪೦೦ ಅಡಿಕೆ ಮರಗಳು, ೫೦ ತೇಗ ಹಾಗೂ ೧೨೦ ತೆಂಗಿನ ಮರಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ಜೆಸಿಬಿ ಬಳಸಿ ನಾಶಪಡಿಸಿದರು. ಅಲ್ಲದೆ ಭೂಮಿಯ ಮಣ್ಣು ಸಹ ಹೊಡೆದುಕೊಂಡರು. ಆದರೆ ೧೯-೧ ನಕ್ಷೆಯಲ್ಲಿ ಈ ಯಾವ ಮರಗಳ ಉಲ್ಲೇಖವನ್ನೂ ಮಾಡದೆ ಎಂಜಿನಿಯರ್ ಶಿವಸ್ವಾಮಿ ಅವರು ಅನ್ಯಾಯವೆಸಗಿದ್ದಾರೆ ಎಂದು ಆರೋಪಿಪಿದರಲ್ಲದೆ ಖುದ್ದಾಗಿ ಬಂದು ನಷ್ಟವಾಗಿರುವ ಮರಗಳನ್ನು ಮತ್ತು ಜಮೀನನ್ನು ಸರಿಪಡಿಸಿಕೊಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮರಾಠಿಪಾಳ್ಯದ ಸಿದ್ದೇಶ್ ಅವರು ಮಾತನಾಡಿ ಮರಾಠಿಪಾಳ್ಯ ಗ್ರಾಮದ ಸರ್ವೆ ನಂ. ೫೮ ರಲ್ಲಿ ಭದ್ರಾ ಚಾನಲ್ ಹೋಗುತ್ತದೆ. ಆದರೆ ಇದುವರೆಗೆ ಯಾವುದೇ ನೋಟೀಸ್ ನೀಡಿಲ್ಲ. ೨೦೨೦-೨೧ ರಲ್ಲಿ ಕೆಲ ಸರ್ವೆ ನಂಬರ್ಗಳಿಗೆ ಪ್ರಾಥಮಿಕ ಹಂತದ ನೋಟೀಸ್ ನೀಡಲಾಗಿದ್ದರೂ, ಕಳೆದ ೫-೬ ವರ್ಷಗಳಿಂದ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಅಲ್ಲದೆ ತೋಟ ಇದ್ದರೂ ಸಹ ತೋಟ ಎಂದು ಪರಿಗಣಿಸದೆ ಕೇವಲ ಖುಷ್ಕಿ ಜಮೀನು ಎಂದು ಲೆಕ್ಕ ಹಾಕಿ ಎಕರೆಗೆ ಕೇವಲ ೩.೨೦ ಲಕ್ಷ ರೂ. ಮಾತ್ರ ಪರಿಹಾರ ನಿಗದಿಪಡಿಸುತ್ತಿದ್ದಾರೆ. ಅಡಿಕೆ ಗಿಡ ಮತ್ತು ಇತರೆ ತೆಂಗಿನ ಮರಗಳಿಗೆ ಕೇವಲ ೨,೦೦೦ ದಿಂದ ೩,೦೦೦ ರೂ. ನೀಡಿ ಕೈ ತೊಳೆದುಕೊಳ್ಳಲಾಗಿದೆ. ೩೦-೪೦ ವರ್ಷಗಳ ಕಾಲ ಬೆಳೆದು ಉತ್ತಮ ಆದಾಯ ತರುವ ಫಲವತ್ತಾದ ಮರಗಳಿಗೆ ಇಷ್ಟು ಕಡಿಮೆ ಬೆಲೆ ನಿಗದಿ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.
ರೈತ ಚಂದ್ರಶೇಖರ್ ಮಾತನಾಡಿ ಸರ್ಕಾರದ ಅಧಿಕಾರಿಗಳು ಸ್ಥಳದಲ್ಲಿ ವಾಸ್ತವಿಕ ಪರಿಶೀಲನೆ ನಡೆಸದೆ, ಕೇವಲ ತಮ್ಮ ಮೊಬೈಲ್ನ ಜಿಪಿಎಸ್ ಆಧಾರದ ಮೇಲೆ ಜಮೀನುಗಳನ್ನು ಅಳತೆ ಮಾಡಿದ್ದಾರೆ. ಆದರೆ ವಾಸ್ತವವಾಗಿ ಬಂದು ನೋಡಿದಾಗ ಜಿಪಿಎಸ್ನಲ್ಲಿ ತೋರಿಸುವ ಜಮೀನು ಬೇರೆಡೆ ಇರುತ್ತದೆ, ಆದರೆ ಪ್ರಾಯೋಗಿಕವಾಗಿ ರೈತರು ಬೇರೆಡೆಯೇ ಇರುತ್ತಾರೆ. ಇಂತಹ ತಾಂತ್ರಿಕ ಹಾಗೂ ಗೊಂದಲಮಯ ಅಳತೆಯಿಂದಾಗಿ ಅಧಿಕಾರಿಗಳು ಬೇರೆ ಯಾರಿಗೋ ನೋಟಿಸ್ ನೀಡುತ್ತಿದ್ದಾರೆ, ಆದರೆ ನಿಜವಾದ ಜಮೀನು ಹೊಂದಿರುವ ಸ್ಥಳೀಯ ರೈತರಿಗೆ ಯಾವುದೇ ನೋಟಿಸ್ ಸಿಕ್ಕಿಲ್ಲ. ಇದರಿಂದ ಅರ್ಹ ರೈತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ರೈತ ಭಟ್ಟರಹಳ್ಳಿ ಕಾಂತರಾಜು ಮಾತನಾಡಿ ಸರ್ವೇ ನಂಬರ್ ೧೦೧ ರಲ್ಲಿ ೩ ಎಕರೆ ಜಮೀನು ಹೊಂದಿದ್ದು ನಮ್ಮ ಜಮೀನಿನಲ್ಲಿ ೬೬ ತೆಂಗಿನ ಮರಗಳು ಹಾಗೂ ೮೦೦ ದಾಳಿಂಬೆ ಗಿಡಗಳಿದ್ದವು. ಆದರೆ ಅಧಿಕಾರಿಗಳು ಕೇವಲ ೬೦ ತೆಂಗಿನ ಮರಗಳು ಮತ್ತು ೧೫೦ ದಾಳಿಂಬೆ ಗಿಡಗಳನ್ನು ಮಾತ್ರ ನಮೂದಿಸಿದ್ದಾರೆ. ಹುಣಸೆ, ಬೇವು ಮರಗಳನ್ನು ಪಟ್ಟಿಯಲ್ಲಿ ನಮೂದಿಸದೆ ಬಿಡಲಾಗಿದೆ. ಜಮೀನಿನಲ್ಲಿ ಎರಡು ಬೋರ್ವೆಲ್ಗಳಿದ್ದು ಒಂದನ್ನು ಮಾತ್ರ ನಮೂದಿಸಿದ್ದಾರೆ. ಈ ಭೂಮಿಯನ್ನೇ ನಂಬಿ ನಾವು ಬದುಕು ಕಟ್ಟಿಕೊಂಡಿದ್ದು ಇತ್ತ ಭೂಮಿಯನ್ನೂ ಕಿತ್ತು ಕೊಂಡು ಅತ್ತ ಸರಿಯಾದ ಪರಿಹಾರವನ್ನೂ ಕೊಡದೆ ಅನ್ಯಾಯ ಮಾಡಿದ್ದಾರೆ. ಇದರಿಂದ ನಮ್ಮ ಜೀವನ ನಡೆಸುವುದು ಬಹಳ ಕಷ್ಟವಾಗಿದೆ. ಈ ಜಮೀನು ಬಿಟ್ಟರೆ ನಮ್ಮ ಬಳಿ ಬೇರೆ ಯಾವುದೇ ಜಮೀನು ಇಲ್ಲ. ಆದ್ದರಿಂದ ಸಂಬAಧಪಟ್ಟ ಅಧಿಕಾರಿಗಳು ದಯವಿಟ್ಟು ಇದನ್ನು ಪರಿಗಣಿಸಿ, ನಮ್ಮ ಜಮೀನಿನ ಮರ-ಗಿಡಗಳನ್ನು ಸರಿಯಾಗಿ ನಮೂದಿಸಿ ನಮಗೆ ಸೂಕ್ತ ಮತ್ತು ನ್ಯಾಯಯುತ ಪರಿಹಾರ ಕಲ್ಪಿಸಿಕೊಡಬೇಕಾಗಿ ಮನವಿ ಮಾಡಿದ್ದಾರೆ.
ಕಣ್ಣಾರೆ ನೋಡಿ ನಮ್ಮ ಜಮೀನಿನ ನೈಜ ಸ್ಥಿತಿಯನ್ನು ಪರಿಗಣಿಸಿ ಸರಿಪಡಿಸಿಕೊಡುವಂತೆ ಮನವಿ ಮಾಡಿದರು.
ಸಿದ್ಧರಾಮಯ್ಯ, ಎಂ.ವಿ.ಹಟ್ಟಿ ಚಂದ್ರು, ಕೋರಗೆರೆ ರಾಜು, ಯಳನಾಡು ವೇದಮೂರ್ತಿ, ಮಲ್ಲಮುನಿ ಮಲ್ಲಿಕಾರ್ಜುನ್ ಸೇರಿದಂತೆ ಅನೇಕ ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
(Visited 1 times, 1 visits today)





