ಶ್ರೀಗಂಧ ಮರಗಳ ಅಕ್ರಮ ಮಾರಾಟ ಆರೋಪಿಗಳಿಗೆ 5 ವರ್ಷಗಳ ಕಠಿಣ ಶಿಕ್ಷೆ!

 ತುಮಕೂರು:

      ಶ್ರೀಗಂಧ ಮರಗಳನ್ನು ಅಕ್ರಮವಾಗಿ ಕಡಿದು ಸ್ವಾಧೀನ ಪಡಿಸಿಕೊಂಡಿದ್ದ ಆರೋಪದ ಮೇಲೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಲಕ್ಷ್ಮಿ ಎಂಬ ಮಹಿಳೆಗೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ.ಗಳ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್ ತೀರ್ಪು ನೀಡಿದ್ದಾರೆ.

     ಪ್ರಕರಣದ ಹಿನ್ನೆಲೆ:-

      ಗುಬ್ಬಿ ಅರಣ್ಯ ವಲಯದ ವ್ಯಾಪ್ತಿಯೊಳಗಿನ ದೊಡ್ಡಗುಣಿ ಅನುಭಾಗದ ಮಾರಶೆಟ್ಟಿಹಳ್ಳಿ ರಾಜ್ಯ ಮೀಸಲು ಅರಣ್ಯ ಪ್ರದೇಶದಲ್ಲಿ ಹಂಡನಹಳ್ಳಿ ಗುಡ್ಡದ ತಪ್ಪಲಿನಲ್ಲಿ ಸುಮಾರು 17 ಶ್ರೀಗಂಧದ ಮರಗಳನ್ನು ಅಕ್ರಮವಾಗಿ ಕಡಿದು ಸ್ವಾಧೀನ ಪಡಿಸಿಕೊಂಡಿದ್ದರೆಂಬ ಖಚಿತ ಮಾಹಿತಿ ಮೇರೆಗೆ ದೊಡ್ಡಗುಣಿ ಉಪವಲಯ ಅರಣ್ಯಾಧಿಕಾರಿ ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಆರೋಪಿ ಲಕ್ಷ್ಮಿ ಬಳಿ ಶ್ರೀಗಂಧದ ಮರಗಳಿರುವುದು ಸಾಬೀತಾಗಿದೆ. ಆರೋಪಿ ಲಕ್ಷ್ಮಿ ಬಳಿಯಿದ್ದ ಶ್ರೀಗಂಧದ ಮರಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ. ಅರಣ್ಯ ಅಧಿಕಾರಿ ಆರ್.ರಮೇಶ್ ಅವರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರ್ಕಾರದ ಅಭಿಯೋಜಕಿ ಕೆ.ಹೆಚ್.ಶ್ರೀಮತಿ ವಾದ ಮಂಡಿಸಿದ್ದರು.

      ಸಾಕ್ಷ್ಯಾಧಾರಗಳಿಂದ ಲಕ್ಷ್ಮಿ ಅಪರಾಧ ಎಸಗಿರುವುದ ಸಾಬೀತಾಗಿರುವುದರಿಂದ ಅವರಿಗೆ 5ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ.ಗಳ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ 1 ವರ್ಷ ಸಾದಾ ಸಜೆ ಮತ್ತು ಕಲಂ 24ಡಿ(ಇ)ರಡಿ ಅರಣ್ಯ ಕಾಯ್ದೆ ಅಪರಾಧಕ್ಕಾಗಿ 6 ತಿಂಗಳ ಶಿಕ್ಷೆ ಹಾಗೂ ತಲಾ 3 ಸಾವಿರ ರೂ.ಗಳ ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಒಂದೂವರೆ ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಲಾಗಿದೆ.

(Visited 8 times, 1 visits today)

Related posts

Leave a Comment