ತುಮಕೂರು: ನಶ್ವರವಾದ ಈ ಜಗತ್ತಿನಲ್ಲಿ ಎಲ್ಲವೂ ಬದಲಾಗುತ್ತಲೇ ಇರುತ್ತವೆ. ಆದರೆ, ಈ ಬದಲಾವಣೆಯ ನಡುವೆಯೂ ಶಾಶ್ವತವಾಗಿ ಉಳಿಯುವಂತದ್ದೇ ಪಂಚತತ್ವ. ತತ್ವಪದಗಳನ್ನು ಕೇವಲ ಶೈಕ್ಷಣಿಕ ಅಧ್ಯಯನದ ದೃಷ್ಟಿಯಿಂದ ಮಾತ್ರ ನೋಡದೆ, ನಿತ್ಯ ಜೀವನಕ್ಕೆ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಓದಬೇಕು.ಬದುಕಿಗೆ ಆಳವಾದ ಅರ್ಥವನ್ನು ಕೊಡುವುದೇ ತತ್ವಪದಗಳ ಲಕ್ಷ್ಯ ಎಂದು ಹಿರಿಯ ವಿದ್ವಾಂಸ ಹಾಗೂ ಕವಿ ಎಚ್.ಎಸ್. ಶಿವಪ್ರಕಾಶ್ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಸಂತ ಶಿಶುನಾಳ ಶರೀಫ ಅಧ್ಯಯನ ಪೀಠದ ವತಿಯಿಂದ ನ.13 ರಂದು ಶುಕ್ರವಾರದಂದು ಆಯೋಜಿಸಿದ್ದ ಸಂತ ಶಿಶುನಾಳ ಶರೀಫ ಮತ್ತು ತತ್ವಪದಕಾರರು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಚನಕಾರರದ್ದು ಒಂದು ಪಂಥ, ಹರಿದಾಸರದ್ದು ಮತ್ತೊಂದು ಪಂಥ, ಆದರೆ ತತ್ವಪದಕಾರರಿಗೆ ಯಾವುದೇ ನಿರ್ದಿಷ್ಟ ಪಂಥವಿಲ್ಲ. ಜಾತಿ ನಿವಾರಣೆಯಲ್ಲಿ ತತ್ವಪದಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅನೇಕತೆಯಲ್ಲಿ ಏಕತೆಯನ್ನು ಸಾರುವ ಕೆಲಸವನ್ನು ಅವು ಮಾಡಿವೆ. ಬದುಕಿಗೆ ಆಳವಾದ ಅರ್ಥವನ್ನು ಕಲ್ಪಿಸುವುದೇ ತತ್ವಪದಗಳ ಮೂಲ ಲಕ್ಷ್ಯವಾಗಿದೆ ಎಂದರು.
ತತ್ವಪದಗಳ ಪರಿಭಾಷೆಯಲ್ಲಿ ಸ್ವರ ಎಂದರೆ ಸದಾ ಉಸಿರು ಎಂದರ್ಥ. ಅನುಭವದ ಅನೇಕ ಸಂಗತಿಗಳನ್ನು ವಾಕ್ ರೂಪದಲ್ಲಿ ನಮಗೆ ತಲುಪಿಸುವುದೇ ಅನುಭಾವ. ಸತ್ಸಂಗವೇ ತತ್ವಪದಗಳ ನಿಜವಾದ ಸಂದರ್ಭ. ಯಾವುದು ಸ್ಮರಣೆಯ ಹಂಗಿಲ್ಲದೆ ಇರುತ್ತದೆಯೋ ಅದೇ ನಮ್ಮ ಅನುಭವವನ್ನು ನಿಯಂತ್ರಿಸುತ್ತದೆ. ಪುಸ್ತಕ ಪರಂಪರೆ ನಿಂತ ನೀರಾಗಿದ್ದರೆ, ವಾಕ್ ಪರಂಪರೆ ನಿರಂತರವಾದ ಪ್ರಕ್ರಿಯೆ ಎಂದರು.
ಬುದ್ಧ ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿದರೆ, ತತ್ವಪದಗಳು ಆನಂದ ಹಾಗೂ ಕ್ಷಣಿಕತೆಯೇ ದುಃಖಕ್ಕೆ ಮೂಲ ಎಂಬ ಸತ್ಯವನ್ನು ಸಾರಿವೆ. ಇಂದಿನ ಆಧುನಿಕತೆಗೆ ತಕ್ಕಂತೆ ದೇವಾಲಯಗಳ ಆವರಣದ ಆಕಾರಗಳು 5 ಸ್ಟಾರ್, 7 ಸ್ಟಾರ್ ಹೋಟೆಲ್ಗಳಂತೆ ಬದಲಾಗಿವೆ. ಆದರೆ, ಹಿಂದೆ ಇದ್ದ ದೇವಾಲಯಗಳ ಆಧ್ಯಾತ್ಮಿಕ ವಾತಾವರಣ ಮತ್ತು ಭಕ್ತಿಯ ಭಾವ ಇಂದು ಮರೆಯಾಗುತ್ತಿದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಎಚ್.ಎಸ್. ಮೋಹನ ಮಾತನಾಡಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಸಾಹತುಶಾಹಿ ಪ್ರಭಾವಗಳು ಪ್ರವೇಶಿಸಿದ ಸಂದರ್ಭದಲ್ಲಿ ಅವುಗಳನ್ನು ಅಳವಡಿಸಿಕೊಂಡು ಮುನ್ನಡೆಯುವಲ್ಲಿ ತತ್ವಪದಕಾರರು ವಿಫಲರಾದರು. ಇದರ ಪರಿಣಾಮವಾಗಿ ತತ್ವಪದಗಳ ಕುರಿತ ಚರ್ಚೆಗಳು ಕ್ರಮೇಣ ನಿಧಾನಗತಿಗೆ ತಲುಪಿ, ಅವು ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು
ಸಂತ ಶಿಶುನಾಳ ಶರೀಫ ಅಧ್ಯಯನ ಪೀಠದ ನಿರ್ದೇಶಕ ಪೆÇ್ರ. ಎಚ್.ಎಸ್. ಗುಂಡೂರ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ. ಎಸ್. ಎನ್. ಕಿರಣ್ ವಂದಿಸಿದರು.
(Visited 1 times, 1 visits today)



