ಚಿಕ್ಕನಾಯಕನಹಳ್ಳಿ :

      ಕಳೆದ ಎರಡುವರ್ಷದಿಂದ ಸ್ಥಳೀಯ ಪುರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷಸ್ಥಾನಗಳ ಮೀಸಲಾತಿ ವಿವಾದಕ್ಕೆ ತೆರೆ ಎಳೆದಿರುವ ಸರ್ಕಾರ ಈಗ ನೂತನ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರೂ ಇಲ್ಲಿನ ಪುರಸಭೆಯ ಅಧ್ಯಕ್ಷಸ್ಥಾನ ಮತ್ತೆ ಕಗ್ಗಂಟಾಗಿದೆ.

      ಕಳೆದ ಎರಡುವರ್ಷದಲ್ಲಿ ನಡೆದ ಪುರಸಭೆ ಚುನಾವಣೆಯನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಘೋಷಿಸಿದ್ದ ಮೀಸಲಾತಿ ಪಟ್ಟಿಯಲ್ಲಿ ನಿಯಮಗಳು ಪರಿಪಾಲನೆಯಾಗಿಲ್ಲವೆಂಬ ಕಾರಣಕ್ಕೆ ಪ್ರಕರಣ ನ್ಯಾಯಾಲಯಕ್ಕೆ ಎಡೆತಾಗಿದ್ದ ಪರಿಣಾಮ ಚುನಾಯಿತ ಸದಸ್ಯರು ಗೆದ್ದರೂ ಪುರಸಭೆಯೊಳಗೆ ತಮ್ಮ ಅಧಿಕಾರ ಚಲಾಯಿಸಲು ಅವಕಾಶವಿರಲಿಲ್ಲ.

      ಈಗ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನೂತನ ಮೀಸಲಾತಿಪಟ್ಟಿಯನ್ನು ಬಿಡುಗಡೆಮಾಡುವ ಮೂಲಕ ಚುನಾಯಿತ ಸದಸ್ಯರ ಅಧಿಕಾರ ಚಲಾವಣೆಗೆ ಹಾಕಲಾಗಿದ್ದ ದಿಗ್ಬಂದನ ತೆರವಾಗುವ ಸಂದರ್ಭ ಬಂದೊದಗಿದೆ.

      ಆದರೆ ಪಟ್ಟಣದ ಪುರಸಭೆಗೆ ಈಗ ಸರ್ಕಾರ ಅಧಿಕೃತವಾಗಿ ಘೋಷಿಸಿರುವ ಪಟ್ಟಿಯಂತೆ ಅಧ್ಯಕ್ಷಸ್ಥಾನಕ್ಕೆ ಎಸ್‍ಟಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎ ಮಹಿಳೆ ಎಂದು ನಿಗಧಿಪಡಿಸಿದೆ. ಆದರೆ ಪಟ್ಟಣದ ಪುರಸಭೆಯ 23 ವಾರ್ಡ್‍ಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಎಸ್‍ಟಿ ಮಹಿಳೆ ಆಯ್ಕೆಯಾಗಿಯೇಇಲ್ಲ. ಈ ವಿಚಾರ ತಾಲ್ಲೂಕು ಆಡಳಿತಕ್ಕೆ ಗೊತ್ತಿದ್ದರೂ 23 ಸದಸ್ಯರಲ್ಲಿ ಎಸ್‍ಟಿ ಮಹಿಳೆಗೆ ಅಧ್ಯಕ್ಷಸ್ಥಾನ ಮೀಸಲಿರಿಸಬೇಕೆಂದು ಸರ್ಕಾರ ಘೋಷಣೆ ಮಾಡಿ ಮತ್ತೆಗೊಂದಲಕ್ಕೆಡೆಮಾಡಿದೆ.

      ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಣೆಗೂ ಮುನ್ನ ಸರ್ಕಾರಕ್ಕೆ ಸ್ಥಳೀಯ ಆಡಳಿತ ಆಯ್ಕೆಗೊಂಡ ಸದಸ್ಯರ ಪಟ್ಟಿ ಹಾಗೂ ಅವರ ಎಲ್ಲ ವಿವರಗಳನ್ನು ನೀಡಿದ್ದರೂ ಎಸ್‍ಟಿ ಮಹಿಳೆ ಅಧ್ಯಕ್ಷಸ್ಥಾನಕ್ಕೆ ಘೋಷಣೆಗೊಂಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಸ್ಥಳೀಯವಾಗಿ ಇಲ್ಲಿ ಜೆಡಿಎಸ್ ಸದಸ್ಯರು ಹೆಚ್ಚಾಗಿ ಆಯ್ಕೆಗೊಂಡಿದ್ದಾರೆ. ನಿಯಮದಂತೆ ಮೀಸಲಾತಿ ಪ್ರಕಟಗೊಂಡರೆ ಆಡಳಿತದ ಚುಕ್ಕಾಣಿ ಜೆಡಿಎಸ್ ಪಾಲಾಗಲಿದೆ,ಇದನ್ನು ತಪ್ಪಿಸುವ ಏಕೈಕ ಉದ್ದೇಶದಿಂದ ಈ ರೀತಿ ಪ್ರಕಟಗೊಂಡಿದೆ ಎಂದು ಕೆಲವರು ಸಂಶಯಿಸುತ್ತಾರೆ. ಎಸ್‍ಟಿ ಮಹಿಳೆ ಇಲ್ಲದ ಕಾರಣ ನಂತರ ಈ ಸ್ಥಾನವನ್ನು ಎಸ್‍ಟಿ ಪುರುಷಸ್ಥಾನಕ್ಕೆ ಅವಕಾಶಮಾಡಿಕೊಡುವ ಸಂಭವವಿರುವುದರಿಂದ ಈ ಸ್ಥಾನವನ್ನು ಈಚೆಗೆ ಜೆಡಿಎಸ್‍ನಿಂದ ಬಿಜೆಪಿಗೆ ಒಲವುತೋರಿರುವ ಅಭ್ಯರ್ಥಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ರೀತಿ ಪ್ರಕಟಿಸಲಾಗಿದೆ ಎಂದು ಹಲವರ ಅಭಿಪ್ರಾಯ, ಕಾರಣ ಎಸ್‍ಟಿ ಪುರುಷ ಅಭ್ಯರ್ಥಿ ಒಬ್ಬರೇ ಇರುವುದು ಹಾಗೂ ಅವರೂ ಜೆಡಿಎಸ್‍ನಿಂದ ಬಿಜೆಪಿಗೆ ಒಲವು ತೋರಿರುವುದು ಕಾರಣವೆನಿಸಿದೆ. ನೇರವಾಗಿ ಎಸ್‍ಟಿ ಪುರುಷ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನವೆಂದು ಮೀಸಲಾತಿ ಪ್ರಕಟಿಸಿದರೆ ಸಚಿವರ ಕೈವಾಡವಿದೆ ಎಂದು ಬಿಂಬಿತವಾಗಲಿದೆ ಎಂದು ಸುತ್ತುಬಳಸಿ ಈ ರೀತಿ ಪ್ರಕಟಿಸಲಾಗಿದೆ ಎಂಬುದು ಜನರಲ್ಲಿ ಚರ್ಚಿತವಾಗಿದೆ. ಕಾನೂನು ಸಚಿವರು ತಮ್ಮ ಕ್ಷೇತ್ರದಲ್ಲಿಯೇ ಕಾನೂನನ್ನು ನವಿರಾಗಿ ವಂಚಿಸಿ ಪುರಸಭೆಯಲ್ಲಿ ತಮ್ಮ ಹಿಡಿತವಿರಿಸಿಕೊಳ್ಳುವ ಹುನ್ನಾರವಡಿಗಿದೆ ಎಂಬುದು ವಿರೋಧಪಕ್ಷದವರ ಮಾತಾಗಿದೆ.

      ಈಗಾಗಲೇ ಅಧ್ಯಕ್ಷಸ್ಥಾನಕ್ಕೆ ಮೀಸಲಾತಿ ಘೋಷಿಸಿರುವ ಸರ್ಕಾರದ ಕ್ರಮವನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಒಕ್ಕೊರಲಿನಿಂದ ಖಂಡಿಸಿದ್ದಾರೆ.

(Visited 15 times, 1 visits today)