ತುಮಕೂರು: ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆಯಬೇಕು. ಇದರಿಂದ ದೇಶದ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯಪಟ್ಟರು
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯುವ ಸಂಸತ್ತು ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ, ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರುಕ್ರಾಂತಿಯ ಹರಿಕಾರ ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಪ್ರತಿ ಹಂತದಲ್ಲಿಯೂ, ಪ್ರತಿಯೊಬ್ಬರಿಗೂ ದೊರಕಿಸಿಕೊಡುವಂತೆ ಯುವ ಸಮುದಾಯ ಮುಂದಾಗಬೇಕು ಮಾಡಬೇಕಿದೆ ಎಂದರು.
ಭಾರತದ ಪ್ರಜಾಪ್ರಭುತ್ವದ ನಾಲ್ಕು ಅಂಗಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಇವುಗಳ ಪ್ರಮುಖ ಗುರಿ ದೇಶದ ಸಮಗ್ರ ಅಭಿವೃದ್ದಿಯೇ ಆಗಿದೆ. ಹಾಗಾಗಿ ಯುವ ಜನಾಂಗ ಸಮಾಜದಲ್ಲಿರುವ ಬಡವರು, ನಿಗರ್ತಿಕರ ಧ್ವನಿಯಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಹಾಗೂ ಇತರೆ ಜನಪ್ರತಿನಿಧಿಗಳ ಸಹಕಾರದಿಂದ ಹಲವಾರು ಸಾಧನೆಗಳನ್ನು ಮಾಡಲಾಗಿದೆ. ಮೂರು ಬಾರಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರಕಾರದ ವಿವಿಧ ಯೋಜನೆಗಳಡಿ ಸುಮಾರು 3500ಕೋಟಿ ರೂ.ಗಳ ಸಾಧನ-ಸಲಕರಣೆಗಳ ವಿತರಣೆ, ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಅಲ್ಲದೆ 1993 ರಿಂದ ಈಡೇರದೆ ಇದ್ದ ದಾಖಲಾತಿ ಇಲ್ಲದ ಗ್ರಾಮಗಳಿಗೆ ಕಂದಾಯ ಇಲಾಖೆಯ ಮೂಲಕ ದಾಖಲೆಗಳನ್ನು ನೀಡಿ, ಆ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಒಂದೇ ಬಾರಿಗೆ 29ಸಾವಿರ ಕುಟುಂಬಗಳಿಗೆ ದಾಖಲೆ ಒದಗಿಸುವ ಮೂಲಕ ಗಿನ್ನಿಸ್ ಬುಕ್ ಅಫ್ ರೆಕಾರ್ಡ್‍ನಲ್ಲಿ ದಾಖಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ದಿಸೆಯಿಂದಲೇ ನಾವು ಯಾವುದರ ಮೇಲೆ ಒತ್ತು ನೀಡುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಸರಿಯಾದ ದಾರಿ ಮತ್ತು ಉತ್ತಮ ಮಾರ್ಗದ ಮೂಲಕ ಗುರಿಯನ್ನು ತಲುಪಲು ಸಾಧ್ಯವಿದೆ. ಸುಮಾರು 70 ವರ್ಷಗಳ ಬೇಡಿಕೆಯಾಗಿದ್ದ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ, ಉದ್ಯೋಗ ಮೇಳಗಳ ಮೂಲಕ 3000 ಯುವಜನರಿಗೆ ಉದ್ಯೋಗ, 90 ವರ್ಷದ ಅಸಹಾಯಕ ವ್ಯಕ್ತಿಗೆ ಹಕ್ಕುಪತ್ರ, 3200ಕೋಟಿ ರೂ.ಗಳಲ್ಲಿ ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆ ಜಾರಿ ಮತ್ತಿತರರ ಯೋಜನೆಗಳು ಕಳೆದ ಮೂರು ವರ್ಷಗಳಲ್ಲಿ ಜಿಲ್ಲಾಡಳಿತ ಸಾಧಿಸಿದ ಮೈಲಿಗಲ್ಲಾಗಿದೆ. ಸದ್ಯದಲ್ಲಿಯೇ ಈ ಯೋಜನೆಗಳಿಂದ ಜಿಲ್ಲೆಗೆ ನೀರು ಹರಿಯಲಿದೆ. ಇದರಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಯಾಗಲಿದೆ. ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲ್ವೆ ಯೋಜನೆ ಜಾರಿಗೆ ಬಂದರೆ ಜಿಲ್ಲೆಯ ಆರ್ಥಿಕ ಅಭಿವೃದ್ದಿಗೆ ಮತ್ತಷ್ಟು ಕೊಡುಗೆಯಾಗಲಿದೆ ಎಂದು ತಿಳಿಸಿದರು.
ಇಂದಿನ ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಉತ್ತಮ ಭಾಷಣದ ಮೂಲಕ ಆಯ್ಕೆಯಾದವರು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಯುವ ಸಂಸತ್ತು ಕಾರ್ಯಕ್ರಮದ ಅಂತಿಮ ಸುತ್ತಿಗೆ ಆಯ್ಕೆಯಾಗಲಿದ್ದು, ಇದು ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಇಂತಹ ಒಳ್ಳೆಯ ಕಾರ್ಯಕ್ರಮದ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅವರು ಪ್ರಶಂಶಿಸಿದರು.
ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ, “ನಮ್ಮ ಮಾತು-ನಮ್ಮ ಭವಿಷ್ಯ” ಇಂದಿನ ಯುವ ಸಂಸತ್ತಿನ ಘೋಷ ವಾಕ್ಯವಾಗಿದೆ. ನಮ್ಮ ಮಾತು ಎಂಬುದು ಜನರ ಧ್ವನಿ. ನಮ್ಮ ಭವಿಷ್ಯ ಎಂದರೆ ದೇಶದ ಭವಿಷ್ಯ. ಇದನ್ನು ಅರ್ಥ ಮಾಡಿಕೊಂಡು, ಸಮಾಜದ ಧ್ವನಿಯಾಗಿ ಕೆಲಸ ಮಾಡಬೇಕು. ಪ್ರಶ್ನಿಸದೆ ಯಾವುದನ್ನು ಒಪ್ಪಿಕೊಳ್ಳಬಾರದು. ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಯುವ ಸಮುದಾಯಕ್ಕೆ ಸಲಹೆ ನೀಡಿದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಚಂದ್ರಕುಮಾರ್, ಯುವಜನರಿಗೆ ಸಂಸತ್ತಿನ ಕಾರ್ಯ ವೈಖರಿ, ನಾಯಕತ್ವದ ಗುಣ, ಮಾತನಾಡುವ ಶೈಲಿ ಮತ್ತು ವಿಷಯಗಳ ಮೇಲಿನ ಹಿಡಿತ, ಮತ್ತಿತರರ ವಿಚಾರಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಯುವ ಸಂಸತ್ತು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲೆಯ 10 ತಾಲೂಕುಗಳಲ್ಲಿ ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮದಲ್ಲಿ ಆಯ್ಕೆಯಾದವರು ಇಂದಿನ ಜಿಲ್ಲಾ ಮಟ್ಟದ ಯುವ ಸಂಸತ್ತಿನಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಉತ್ತಮ ಪ್ರತಿಭೆ ತೋರುವ ಯುವಜನರು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ ಎಂದರು.
ವೇದಿಕೆಯಲ್ಲಿ ತಹಶೀಲ್ದಾರ್ ರಾಜೇಶ್ವರಿ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿಗಳಾದ ಈಶ್ವರಪ್ಪ ಹಾಗೂ ಸಂಜೀವಪ್ಪ, ಯೋಜನಾ ನಿರ್ದೇಶಕ ಸಣ್ಣ ಮಸಿಯಪ್ಪ, ವಿವಿಧ ಶಾಲಾ-ಕಾಲೇಜುಗಳ ಪ್ರಾಂಶುಪಾಲರು, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳು ಭಾಗವಹಿಸಿದ್ದರು.
ಯುವ ಸಂಸತ್ತಿನಲ್ಲಿ ಕೃಷಿ, ಸಮಾಜ ಕಲ್ಯಾಣ, ಕುಡಿಯುವ ನೀರು, ಉನ್ನತ ಶಿಕ್ಷಣ, ಗ್ರಂಥಾಲಯ ಹೀಗೆ ಹಲವು ವಿಚಾರಗಳ ಕುರಿತು ಆಡಳಿತ ಮತ್ತು ವಿರೋಧ ಪಕ್ಷದ ಮುಖಂಡರು ಚರ್ಚೆ ನಡೆಸಿದರು. ಸಭಾಧ್ಯಕ್ಷೆಯ ನಡಾವಳಿಕೆಗೆ ಅಧಿಕಾರಿಗಳಿಂದಲೂ ಮೆಚ್ಚುಗೆ ವ್ಯಕ್ತವಾಯಿತು.

(Visited 1 times, 1 visits today)