ತುಮಕೂರು: ನಗರದ ಅಮಾನಿಕೆರೆ ಗಾಜಿನ ಮನೆ ಆವರಣದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ, ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ, ಸಂವಿಧಾನ ರಕ್ಷಣಾ ಕ್ರಾಂತಿ ಸೇನೆ ವೇದಿಕೆ ಹಾಗೂ ಅಖಿಲ ಕರ್ನಾಟಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಇಂದು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷರು ಎನ್. ಕೆ ನಿಧಿಕುಮಾರ್ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದೊಂದಿಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೂ ಪುಷ್ಪನಮನ ಸಲ್ಲಿಸುವುದರ ಮೂಲಕ ವಿಶೇಷವಾದ ರೀತಿಯಲ್ಲಿ ಆಚರಣೆಯನ್ನು ಮಾಡಲಾಯಿತು.
ಕಾರ್ಯಕ್ರಮದ ಕುರಿತು ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ ರಾಜಧರ್ಮ ಮತ್ತು ನೀತಿಶಾಸ್ತ್ರದ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹರ್ಷಿ ವಾಲ್ಮೀಕಿ ಮಹಾನ್ ದಾರ್ಶನಿಕರು ಸಹನೆ ಸಹಿಷ್ಣುತೆ ಮತ್ತು ಪ್ರೀತಿಯನ್ನು ಬದುಕಿನ ತತ್ವವನ್ನಾಗಿಸಿಕೊಂಡರೆ ಯಾವುದೇ ವ್ಯಕ್ತಿಯೂ ಮಹಾನ್ ಸಾಧಕನಾಗಬಲ್ಲ ಎಂಬುದಕ್ಕೆ ಅವರ ಜೀವನವೇ ಪ್ರೇರಣಾದಾಯಕ ಉದಾಹರಣೆಯಾಗಿದೆ. ಭಾರತದ ಅತ್ಯಂತ ಶ್ರೇಷ್ಠ ಹಾಗೂ ಮಹಾಗ್ರಂಥವನ್ನು ರಚಿಸಿ, ಅರ್ಪಿಸಿದ ಮಹರ್ಷಿ ವಾಲ್ಮೀಕಿರವರ ಬದುಕು ನಮಗೆಲ್ಲ ಸ್ಫೂರ್ತಿಯ ಸೆಲೆ ಅವರ ಸಾಹಿತ್ಯವು ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಅಮೂಲ್ಯ ದಾಖಲೆಯಾಗಿದ್ದರೆ, ನವಭಾರತದ ಪವಿತ್ರಗ್ರಂಥವೆಂದು ಪರಿಗಣಿಸಲ್ಪಡುತ್ತಿರುವ ಸಂವಿಧಾನವನ್ನು ಭಾರತಕ್ಕೆ ನೀಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಹ ನಮಗೆ ಪ್ರಾತಃಸ್ಮರಣೀಯರು ಅದಕ್ಕಾಗಿ ಇಂದು ನಾವು ವಾಲ್ಮೀಕಿ ಅವರ ಭಾವಚಿತ್ರದ ಜೊತೆಗೆ ಬಾಬಾ ಸಾಹೇಬರ ಭಾವಚಿತ್ರಕ್ಕೂ ಪುಷ್ಪನಮನ ಸಲ್ಲಿಸುವುದರ ಮೂಲಕ ವಿಶೇಷವಾದ ರೀತಿಯಲ್ಲಿ ನಾವು ಆಚರಣೆಯನ್ನು ಮಾಡುತ್ತಿದ್ದೇವೆಂದು ತಿಳಿಸಿದರು.
ಸಂವಿಧಾನ ರಕ್ಷಣಾ ಕ್ರಾಂತಿ ವೇದಿಕೆ ರಾಜ್ಯ ಅಧ್ಯಕ್ಷರಾದ ಪ್ರಕಾಶ್ ಹೆಚ್.ಪಿ ಮಾತನಾಡುತ್ತ ಮಹಾಕಾವ್ಯ ರಾಮಾಯಣವನ್ನು ಲೋಕಕ್ಕೆ ಕೊಡುಗೆಯಾಗಿ ನೀಡಿ, ಮಾನವೀಯತೆಯ ಮಹೋನ್ನತ ಮೌಲ್ಯಗಳನ್ನು ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಉಪದೇಶ ಹಾಗೂ ಪ್ರಭು ಶ್ರೀರಾಮನ ಆದರ್ಶ ಸರ್ವರಿಗೂ ಪ್ರೇರಣೆಯಾಗಲಿ ಮಹರ್ಷಿ ವಾಲ್ಮೀಕಿಯ ಜ್ಞಾನಜ್ಯೋತಿ ಮತ್ತು ತಪಸ್ಸಿನ ಪ್ರಭಾವವು ಪ್ರತಿಯೊಬ್ಬರ ಜೀವನದಲ್ಲೂ ಶಾಂತಿ ಸನ್ಮಾರ್ಗ ಹಾಗೂ ಸಮೃದ್ಧಿಯನ್ನು ತರಲಿ ಎಂದು ನುಡಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಇಂದ್ರಕುಮಾರ್ ಡಿ.ಕೆ ಮಾತನಾಡುತ್ತಾ ಬೇಡನಾಗಿ ಹುಟ್ಟಿ, ಕಠಿಣ ತಪಸ್ಸು ಮತ್ತು ಆತ್ಮಸಾಕ್ಷಾತ್ಕಾರದ ಮೂಲಕ ಮಹರ್ಷಿಯಾಗಿ ಪರಿವರ್ತನೆಯಾದ ವಾಲ್ಮೀಕಿಯವರ ಜೀವನವೇ ಮಾನವಕುಲಕ್ಕೆ ದೊಡ್ಡ ದಾರಿದೀಪ, ಶ್ರಮ, ಜ್ಞಾನ ಮತ್ತು ಸಂಕಲ್ಪ ಬಲದಿಂದ ಯಾವುದೇ ವ್ಯಕ್ತಿಯು ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂಬುದಕ್ಕೆ ಅವರೇ ಜೀವಂತ ನಿದರ್ಶನ ವಾಲ್ಮೀಕಿ ಸಮುದಾಯ ಸೇರಿದಂತೆ ಸಮಾಜದ ಪ್ರತಿಯೊಂದು ದುರ್ಬಲ ಹಿಂದುಳಿದ ಮತ್ತು ಪರಿಶಿಷ್ಟ ವರ್ಗಗಳ ಶೈಕ್ಷಣಿಕ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ನಮ್ಮ ನಮ್ಮ ಸಂಘಟನೆ ಬದ್ಧವಾಗಿದೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಅಧ್ಯಕ್ಷರು ಹಾಗೂ ಉಪ ವಿಭಾಗ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರಾದ ರಾಮಾಂಜನೇಯ ಮಾತನಾಡುತ್ತಾ ಇಂದಿನ ಯುವಕರೇ ನಾಳಿನ ದೇಶದ ಭವಿಷ್ಯ ಯುವಶಕ್ತಿಯೇ ರಾಷ್ಟ್ರದ ನಿಜವಾದ ಸಂಪತ್ತು ಯುವಕರಲ್ಲಿ ಶಿಕ್ಷಣ ವೈಚಾರಿಕತೆ ವೈಜ್ಞಾನಿಕ ಮನೋಭಾವ ಸಾಮಾಜಿಕ ಜವಾಬ್ದಾರಿ ಮತ್ತು ಸಂವಿಧಾನಿಕ ಮೌಲ್ಯಗಳನ್ನು ಬೆಳೆಸಿದಾಗ ಮಾತ್ರ ಸಮಾನತೆ, ಸ್ವಾತಂತ್ರ್ಯ ನ್ಯಾಯ ಮತ್ತು ಸಹೋದರತ್ವದ ಸಮಾಜ ನಿರ್ಮಾಣ ಸಾಧ್ಯ. ಯುವಕರು ಮೂಢನಂಬಿಕೆ, ಜಾತಿವಾದ, ಧರ್ಮಾಂಧತೆ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಕೇವಲ ಉದ್ಯೋಗ ಪಡೆಯುವುದಷ್ಟೇ ಯುವಕರ ಗುರಿಯಾಗಬಾರದು ಸಮಾಜದಲ್ಲಿನ ಅಸಮಾನತೆಗಳನ್ನು ಪ್ರಶ್ನಿಸಿ ಶೋಷಿತರ ಧ್ವನಿಯಾಗಿ ಪ್ರಜಾಪ್ರಭುತ್ವದ ರಕ್ಷಕರಾಗಿ ಬೆಳೆಯಬೇಕು. ಯುವಕರ ಕೈಯಲ್ಲಿ ಪುಸ್ತಕವಿದ್ದರೆ ಜ್ಞಾನ ಬೆಳೆಯುತ್ತದೆ ಮನಸ್ಸಿನಲ್ಲಿ ವೈಚಾರಿಕತೆಯಿದ್ದರೆ ಬದಲಾವಣೆ ಸಾಧ್ಯವಾಗುತ್ತದೆ ಹೃದಯದಲ್ಲಿ ಮಾನವೀಯತೆಯಿದ್ದರೆ ಸಮಸಮಾಜ ನಿರ್ಮಾಣವಾಗುತ್ತದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷರು ಎನ್. ಕೆ ನಿಧಿಕುಮಾರ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯ ಉಪಾಧ್ಯಕ್ಷರು ಇಂದ್ರಕುಮಾರ್ ಡಿ.ಕೆ, ಸಂವಿಧಾನ ರಕ್ಷಣಾ ಕ್ರಾಂತಿ ವೇದಿಕೆ ರಾಜ್ಯದ್ಯಕ್ಷರು ಪ್ರಕಾಶ್ ಹೆಚ್.ಪಿ, ಅಖಿಲ ಕರ್ನಾಟಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಅಧ್ಯಕ್ಷರು ರಾಮಾಂಜನೇಯ, ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯರಾದ ಗೋವಿಂದರಾಜ್ ಕೆ, ಮುಖಂಡರುಗಳಾದ ಟೈಲರ್ ಜಗದೀಶ್, ಶ್ರೀನಿವಾಸ್ ದಿಬ್ಬೂರು, ನರಸಿಂಹ, ರಾಮಚಂದ್ರ ದಿಬ್ಬೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
(Visited 1 times, 1 visits today)



