ತುಮಕೂರು: ಮಕ್ಕಳಿಗೆ ಮನೆಯಿಂದಲೇ ಕನ್ನಡ ಭಾಷಾಭಿಮಾನ ಬೆಳೆಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿ ಅಂಬಿಕಾ ಕರೆ ನೀಡಿದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿAದು ನಗರದ ಜಿಲ್ಲಾ ಬಾಲಭವನದಲ್ಲಿ ಆಯೋಜಿಸಿದ್ದ ಕನ್ನಡ ಗೀತೆಗಳ ಗಾಯನ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ೯-೧೬ ವಯೋಮಾನದ ಮಕ್ಕಳಿಗಾಗಿ ಈ ಕನ್ನಡ ಗೀತೆಗಳ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಪರಂಪರೆ. ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಒಳಗೊಂಡ ಭಾಷೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ದರೆ ನಮ್ಮ ಪರಂಪರೆಯನ್ನೂ ಕೊಂಡೊಯ್ದAತಾಗುತ್ತದೆ ಎಂದು ತಿಳಿಸಿದರು.
ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಬಹುಭಾಷಿಕರ ಆಗಮನ ಹೆಚ್ಚುತ್ತಿದೆ. ಇವರ ನಡುವೆ ನಮ್ಮ ಕನ್ನಡ ಮತ್ತು ನಮ್ಮತನವನ್ನು ನಾವು ಮರೆಯಬಾರದು. ಬೆಂಗಳೂರಿಗೆ ಹೋದರೆ ಯಾವುದೋ ಹೊರ ರಾಜ್ಯಕ್ಕೆ ಹೋದ ಅನುಭವವಾಗುತ್ತಿದೆ. ಅಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ನಾವು ಬೇರೆಯವರ ವಿರೋಧಿಗಳಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡವನ್ನು ಪ್ರೀತಿಸಿ ನಂತರ ಇತರೆ ಭಾಷೆಗಳನ್ನು ಕಲಿಯಿರಿ ಎಂಬುದು ನಮ್ಮೆಲ್ಲರ ಆಶಯವಾಗಿದ್ದು ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು, ಮಕ್ಕಳು ಹಾಗೂ ವಿದ್ಯಾರ್ಥಿಗಳು ಚಿಂತಿಸಬೇಕಿದೆ. ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ಪ್ರೇರೇಪಣೆ ನೀಡುತ್ತವೆ ಎಂದರಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಶುಭ ಹಾರೈಸಿದರು.
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಶಿಲ್ಪಾ ದೊಡ್ಡಮನಿ ಮಾತನಾಡಿ ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವಾಗಬೇಕು. ಇದು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಅಡಿಪಾಯವಾಗುತ್ತದೆ. ನನಗೆ ಗೆಲುವಾಗಲಿಲ್ಲ, ಬಹುಮಾನ ಬರಲಿಲ್ಲ ಎಂದು ಕೊರಗುತ್ತಾ ಕೂರದೆ ಮುಂದೆ ಹೇಗೆ ಗೆಲುವು ತನ್ನದಾಗಿಸಿಕೊಳ್ಳಬೇಕು ಎಂಬುದರತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಬಾಲಭವನ ಸಮಿತಿಯ ಸದಸ್ಯ ಸಾ.ಚಿ.ರಾಜಕುಮಾರ ಮಾತನಾಡಿ ಮನೆ ಮನೆಗಳಲ್ಲಿ ಕನ್ನಡ ಉಳಿಯಬೇಕೆಂದರೆ ನಿತ್ಯವೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸಾಹಿತಿಗಳ ಪುಸ್ತಕಗಳನ್ನು ಓದಬೇಕು. ಇದರಿಂದ ಕನ್ನಡ ಭಾಷಾಜ್ಞಾನ ಉತ್ತಮವಾಗುವುದರ ಜೊತೆಗೆ ನಾವೂ ಅವರಂತೆಯೇ ಸಾಧಕರಾಗಬೇಕು ಎಂಬ ಹಂಬಲ ಹುಟ್ಟುತ್ತದೆ. ನಮ್ಮ ಕನ್ನಡ ನಾಡಿನಲ್ಲಿ ಅನೇಕ ಕವಿಗಳು, ಸಾಹಿತಿಗಳು, ಹೋರಾಟಗಾರರು ತಮ್ಮದೇ ಆದ ಛಾಪು ಮೂಡಿಸಿ ಹೋಗಿದ್ದು, ಅಂತಹ ಮಹನೀಯರ ಸಾಧನೆಗಳನ್ನು ತಿಳಿಯುವ ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಾಲಭವನದ ವ್ಯವಸ್ಥಾಪಕ ಚಿದಾನಂದಮೂರ್ತಿ, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ್, ಜಿಲ್ಲಾ ಬಾಲಭವನ ಸಮಿತಿ ಕಾರ್ಯಕ್ರಮ ಸಹಾಯಕರು ಶಿಲ್ಪ ಜಿ.ಎಸ್, ವಿವಿಧ ಶಾಲೆಯ ಸಿ.ಆರ್.ಪಿ.ಗಳು, ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
(Visited 1 times, 1 visits today)



