ಹುಳಿಯಾರು: ಗೋಷ್ಠಿಗಳು ಮತ್ತು ಸಮ್ಮೇಳನಗಳು ಕೇವಲ ಸಂಖ್ಯೆಗಾಗಿ ನಡೆಯುವುದಿಲ್ಲ. ಬದಲಾಗಿ, ಇಂದಿನ ಕಾಲಘಟ್ಟದಲ್ಲಿ ನಾವು ಚಿಂತನೆ ನಡೆಸಬೇಕಾದ ಬಹುತೇಕ ಪ್ರಮುಖ ಅಂಶಗಳನ್ನು ಯುವ ಮನಸ್ಸುಗಳೊಂದಿಗೆ ಚರ್ಚಿಸುವುದೇ ಇಂತಹ ಗೋಷ್ಠಿಗಳ ಮುಖ್ಯ ಉದ್ದೇಶ ಎಂದು ಚಿಕ್ಕನಾಯಕನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದರು.
ಹುಳಿಯಾರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ೧೨ ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿ ಗೋಷ್ಠಿಗಳು ವಿಚಾರ ವಿನಿಮಯ ಮಾಡಿಕೊಳ್ಳುವ ವೇದಿಕೆಗಳೇ ಹೊರತು, ಇಲ್ಲಿ ಯಾವುದೇ ಸಂಖ್ಯೆಯ ಗುರಿ ಇರಬೇಕಾಗಿಲ್ಲ. ಗೋಷ್ಠಿಗಳಲ್ಲಿ ವ್ಯಕ್ತವಾಗುವ ಪ್ರತಿಯೊಂದು ಅಂಶವೂ ಮುಂದಿನ ಜೀವನಕ್ಕೆ ಅತ್ಯಮೂಲ್ಯ ಮಾರ್ಗದರ್ಶಕಗಳಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿ ಹರೆಯದಲ್ಲಿಯೇ ತೀವ್ರವಾದ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದುವುದು ಮತ್ತು ಬರೆಯುವುದು ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಲ್ಲ; ವಿಜ್ಞಾನ, ಗಣಿತ ಹಾಗೂ ಚರಿತ್ರೆ ಸೇರಿದಂತೆ ಪ್ರತಿಯೊಂದು ಕ್ಷೇತ್ರವೂ ಸಾಹಿತ್ಯದ ಭಾಗಗಳೇ ಆಗಿವೆ. ಓದುವಿಕೆ ಮನುಷ್ಯನ ಜ್ಞಾನಾರ್ಜನೆಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ನೇರವಾಗಿ ಸಹಾಯ ಮಾಡುತ್ತದೆ ಎಂದರು.
ಬರವಣಿಗೆಯ ಹಾದಿ ಎಂಬುದು ಅತ್ಯಂತ ಗಂಭೀರವಾದದ್ದು. ಒಬ್ಬ ಉತ್ತಮ ಬರಹಗಾರನಾಗಲು ಮೊದಲು ಅಪಾರವಾದ ಓದು, ಆಳವಾದ ಚಿಂತನೆ ಹಾಗೂ ಸೂಕ್ಷ÷್ಮ ಗ್ರಹಿಕೆ ಅತ್ಯಗತ್ಯ. ಬರವಣಿಗೆಯನ್ನು ಕೇವಲ ಹವ್ಯಾಸವಾಗಿರದೆ, ಬದುಕಿನ ಒಂದು ಭಾಗವನ್ನಾಗಿ ರೂಪಿಸಿಕೊಳ್ಳಬೇಕು ಎಂದು ಯುವ ಪೀಳಿಗೆಗೆ ಕಿವಿಮಾತು ಹೇಳಿದರು.
ಹೈಸ್ಕೂಲ್ ಮತ್ತು ಕಾಲೇಜು ಹಂತದಲ್ಲೇ ಮಹಾನ್ ವ್ಯಕ್ತಿಗಳ ಚರಿತ್ರೆ, ಕಾದಂಬರಿಗಳು ಹಾಗೂ ಶ್ರೇಷ್ಠ ಕೃತಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಓದಿದ ಯಾವುದೇ ಕೃತಿಯನ್ನು ಮೇಲ್ಮೆöÊಯಾಗಿ ನೋಡದೆ, ಅದರ ಆಳಕ್ಕಿಳಿದು ವಿಮರ್ಶಿಸುವ ಮತ್ತು ವಿಶ್ಲೇಷಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳನ್ನು ಸೃಜನಾತ್ಮಕ ಬರವಣಿಗೆಗೆ ಮತ್ತು ಜ್ಞಾನ ವೃದ್ಧಿಗೆ ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕೇ ಹೊರತು ಸಮಯಹರಣಕ್ಕೆ ಅಲ್ಲ ಎಂದರು.
ಪ್ರಾಚಾರ್ಯ ಎನ್.ಜಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಶಶಿಭೂಷಣ್ ಆಶಯ ನುಡಿ ನುಡಿದರು. ವಿಮರ್ಶಕ ಕೆ.ಶಶಿಧರ್ ಶರ್ಮ ಯುವ ಸಮುದಾಯ ಸಾಮಾಜಿಕ ಬದ್ಧತೆ ಬಗ್ಗೆ ಮಾತನಾಡಿದರು. ಸಿನಿಮಾ ನಿರ್ದೇಶಕ ವಿನಯ್ ಕುಮಾರ್ ಅವರು ಯುವ ಸಮುದಾಯ ಸಾಮಾಜಿಕ ಜಾಲತಾಣದ ಬಗ್ಗೆ ಮಾತನಾಡಿದರು.
ಹುಳಿಯಾರು ಕಸಾಪ ಮಾಜಿ ಕಾರ್ಯದರ್ಶಿ ಎಂ.ಸಿ.ಚAದ್ರಶೇಖರ್, ಉಪನ್ಯಾಸಕ ಹರೀಶ್, ದೇವೇಂದ್ರ, ಪ್ರಕಾಶ್ ಮತ್ತಿತರರು ಇದ್ದರು.

(Visited 1 times, 1 visits today)