ಚಿಕ್ಕನಾಯಕನಹಳ್ಳಿ:

      15ನೇ ಹಣಕಾಸು ಯೋಜನೆಯ 1.50ಕೋಟಿ ರೂ.ಗಳ ಅನುದಾನದ ಕ್ರಿಯಾಯೋಜನೆ ತಯಾರಿಸಲು ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಸಮ್ಮತಿ ಸೂಚಿಸಲಾಯಿತು.

      ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶೇಷಸಭೆಯು ಕೆ.ಆರ್. ಚೇತನಗಂಗಾಧರ್ ಅಧ್ಯಕ್ಷತೆ ನಡೆಯಿತು. 15 ನೇ ಹಣಕಾಸು ಯೋಜನೆಯಡಿ ಬಿಡುಗಡೆಗೊಂಡ ಅನುದಾನದ ಕ್ರಿಯಾಯೋಜನೆ ತಯಾರಿಸಲು ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಅತಿಕ್‍ಫಾಷಾ ಮಾಹಿತಿ ನೀಡಿ 15 ನೇ ಹಣಕಾಸು ಯೋಜನೆಯಡಿ ತಾಲ್ಲೂಕಿಗೆ ರೂ.1.50 ಕೋಟಿ ಅನುದಾನ ಬಿಡುಗಡೆಯಾಗಿದೆ

        ಇದರಲ್ಲಿ ಶೇ50 ನಿರ್ಭಂದಿತ ಹಾಗೂ ಶೇ.50 ಅನಿರ್ಭಂದಿತ ಅನುದಾನ ದಂತೆ ವಿಂಗಡಿಸಲಾಗಿದೆ. ಅನಿರ್ಭಂದಿತ ಅನುದಾನದಲ್ಲಿ ತ್ಯಾಜ್ಯನಿರ್ವಹಣೆ, ಜೈವಿಕಗೊಬ್ಬರ, ಸ್ವಚ್ಚತೆ, ಯೋಜನೆಗಳಂತಹ ಕೆಲಸಗಳಿಗೆ ಬಳಸಬೇಕು, ನಿರ್ಭಂದಿತ ಅನುದಾನದಲ್ಲಿ ನೀರಿನ ನಿರ್ವಹಣೆ, ಅಂತರ್ಜಲ ಅಭಿವೃದ್ದಿ, ಮಳೆ ನೀರು ಸಂರಕ್ಷಣೆ, ಶಾಲಾ, ಅಂಗನವಾಡಿ, ಆರೋಗ್ಯ ಕೇಂದ್ರ, ಕೊಟ್ಟಿಗೆ ಮುಂತಾದವುಗಳಿಗೆ ಬಳಸಬಹುದಾಗಿದೆ.

      ಈ ಅನುದಾನದಲ್ಲಿ ಗ್ರಾಮ ಪಂಚಾಯಿತಿಗೆ ಶೇ.85, ತಾಲ್ಲೂಕು ಪಂಚಾಯಿತಿಗೆ ಶೇ.10 ಹಾಗೂ ಜಿಲ್ಲಾ ಪಂಚಾಯಿತಿಗೆ ಶೇ.5 ರಷ್ಟು ಅನುದಾನ ವಿಂಗಡಿಸಿ ಕ್ರಿಯಾ ಯೋಜನೆ ತಯಾರಿಸಬೇಕೆಂದರು. ಈ ಕ್ರಿಯಾಯೋಜನೆಯಡಿ ಗ್ರಾಮ ಪಂಚಾಯಿತಿಗೆ ಬಂದಿರುವ ಅನುದಾನದಲ್ಲಿ ಗ್ರಾಮಸಭೆ ನಡೆಸದೆ ಸಾಮಾನ್ಯ ಸಭೆಯಲ್ಲಿಯೇ ಅನುಮೋದನೆ ಪಡೆಯಬಹುದಾಗಿದೆ. ಇದರ ಸಂಪೂರ್ಣ ಅಧಿಕಾರ ಗ್ರಾಮ ಪಂಚಾಯಿತಿಗಿರುತ್ತದೆ. ತಾಲ್ಲೂಕು ಪಂಚಾಯಿತಿಗೆ ಇರುವ ಅನುದಾನವನ್ನು ಇಲ್ಲಿನ ಸದಸ್ಯರ ಸಾಮಾನ್ಯಸಭೆಯಲ್ಲಿ ಅನುಮೋದನೆ ಪಡೆಯ ಬಹುದಾಗಿದೆ. ಈ ರೀತಿ ವಿಂಗಡಿಸಿದ ಅನುದಾನಗಳ ಕಾಮಗಾರಿಗಳ ಪಟ್ಟಿಯನ್ನು ಒಂದು ವಾರದೊಳಗೆ ತಾಲ್ಲೂಕು ಪಂಚಾಯಿತಿಗೆ ಸಲ್ಲಿಸಬೇಕು ಎಂದು ಕಾರ್ಯನಿರ್ವಹಣಾಧಿಕಾರಿಗಳು ಸಭೆಗೆ ತಿಳಿಸಿದರು.

      ಬಂಗಾರಗೆರೆ, ಕಾಲೋನಿ ಗಳಲ್ಲಿ ಕುಡಿಯುವ ನೀರಿನ ತೊಂದರೆಯಿರುವ ಬಗ್ಗೆ ಚೇತನಗಂಗಾಧರ್ ಗಮನ ಸೆಳೆದಾಗ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಹಣದಕೊರತೆಯಿದೆ, ಪರ್ಯಾಯವ್ಯವಸ್ಥೆಯ ಬಗ್ಗೆ ಗಮನಹರಿಸಲಾಗುವುದೆಂದರು.

      ಸದಸ್ಯ ಸಿಂಗದಹಳ್ಳಿ ರಾಜ್‍ಕುಮಾರ್ ಮಾತನಾಡಿ ಕೆಲವು ಗ್ರಾಮಪಂಚಾಯಿತಿಗಳಲ್ಲಿ ಕಾರ್ಯದರ್ಶಿಗಳು ಹಾಗು ಡಾಟಾ ಆಟರೇಟರ್‍ಗಳೇ ಗ್ರ್ಯಾಂಟ್ ಮನೆಗಳ ಗುತ್ತಿಗೆ ಮಾಡುತ್ತಿದ್ದು ಜಾಬ್‍ಕಾರ್ಡ್‍ಗಳನ್ನು ಅಕ್ರಮವಾಗಿ ಅವರ ಬಳಿಯಲ್ಲಿಯೇ ಇಟ್ಟುಕೊಂಡಿದ್ದಾರೆ, ಇದರ ಜೊತೆಗೆ ಉದ್ಯೋಗಖಾತ್ರಿ ಯೋಜನೆಯಲ್ಲಿಯೂಸಹ ಕಾಮಾಗಾರಿಗಳನ್ನು ತಮ್ಮ ದಾಖಲೆಗಳಲ್ಲಿ ಮಾಡಿ ಕೊಟ್ಯಾಂತರ ವಂಚನೆ ಮಾಡಿದ್ದು ಈ ಬಗ್ಗೆ ಸಮಗ್ರ ಮತ್ತು ಪ್ರಾಮಾಣಿಕ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಕಳೆದ ಹತ್ತು ವರ್ಷಗಳ ತಾಲ್ಲೂಕು ಪಂಚಾಯಿತಿ ಕಾಮಗಾರಿಗಳ ಲೆಖ್ಖಪರಿಶೋಧನೆಯಾಗದೆ ಹಾಗೆ ಉಳಿದಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ತಕ್ಷಣ ಆಡಿಟ್ ನಡೆಸಬೇಕೆಂದು ಒತ್ತಾಯಿಸಿದರು.

       ಅಧ್ಯಕ್ಷೆ ಚೇತನಗಂಗಾಧರ್ ಮಾತನಾಡಿ ಪಟ್ಟಣದ ನೆಹರೂ ವೃತ್ತದಲ್ಲಿನ ತಾಲ್ಲೂಕು ಪಂಚಾಯಿತಿ ಮಳಿಗೆಗಳ ರಿಪೇರಿಯಾಗಬೇಕಿದ್ದು ಮಳಿಗೆಗಳಲ್ಲಿರುವವರನ್ನು ತೆರವುಗೊಳಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ಸ್ಥಾಯಿಸಮಿತಿ ಅಧ್ಯಕ್ಷೆ ಗಂಗಮ್ಮ ಚಂದ್ರಯ್ಯ, ಸದಸ್ಯರಾದ ಶೈಲಾಶಶಿಧರ್, ಪ್ರಸನ್ನಕುಮಾರ್, ಕೇಶವಮೂರ್ತಿ, ಇಂದ್ರಕುಮಾರಿ, ಹುಳಿಯಾರ್‍ಕುಮಾರ್, ಕಲ್ಯಾಣಿಬಾಯಿ, ಹರ್ಷ, ಮಧು, ಕಲಾವತಿ, ಹೊನ್ನಮ್ಮ ಹಾಗೂ ಉದ್ಯೋಗಖಾತ್ರಿ ಸಹಾಯಕ ನಿರ್ದೇಶಕ ಸುನಿಲ್, ಯೋಜನಾಧಿಕಾರಿ ಮೂರ್ತಪ್ಪ ಮುಂತಾದವರಿದ್ದರು.

(Visited 13 times, 1 visits today)