ಹುಳಿಯಾರು: ಹುಳಿಯಾರು ಹೋಬಳಿಯ ದಸೂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರೆನಡು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು ಬೇಸತ್ತ ಗ್ರಾಮಸ್ಥರು ಹಾಗೂ ಮಹಿಳೆಯರು ಖಾಲಿ ಬಿಂದಿಗೆಗಳೊಂದಿಗೆ ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಮರೆನಾಡು ಗ್ರಾಮದಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಕುಡಿಯುವ ನೀರಿನ ಪೂರೈಕೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪಂಚಾಯತ್ ವತಿಯಿಂದಾಗಲಿ ಟ್ಯಾಂಕರ್ ಮುಖಾಂತರವಾಗಲಿ ನಿಯಮಿತವಾಗಿ ನೀರು ಸರಬರಾಜು ಮಾಡುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಸ್ಯೆಯ ಕುರಿತು ಪಿಡಿಒ, ತಹಸೀಲ್ದಾರ್ ಹಾಗೂ ಜನಪ್ರತಿನಿಧಿಗಳಿಗೆ ಕರೆ ಮಾಡಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಂಚಾಯ್ತಿ ಸಿಬ್ಬಂದಿಯಂತೂ ಫೋನ್ ಸ್ವೀಕರಿಸುವುದಿಲ್ಲ ಮತ್ತು ಸ್ಪಂದಿಸುವುದಿಲ್ಲ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಮನೆ ಕೆಲಸಗಳನ್ನು ಬಿಟ್ಟು ದೂರದೂರುಗಳಿಂದ ನೀರನ್ನು ಹೊತ್ತು ತರಬೇಕಾದ ದುಸ್ಥಿತಿ ನಿರ್ಮಾಣವಾಗಿದ್ದು, ಬಡವರು ಕೂಲಿಗೆ ಹೋದರೆ ನೀರಿಲ್ಲ, ನೀರಿಗೆ ಹೋದರೆ ಕೂಲಿ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು ಎಲ್ಲಿಗೆ ಹೋಗಿ ನೀರು ತರಬೇಕು ಎಂದು ಮಹಿಳೆಯರು ಪ್ರಶ್ನಿಸಿದರು.
ಘಟನಾ ಸ್ಥಳಕ್ಕೆ ಆಗಮಿಸಿದ ಪಿಡಿಓ ಮುದ್ದಲಿಂಗಯ್ಯ ಅವರು ಈಗಿರುವ ಕೊಳವೆಬಾವಿಯಲ್ಲಿ ಅಂತರ್ಜಲ ಕಡಿಮೆಯಾಗಿದ್ದು ಮತ್ತೆರಡು ಲೆಂತ್ ಪೈಪ್ ಬಿಟ್ಟು ನೀರು ಹೊರತಂದು ಪೂರೈಕೆ ಮಾಡಲಾಗುವುದು. ಅಲ್ಲಿಯವರೆವಿಗೆ ಶನಿವಾರದಿಂದಲೇ ನೀರಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿ ಗ್ರಾಮಸ್ಥಳ ಮನವೊಲಿಸಿದರು.
(Visited 1 times, 1 visits today)



