ವರದಿ ರವಿ ಚಿ ನಾ ಹಳ್ಳಿ


ನಾವು ಬಾಲ್ಯದಿಂದಲೂ ಇಂತಹ ರಣ ಮಳೆಗಳನ್ನು ಹಲವಾರು ಬಾರಿ ಕಂಡಿದ್ದೇವೆ. ರಾತ್ರೋರಾತ್ರಿಯೇ ದೊಡ್ಡ ದೊಡ್ಡ ಕೆರೆಗಳೂ ಸಹ ಕೋಡಿ ಬಿದ್ದುವುದನ್ನು ಸಹ ನೋಡಿದ್ದೇವೆ. ಅಂದು ಇಂತಹ ಮಳೆಯು ಧರೆಗೆ ಬಿದ್ದು ಕೆರೆ ಕಟ್ಟೆಗಳು ತುಂಬಿದಾಗ ಊರ ಹಿರಿಯರು ತುಂಬಿದ ಕೆರೆಗಳಲ್ಲಿ ಗಂಗಮ್ಮ ಎಂದು ಪೂಜಿಸುತ್ತಿದ್ದರು. ಆಗೆಲ್ಲವೂ ಊರ ಹಿರಿಯರ ನೇತೃತ್ವದಲ್ಲಿಯೇ ಕೆರೆಕಟ್ಟೆಗಳ ಅಭಿವೃದ್ದಿ, ತೂಬುಗುಂಡಿಯ ಸುಸ್ಥಿರತೆ, ಕೋಡಿ ಜಾಗದಲ್ಲಿಯ ನೀರು ಹರಿದು ಹೋಗಲು ಉತ್ತಮವಾಗಿ ಯಾವುದೇ ಅಡೆತಡೆಯಾಗದಂತೆ, ಕೆರೆಗಳ ಅಂಗಳದಲ್ಲಿ ಯಾವುದೇ ಗಿಡ ಗಂಟೆಗಳು ಬೆಳೆಯದಂತೆ ನೀಟಾಗಿ ಇಟ್ಟುಕೊಳ್ಳುತ್ತಿದ್ದರು.

ನಾಡಿನಾದ್ಯಂತ ಇದ್ದ ಬಹುತೇಕ ಕೆರೆಗಳನ್ನು ಆಯಾ ಕೆರೆಯ ನೀರಿನ ಫಲಾನುಭವಿಗಳೇ ನಿರ್ವಹಿಸುತ್ತಿದ್ದರು. ಜನರೇ ನೇಮಿಸಿಕೊಂಡ ನೀರುಗಂಟಿ ಎಲ್ಲರ ಗದ್ದೆಗಳಿಗೂ ಸಮಾನವಾಗಿ ನೀರು ಹಂಚುವ ಕೆಲ್ಸ ಮಾಡುತ್ತಿದ್ದರು. ರಾಜಕಾಲುವೆಗಳನ್ನು ಸುಸ್ಥಿರವಾಗಿ ಇಡುವುದು, ಏರಿಯ ಬಿರುಕುಗಳನ್ನು ಗಮನಿಸುವುದು, ಏರಿಯ ಮೇಲಿನ ಗಿಡ ಗಂಟೆ ಸವರುವುದು, ಕಾಲ ಕಾಲಕ್ಕೆ ತೂಬಿನ ನಿರ್ವಹಣೆ ಮಾಡುವುದು .. ಹೀಗೆ ಹಲವು ಕೆಲ್ಸಗಳನ್ನು ಸ್ಥಳೀಯ ಜನಗಳ ಸಹಕಾರದಲ್ಲಿ ನೀರುಗಂಟಿಗಳು ಮಾಡುತ್ತಿದ್ದರು. ಇವರಿಗೆ ಬೆಳೆದ ಬೆಳೆಯಲ್ಲಿ ಒಂದು ಪಾಲನ್ನು ಕಡ್ಡಾಯವಾಗಿ ಕೊಡಬೇಕಾಗುತ್ತಿತ್ತು. ಕೆರೆಗಳು ಬಹುತೇಕ ಸಮುದಾಯದ ನಿರ್ವಹಣೆಯಲ್ಲಿ ಇರುತ್ತಿದ್ದವು. ನಂತರದ ದಿನಗಳಲ್ಲಿ ಕೆರೆಗಳಿಗೆ ಅಂತ ಒಂದು ಇಲಾಖೆ ಆಗಿ (ಈಗ ಅದು ಸಣ್ಣ ನೀರಾವರಿ ಇಲಾಖೆ) ಕೆರೆ ನಿರ್ವಹಣೆ ಸಮುದಾಯದ ಕೈತಪ್ಪಿ ಸರ್ಕಾರದ ಮರ್ಜಿಗೆ ಹೋಯಿತು. ಆಮೇಲೆ ‘ಕೆರೆ’ ಅನ್ನೋದು ನಂದೂ ಅಲ್ಲ; ನಿಂದೂ ಅಲ್ಲ. ಯಾರದ್ದೂ ಅಲ್ಲ ಎನ್ನುವಂತಾಗಿ ಎಲ್ಲರೂ ತಮಗಾದಷ್ಟು ಕೆರೆಯ ಅಂಗಳವನ್ನೋ, ಕಾಲುವೆಯನ್ನೋ ಒತ್ತುವರಿ ಮಾಡುತ್ತಾ ಹೋದರು. ಆಗ ಎಲ್ಲವೂ ಒಂದು ರೀತಿಯಲ್ಲಿ ಚೆಂದವೇ ಆಗಿತ್ತು.

ಆದರೆ ಇಂದು ?

ದೊಡ್ಡ ದೊಡ್ಡ ಊರುಗಳ ವಿಶಾಲ ಕೆರೆಗಳಲ್ಲಿ ಕೆಲವನ್ನು ಸರ್ಕಾರ ಅಥವ ಸ್ಥಳೀಯಾಡಳಿತಗಳು ನೇರವಾಗಿ ನಿರ್ವಹಣೆ ಮಾಡುತ್ತಿದ್ದವು. ಅವು ಸರ್ಕಾರಿ ದಾಖಲೆಗಳಲ್ಲಿ ’ಅಮಾನಿಕೆರೆ’ಗಳೆಂದು ಕರೆಸಿಕೊಂಡವು. ಅಮಾನಿ ಅಂದರೆ ಸರ್ಕಾರದಿಂದ ನೇರವಾಗಿ ನಿರ್ವಹಿಸಲ್ಪಡುವ ಎಂದರ್ಥ. ಅಮಾನಿ, ಅಮೀನ (ಕೋರ್ಟು, ಕಚೇರಿಗಳ ನೋಟೀಸು ಇತ್ಯಾದಿಗಳನ್ನು ಸಂಬಂಧಿಸಿದವರಿಗೆ ತಲುಪಿಸುವವ) ಇವೆಲ್ಲ ಒಂದಕ್ಕೊಂದು ಸಮೀಪಾರ್ಥಗಳಿರುವ ಪದಗಳಿರಬಹುದು.

ಈಗ ಹಳ್ಳಿಗರಿಗಿಂತ ಮಿಗಿಲಾಗಿ ಸರ್ಕಾರಿ ಸಂಸ್ಥೆಗಳೇ ಅಮಾನಿಕೆರೆಗಳನ್ನು ಸೈಟು ಮಾಡಿ ಮಾರಿವೆ, ಒತ್ತುವರಿ ಮಾಡಿ ಪಾರ್ಕು, ಸರ್ಕಾರಿ ಕಚೇರಿಗಳನ್ನಾಗಿ ಮಾಡಿಕೊಂಡಿವೆ. ಸರ್ಕಾರವೇ ಒತ್ತುವರಿ ಮಾಡಿದ ಮೇಲೆ ನಗರದ ನಾಗರೀಕರು ಬಿಟ್ಟಾರೆಯೆ ? ಅವರು ಕಾಲುವೆ, ಏರಿ ಒಂದನ್ನೂ ಬಿಡದೆ ಮನೆ, ಸ್ಕೂಲು, ಆಸ್ಪತ್ರೆ, ಗೋಡೋನು, ಕಾಂಪುಂಡು..ಹೀಗೆ ತೋಚಿದ ಹಾಗೆ ಕಟ್ಟಿ ಬಾಚಿದರು.

ಈಗ ಮಳೆಯು ತಾನು ಮರೆತದ್ದನ್ನೆಲ್ಲವನ್ನೂ ನೆನಪಿಸಿಕೊಳ್ಳತೊಡಗಿದೆ. ನಾವೇಏನೇ ಹೇಳಲಿ ಪ್ರಕೃತಿಯು ತನ್ನ ಕೆಲಸವನ್ನು ಯಾರಿಗೂ ಅಂಜದೆ, ಅಳುಕದೆ, ಪ್ರಭಾವಕ್ಕೂ ಒಳಗಾಗದೆ ತನ್ ಕೆಲಸವ್ನು ತಾನು ನಿರ್ವಹಿಸುತ್ತದೆ.

 

(Visited 7 times, 1 visits today)