ಕೊರಟಗೆರೆ: ಕನ್ನಡ ಚಿತ್ರರಂಗದ ಪವರ್ ಸ್ಟಾರ್, ದಿವಂಗತ ಪುನೀತ್ ರಾಜ್‍ಕುಮಾರ್ ಅವರ ಐದನೇ ವರ್ಷದ ಪುಣ್ಯಸ್ಮರಣೆಯನ್ನು ಪಟ್ಟಣದ ಅಪ್ಪು ಸರ್ಕಲ್‍ನಲ್ಲಿ ಸಂಜೀವಿನಿ ಗೆಳೆಯರ ಬಳಗದ ವತಿಯಿಂದ ಭಾವಪೂರ್ಣವಾಗಿ ಆಚರಿಸಲಾಯಿತು.
ಪಟ್ಟಣದ ಅಪ್ಪು ಸರ್ಕಲ್‍ನಲ್ಲಿ ಸ್ಥಾಪಿಸಲಾಗಿರುವ ಪುನೀತ್ ರಾಜ್‍ಕುಮಾರ್ ಅವರ ಪ್ರತಿಮೆಗೆ ಅಭಿಮಾನಿಗಳು ಪುಷ್ಪನಮನ ಸಲ್ಲಿಸಿ, ಪೂಜೆ ನೆರವೇರಿಸುವ ಮೂಲಕ ನೆಚ್ಚಿನ ನಟನಿಗೆ ಗೌರವ ಸಮರ್ಪಿಸಿದರು. ಬಳಿಕ ಆಗಮಿಸಿದ್ದ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಅಪ್ಪು ಅಭಿಮಾನಿ ರಾಕೇಶ್ ಮಾತನಾಡಿ, ಪುನೀತ್ ರಾಜ್‍ಕುಮಾರ್ ಅವರು ಕೇವಲ ನಟನಾಗಿ ಗುರುತಿಸಿಕೊಂಡವರಲ್ಲ. ತಮ್ಮ ಸರಳ ವ್ಯಕ್ತಿತ್ವ, ಮಾನವೀಯ ಗುಣಗಳು ಹಾಗೂ ಸಮಾಜಮುಖಿ ಸೇವೆಯ ಮೂಲಕ ಕೋಟ್ಯಂತರ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಪ್ಪು ನಮ್ಮೊಂದಿಗಿಲ್ಲ ಎಂಬ ನೋವಿದ್ದರೂ, ಅವರ ನೆನಪು ಸದಾ ನಮ್ಮ ಹೃದಯದಲ್ಲಿರುತ್ತದೆ ಎಂದರು.
ಮತ್ತೊಬ್ಬ ಅಭಿಮಾನಿ ಮಾಸ್ಟರ್ ಸತೀಶ್ ಮಾತನಾಡಿ, ಪುನೀತ್ ರಾಜ್‍ಕುಮಾರ್ ಅವರ ಚಿತ್ರಗಳು ಇಂದಿಗೂ ಅಭಿಮಾನಿಗಳಿಗೆ ಸಂತೋಷ ನೀಡುತ್ತಿವೆ. ಅವರ ನಗು, ಸರಳತೆ ಮತ್ತು ಉತ್ತಮ ಸಂದೇಶಗಳು ಯುವಜನತೆಗೆ ಪ್ರೇರಣೆಯಾಗಿವೆ. ಅಪ್ಪು ಅವರ ಹೆಸರಿನಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ಅವರ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ಮುಂದಿನ ಪೀಳಿಗೆಗೂ ಪರಿಚಯಿಸುತ್ತವೆ ಎಂದು ಹೇಳಿದರು.
ರಾಜ್‍ಕುಮಾರ್ ಅಭಿಮಾನಿ ಶಂಕರಣ್ಣ ಮಾತನಾಡಿ, ಡಾ. ರಾಜ್‍ಕುಮಾರ್ ಅವರ ಕುಟುಂಬ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದೆ. ಅದೇ ಪರಂಪರೆಯಲ್ಲಿ ಬೆಳೆದ ಪುನೀತ್ ರಾಜ್‍ಕುಮಾರ್ ಅವರು ತಮ್ಮ ನಟನೆ ಮತ್ತು ಸಮಾಜಸೇವೆಯ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಅವರ ಆದರ್ಶಗಳು ಎಂದೆಂದಿಗೂ ಜೀವಂತವಾಗಿರಲಿವೆ ಎಂದು ತಿಳಿಸಿದರು.
ಮತ್ತೊಬ್ಬ ಅಭಿಮಾನಿ ರಮೇಶ್ ಮಾತನಾಡಿ, ಅಪ್ಪು ಅವರ ಅಗಲಿಕೆ ಕನ್ನಡಿಗರಿಗೆ ತುಂಬಲಾರದ ನಷ್ಟ. ಆದರೆ ಅವರು ಬಿಟ್ಟುಹೋದ ಪ್ರೀತಿ, ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳು ಎಂದಿಗೂ ಅಳಿಯುವುದಿಲ್ಲ. ಅವರ ಸ್ಮರಣೆಯನ್ನು ಆಚರಿಸುವುದಷ್ಟೇ ಅಲ್ಲದೆ, ಅವರ ಆದರ್ಶದಂತೆ ಸಮಾಜಕ್ಕೆ ನೆರವಾಗುವ ಕೆಲಸಗಳನ್ನು ಮಾಡುವುದು ನಿಜವಾದ ಗೌರವವಾಗಿದೆ ಎಂದರು.
ಈ ಸಂದರ್ಭದಲ್ಲಿ ಅಭಿಮಾನಿಗಳಾದ ಭೀಮರಾಜು, ಹರೀಶ್, ಕಿರಣ್ ಕುಮಾರ್, ಶ್ರೀನಿವಾಸ್, ಸರ್ವೆ ರಘು, ಸಂತೋಷ್, ಪ್ರಕಾಶ್ ಸರ್ವೆ, ಅಖಿಲೇಶ್, ರಾಜು, ಪಿಟಿ ಮಾಸ್ಟರ್ ಶ್ರೀನಿವಾಸ್, ಕಾಂತರಾಜು, ಕಿರಣ್ ಸೇರಿದಂತೆ ಅನೇಕ ಅಭಿಮಾನಿಗಳಿ ದ್ದರು.
ಅಪ್ಪು ದೈಹಿಕವಾಗಿ ದೂರವಾದರೂ, ಕನ್ನಡಿಗರ ಹೃದಯದಲ್ಲಿ ಸದಾ ಜೀವಂತ ಎಂಬ ಭಾವನೆಯೊಂದಿಗೆ ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಅವರನ್ನು ಸ್ಮರಿಸಿದರು.

(Visited 1 times, 1 visits today)