ಹುಳಿಯಾರು:

      ಹಕ್ಕಿ ಜ್ವರ ಭೀತಿಯಿಂದಾಗಿ ಕೋಳಿ ಮಾಂಸದ ದರ ಹಾಗೂ ಮಾರಾಟ ಎರಡೂ ಸಹ ಕುಸಿತ ಕಂಡಿದ್ದು ಕೋಳಿ ವ್ಯಾಪಾರ ನಂಬಿ ಬದುಕು ಕಟ್ಟಿಕೊಂದಿದ್ದ ಕೋಳಿ ಅಂಗಡಿಯವರಿಗೆ ಆತಂಕ ಮನೆ ಮಾಡಿದೆ.

      2020 ರ ಮಾರ್ಚಿ, ಏಪ್ರಿಲ್ ಮಾಹೆಯ ಕೊರೊನಾ ಲಾಕ್‍ಡೌನ್‍ನಿಂದಾಗಿ ಕೋಳಿ ವ್ಯಾಪಾರ ಇಲ್ದಾಗಿತ್ತು. ಮೇ, ಜೂನ್‍ನಲ್ಲಿ ಹಕ್ಕಿ ಜ್ವರ ವದಂತಿ ಹರಡಿ ತೋಚಿದ ದರಕ್ಕೆ ಕೋಳಿಗಳನ್ನು ಮಾರಿದ್ದರು. ಒಂದು ವರ್ಷದಲ್ಲಿ ಐದಾರು ತಿಂಗಳು ವ್ಯಾಪಾರ ಇಲ್ಲದೆ ಕಂಗಾಲಾಗಿದ್ದ ಕೋಳಿ ವ್ಯಾಪಾರಿಗಳಿಗೆ ಗ್ರಾಪಂ ಚುನಾವಣೆ ಚೇತರಿಕೆ ನೀಡಿತ್ತು.

      ಆದರೆ ಈಗ ಮತ್ತೊಮ್ಮೆ ಹಕ್ಕಿ ಜ್ವರದ ಭೀತಿ ಕೋಳಿ ವ್ಯಾಪಾರಿಗಳನ್ನು ಕಂಗಾಲಾಗಿಸಿದೆ. ಹಕ್ಕಿ ಜ್ವರ ಭೀತಿಯಿಂದಾಗಿ ಕೋಳಿ ದರವು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಲಾಕ್‍ಡೌನ್ ತೆರವಾದ ನಂತರದ ದಿನಗಳಲ್ಲಿ 130 ರೂ ಇದ್ದ ಬಾಯ್ಲರ್ ಕೋಳಿ 100 ರೂಗಲಿಗೂ, 120 ರೂಗಳಿದ್ದ ಫಾರಂ ಕೋಳಿ 100 ರೂ.ಗಳಿಗೂ ಕುಸಿತ ಕಂಡಿದೆ.

      ದರ ಕುಸಿತ ಹಾಗೂ ಶೀತ ವಾತಾವರಣ ಕೋಳಿ ಪ್ರಿಯರನ್ನು ಆಕರ್ಷಿಸಿ ಭರ್ಜರಿ ವ್ಯಾಪಾರ ನಡೆಯಬೇಕಿತ್ತು. ಆದರೆ ಹಕ್ಕಿ ಜ್ವರದ ವದಂತಿ ವ್ಯಾಪಾರಕ್ಕೂ ಸಂಚಕಾರ ತಂದೊಡ್ಡಿದೆ. ರಾಜ್ಯದಲ್ಲಿ ಇಲ್ಲಿಯವರೆವಿಗೂ ಹಕ್ಕಿ ಜ್ವರದ ಪ್ರಕರಣ ದಾಖಲಾಗದಿದ್ದರೂ ಜನರು ಮಾತ್ರ ವದಂತಿಗಳಿಗೆ ಕಿವಿ ಕೊಟ್ಟು ತಿನ್ನುವುದನ್ನು ಬಿಡುತ್ತಿದ್ದಾರೆ. ಇದರಿಂದ ಕೋಳಿ ವ್ಯಾಪಾರಿಗಳಿಗೆ ದಿಕ್ಕೆ ತೋಚದಂತ್ತಾಗಿದೆ. ಪಶು ಮತ್ತು ಆರೋಗ್ಯ ಇಲಾಖೆಯವರು ಜನರಲ್ಲಿನ ಆತಂಕ ನಿವಾರಣೆಗೆ ಮುಂದಾಗಿ ಕುಕ್ಕುಟೋಧ್ಯಮ ಉಳಿಸಲಿ ಎಂಬುದು ಕೋಳಿ ವ್ಯಾಪಾರಿಗಳ ಮನವಿಯಾಗಿದೆ.
 
      ಕುಕ್ಕುಟೋಧ್ಯಮ ನಂಬಿ ಲಕ್ಷಾಂತರ ಮಂದಿ ರಾಜ್ಯದಲ್ಲಿ ಜೀವನ ನಡೆಸುತ್ತಿದ್ದಾರೆ. ಇಂತಹ ಸ್ವಉದ್ಯೋಗಕ್ಕೆ ಕೊಡಲಿ ಪೆಟ್ಟಾಗಿ ಹಕ್ಕಿ ಜ್ವರದ ವದಂತಿ ಆಗಾಗ ರಾಜ್ಯದಲ್ಲಿ ಹರಡುತ್ತಿದೆ. ಇದರಿಂದ ಕೋಳಿ ದರ ಮತ್ತು ಮಾರಾಟ ಎರಡೂ ಕುಸಿದು ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಹಾಗಾಗಿ ವದಂತಿಗಳಿಗೆ ಮಾಂಸ ಪ್ರಿಯರು ಕಿವಿ ಕೊಡಬೇಡಿ. ಹಕ್ಕಿ ಜ್ವರಕ್ಕೂ ಕೋಳಿಗಳಿಗೂ ತಳುಕುಹಾಕುವುದು ತಪ್ಪು. ಕೋಳಿಗಳನ್ನು ಸಾಕಾಣಿಕೆ ಮಾಡುವ ರೈತರು ಪ್ರತಿ ಕೋಳಿ ಮರಿಗೂ ಹಂತ ಹಂತವಾಗಿ ಅಗತ್ಯ ಲಸಿಕೆ ಹಾಕಿಸುತ್ತಾರೆ. ಹೀಗಾಗಿ ಕೋಳಿಗಳಿಗೆ ಹಕ್ಕಿಜ್ವರ ವೈರಸ್ ತಗಲುವುದಿಲ್ಲ.

ಕೋಳಿಶ್ರೀನಿವಾಸ್, ಅಧ್ಯಕ್ಷರು, ಕೋಳಿ ವ್ಯಾಪಾರಿಗಳ ಸಂಘ, ಹುಳಿಯಾರು

(Visited 8 times, 1 visits today)