ಹುಳಿಯಾರು: “ಮೊಬೈಲ್ ಮನುಷ್ಯನನ್ನು ಗುಲಾಮನನ್ನಾಗಿ ಮಾಡಿದರೆ, ಪುಸ್ತಕಗಳು ಸ್ವಾಭಿಮಾನಿ ಹಾಗೂ ಸ್ವತಂತ್ರ ಜೀವಿಯನ್ನಾಗಿ ರೂಪಿಸುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯ ಮನೆಯಲ್ಲಿಯೂ ಒಂದು ಪುಟ್ಟ ಗ್ರಂಥಾಲಯವಿರಬೇಕು” ಎಂದು ಖ್ಯಾತ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಹುಳಿಯಾರು ಹೋಬಳಿಯ ಂiÀiಳನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ‘ಪುಸ್ತಕ ಮತ್ತು ಬೀಜ ಜಾಗೃತಿ’ ವಿಶೇಷ ತರಗತಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ತರಗತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಖ್ಯ. ಕೇವಲ ಗುಂಪಿನಲ್ಲಿ ಸೇರಿಕೊಂಡು ‘ಗೋವಿಂದ’ ಎನ್ನುವುದಕ್ಕಿಂತ, ಸ್ವತಂತ್ರವಾಗಿ ಯೋಚಿಸುವ ಮತ್ತು ಕಲಿಯುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಕುವೆಂಪು ಅವರ ‘ಅನಿಕೇತನ’ ಪ್ರಜ್ಞೆ, ಬಸವಣ್ಣ, ಅಕ್ಕಮಹಾದೇವಿ, ಬುದ್ಧ, ಸರ್ವಜ್ಞ, ಅಂಬೇಡ್ಕರ್ ಅವರಂತಹ ಮಹನೀಯರ ಬರಹಗಳನ್ನು ಓದುವ ಮೂಲಕ ಅವರನ್ನು ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು. ಕೃತಿಗಳು ನಮ್ಮೊಳಗಿನ ಭಯ, ಜಾತಿ-ಧರ್ಮದ ಸಂಕುಚಿತ ಭಾವನೆ ಹಾಗೂ ಮೂಢನಂಬಿಕೆಗಳನ್ನು ತೊಡೆದುಹಾಕಿ ಹೊಸ ಕಣ್ಣುಗಳನ್ನು ನೀಡುತ್ತವೆ ಎಂದರು.
ಇAದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮಾತೃಭಾಷೆ ಕನ್ನಡದೊಂದಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನೂ ಕಲಿಯಬೇಕು. ತಪ್ಪಾದರೂ ಪರವಾಗಿಲ್ಲ ಎಂಬ ಧೈರ್ಯದಿಂದ ಇಂಗ್ಲಿಷ್ ಮಾತನಾಡಲು ಹಾಗೂ ಬರೆಯಲು ಆರಂಭಿಸಿದರೆ ಮಾತ್ರ ಭಾಷೆ ಒಲಿಯುತ್ತದೆ. ಇದೇ ವೇಳೆ ಸಿನಿಮಾ ನಟರು ಅಥವಾ ರಾಜಕಾರಣಿಗಳ ಅಂಧ ಆರಾಧನೆ (ವ್ಯಕ್ತಿಪೂಜೆ) ಮಾಡುವುದನ್ನು ಕಟುವಾಗಿ ಟೀಕಿಸಿದ ಅವರು, “ಯಾವುದೇ ವ್ಯಕ್ತಿಯನ್ನು ಆರಾಧಿಸುತ್ತಾ ಕೂತರೆ ನಿಮ್ಮ ಸ್ವಂತ ವ್ಯಕ್ತಿತ್ವ ನಾಶವಾಗುತ್ತದೆ. ಕಲೆ ಅಥವಾ ಕೃತಿ ಚೆನ್ನಾಗಿದ್ದರೆ ಇಷ್ಟಪಡಿ, ಆದರೆ ವ್ಯಕ್ತಿಪೂಜೆ ಬೇಡ” ಎಂದು ಎಚ್ಚರಿಸಿದರು.
ಆಧುನಿಕತೆಯ ಭರಾಟೆಯಲ್ಲಿ ನಾವು ಮಣ್ಣು, ಗಿಡ-ಮರ, ಪ್ರಾಣಿ-ಪಕ್ಷಿಗಳಿಂದ ದೂರವಾಗಿ ಕ್ರೂರಿಗಳಾಗುತ್ತಿದ್ದೇವೆ. ಹಳ್ಳಿಗಳಲ್ಲೂ ಇಂದು ತರಕಾರಿಗಾಗಿ ಸಂತೆಗೆ ಹೋಗುವ ಪರಿಸ್ಥಿತಿ ಬಂದಿರುವುದು ವಿಷಾದನೀಯ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣಬಣ್ಣದ ಹೈಬ್ರಿಡ್ ತರಕಾರಿಗಳಿಗಿಂತ ನಮ್ಮ ಮನೆಯಂಗಳದಲ್ಲೇ ಬೆಳೆಯಬಹುದಾದ ನುಗ್ಗೆ, ಹಲಸು, ಬಾಳೆ, ಬದನೆ, ಶಂಬೆಕಾಯಿ, ಅಣ್ಣೆಸೊಪ್ಪು ಹಾಗೂ ಬೇಲಿಸಾಲಿನ ಸೊಪ್ಪುಗಳು ಅತ್ಯಂತ ಶ್ರೇಷ್ಠವಾದ ಔಷಧೀಯ ಆಹಾರಗಳಾಗಿವೆ. ರೈತರು ಮತ್ತು ವಿದ್ಯಾರ್ಥಿಗಳು ದೇಸಿ ಬೀಜಗಳನ್ನು ಉಳಿಸಿ, ತಮ್ಮ ಮನೆಯ ಸುತ್ತಮುತ್ತ ಬಳ್ಳಿ ತರಕಾರಿಗಳನ್ನು ಬೆಳೆದು ಬಳಸಿ ಸಂಸಾರದ ಆರ್ಥಿಕ ಹೊರೆ ಕಡಿಮೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿತ್ತು. ಶಾಲೆಯ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಪುಸ್ತಕ ಖರೀದಿಸಿದರು. ಮುಖ್ಯೋಪಾಧ್ಯಾಯರಾದ ರಮೇಶ ಜಿ.ಕೆ, ಎಸ್.ಡಿ.ಎಂ.ಸಿ ಸದಸ್ಯರಾದ ರೇಖಾ, ಸಹ ಶಿಕ್ಷಕರುಗಳು, ಅತಿಥಿ ಶಿಕ್ಷಕರುಗಳು ಸಿಬ್ಬಂದಿಗಳಾದ ಜಯಮ್ಮ ಇ, ದೀಪಕ್ ಸೇರಿದಂತೆ ಅನೇಕರಿದ್ದರು.
(Visited 1 times, 1 visits today)





