ತುಮಕೂರು: ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ದಾಖಲೆ ಸಲ್ಲಿಕೆ ಹಾಗೂ ತಪಾಸಣೆ ಸಂಬಂಧ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಹೊರಡಿಸಿರುವ ಜ್ಞಾಪನಾ ಪತ್ರ ಮತ್ತು ಸುತ್ತೋಲೆಯನ್ನು ಹಿಂಪಡೆಯುವಂತೆ ಆಗ್ರಹಿಸಿ, ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಜಿಲ್ಲಾ ಘಟಕದಿಂದ ಮುಖ್ಯಮಂತ್ರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಅ.27 ರಂದು ಜ್ಞಾಪನಾ ಪತ್ರ ಹಾಗೂ ಅ.28 ರಂದು ಸುತ್ತೋಲೆ ಹೊರಡಿಸಿ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ದಾಖಲೆಗಳನ್ನು ಸಲ್ಲಿಸುವಂತೆ ಹಾಗೂ ಪತ್ರಿಕೆಗಳ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಮಟ್ಟದ ವಾರ್ತಾಧಿಕಾರಿಗಳಿಗೆ ಸೂಚನೆ ನೀಡಿರುವುದು ಪತ್ರಿಕೆಗಳ ಅಸ್ತಿತ್ವಕ್ಕೆ ಮಾರಕವಾಗುವ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಆದೇಶ ಹಾಗೂ ಜ್ಞಾಪನಾ ಪತ್ರವನ್ನು ಹಿಂಪಡೆಯುವಂತೆ ಸಂಘ ಒತ್ತಾಯಿಸಿದೆ.
ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತ್ರಾಜ್ ಅವರ ಮೂಲಕವೂ ಸಹ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಕೃಷ್ಣಮೂರ್ತಿ, ರಾಜ್ಯ ಜಂಟಿ ಕಾರ್ಯದರ್ಶಿ ಸಿ. ರಂಗನಾಥ, ಜಿಲ್ಲಾಧ್ಯಕ್ಷ ಕರುಣಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್. ಮಂಜುನಾಥಗೌಡ, ಜಿಲ್ಲಾ ಉಪಾಧ್ಯಕ್ಷ ಪಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಸಂಘಟನಾ ಕಾರ್ಯದರ್ಶಿ ಸಿ.ಎನ್. ಮಹೇಶ್ಕುಮಾರ್, ಸಂಪಾದಕರಾದ ಮಾರುತಿ ಗಂಗಹನುಮಯ್ಯ, ಸಿ. ಜಯಣ್ಣ, ಇಂತಿಯಾಜ್ ಅಹ್ಮದ್, ರವಿಕುಮಾರ್, ಚಿಕ್ಕಣ್ಣ, ಸುರೇಶ್, ಸಂತೋಷ್ ಎಂ.ಕೆ. ಸೇರಿದಂತೆ ಹಲವು ಪತ್ರಿಕಾ ಸಂಪಾದಕರು ಉಪಸ್ಥಿತರಿದ್ದರು.
(Visited 1 times, 1 visits today)



