ತುಮಕೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಭಾಷಾಂತರವು ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಪತ್ರಿಕೋದ್ಯಮದಲ್ಲಿ ಭಾಷಾಂತರ ಕೌಶಲ್ಯ ಪ್ರಮುಖವಾದದ್ದು. ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿಯೇ ತಮ್ಮ ಬರವಣಿಗೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ನಿರಂತರ ಓದು ಮತ್ತು ಬರವಣಿಗೆಯ ಅಭ್ಯಾಸದ ಮೂಲಕ ಉತ್ತಮ ಪತ್ರಕರ್ತರಾಗಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಪತ್ರಕರ್ತ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ ಧನಂಜಯ ಆರ್. ಮಧು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಅ.30ರ ಶುಕ್ರವಾರ ದಂದು ಆಯೋಜಿಸಿದ್ದ ಭಾಷಾಂತರ ದಿನಾಚರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವುದು ಹಲವು ಸವಾಲುಗಳಿಂದ ಕೂಡಿದೆ. ಪ್ರತಿದಿನ ಬದಲಾಗುವ ವಿದ್ಯಮಾನಗಳು, ಹೊಸ ಬೆಳವಣಿಗೆಗಳು ಹಾಗೂ ತಂತ್ರಜ್ಞಾನದ ಅಪ್‍ಡೇಟ್‍ಗಳನ್ನು ತಿಳಿದುಕೊಳ್ಳುವುದು ಪತ್ರಕರ್ತರಿಗೆ ಅತ್ಯಗತ್ಯ. ಬರವಣಿಗೆಯ ಜೊತೆಗೆ ವಿಷಯವನ್ನು ಗ್ರಹಿಸುವ ಮತ್ತು ಅದನ್ನು ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಣಿ ಮಾತನಾಡಿ, ಭಾಷಾಂತರ ಇಲ್ಲದಿದ್ದರೆ ಜಗತ್ತಿನಲ್ಲಿ ಸಂವಹನದ ಕೊರತೆ ಉಂಟಾಗುತ್ತಿತ್ತು. ಪತ್ರಿಕೋದ್ಯಮದಲ್ಲಿ ವಿಭಿನ್ನ ಆಕರ್ಷಣೆಯ ಜೊತೆಗೆ ಸವಾಲುಗಳೂ ಇವೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಉತ್ತಮ ಗೌರವವೂ ದೊರೆಯುತ್ತದೆ. ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿದ ತಕ್ಷಣ ಶಿಕ್ಷಣ ಮೊಟಕುಗೊಳಿಸದೆ, ಉನ್ನತ ಶಿಕ್ಷಣದತ್ತ ಗಮನಹರಿಸಿ ಸ್ನಾತಕೋತ್ತರ ಪದವಿಗಳನ್ನು ಪಡೆಯಬೇಕು ಎಂದರು.
ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷರಾದ ಡಾ. ಸಿಬಂತಿ ಪದ್ಮನಾಭ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಪತ್ರಿಕೋದ್ಯಮದಲ್ಲಿ ವಿದ್ಯಾರ್ಥಿಗಳಿಗೆ ಭಾಷಾಂತರ ಕೌಶಲ್ಯ ಅತ್ಯಗತ್ಯವಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬೆಳೆಯುತ್ತಿದ್ದರೂ ಮನುಷ್ಯನ ಸೃಜನಶೀಲತೆ ಮತ್ತು ಕೌಶಲ್ಯಕ್ಕೆ ವಿಶೇಷ ಮಹತ್ವವಿದೆ. ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ, ಅದರಲ್ಲೂ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವುದು ಹೆಮ್ಮೆಯ ಸಂಗತಿ ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿಭಾಗದ ಉಪನ್ಯಾಸಕರಾದ ಡಾ. ಗಿರಿಜಮ್ಮ ಜಿ., ರವಿಕುಮಾರ್ ಎಂ.ಬಿ., ತನುಶ್ರೀ ಬಿ.ಆರ್. ಹಾಗೂ ಶರಣಪ್ಪ ಉಪಸ್ಥಿತರಿದ್ದರು.

(Visited 1 times, 1 visits today)