ಚಿಕ್ಕನಾಯಕನಹಳ್ಳಿ:

      ಕೂಲಿ ಮಾಡಿ ಜೀವಿಸುವ ಬಡ ಕುಟುಂಬದ ಮಹಿಳೆಯೊಬ್ಬರಿಗೆ ಮಾಡದ ಸಾಲಕ್ಕೆ ಬ್ಯಾಂಕ್‍ನಿಂದ ರೂ.25ಲಕ್ಷದ ನೋಟೀಸ್ ನೀಡಿದ್ದು ಬಡ ಕುಟುಂಬಕ್ಕೆ ಆಘಾತ ನೀಡಿದೆ.

     ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆಹೋಬಳಿ ಕುಪ್ಪೂರು ಗ್ರಾಮದ ಎ.ಕೆ. ಕಾಲೋನಿವಾಸಿ ಜಯಮ್ಮ ಎಂಬ ಕೂಲಿಮಾಡುವ ಮಹಿಳೆಗೆ ರೂ.25ಲಕ್ಷದ ಸಾಲದ ನೋಟೀಸ್‍ನ್ನು ಚಿಕ್ಕನಾಯಕನಹಳ್ಳಿಯ ಕೆನರಾಬ್ಯಾಂಕ್ ನಿಂದ ನೀಡಲಾಗಿದೆ. ಅಂಚೆ ಮೂಲಕ ಬುಧವಾರ ಈ ನೊಟೀಸನ್ನು ಜಾರಿಮಾಡಲಾಗಿದೆ. ಸದರಿ ಸಾಲದ ನೋಟೀಸಿನಲ್ಲಿ ಈಕೆಯ ಹೆಸರಿನಲ್ಲಿ ಕೃಷಿಸಾಲವನ್ನು 31-3-2014ರಂದು ನೀಡಲಾಗಿದ್ದು ಇದುವರೆಗೂ ನೀವು ಯಾವುದೇ ಕಂತು, ಬಡ್ಡಿ ಹಾಗೂ ಇತರೆಖರ್ಚುಗಳನ್ನು ಕಟ್ಟದಕಾರಣ ರೂ.25ಲಕ್ಷ ವಾಗಿದ್ದು ಅಸಲು ಮತ್ತು ಇತರೆವೆಚ್ಚವನ್ನು ಕಟ್ಟಿದರೆ ಪೂರ್ತಿ ಬಡ್ಡಿಮನ್ನಾಮಾಡುವುದಾಗಿ ತಿಳಿಸಿದ್ದಾರೆ.

ಆದರೆ ಒಂದು ಗುಂಟೆ ಜಮೀನುಸಹ ಇಲ್ಲದ ಜಯಮ್ಮನವರಿಗೆ ರೂ.25ಲಕ್ಷಸಾಲ ನೀಡಲಾಗಿದೆ, ಅಸಲನ್ನು ಕಟ್ಟಿ ಎಂಬ ನೋಟೀಸ್ ನೀಡಿರುವುದನ್ನು ಕಂಡು ಆಕೆಗೆ ದಿಕ್ಕೇತೋಚದಂತಾಗಿದೆ. ಪಶುಇಲಾಖೆಯಿಂದ ಕುರಿಸಾಕಾಣಿಕೆಗಾಗಿ ಹಲವು ವರ್ಷಗಳಹಿಂದೆ ಹತ್ತು ಸಾವಿರ ಸಾಲಮಾಡಿ ತೀರಿಸಿದ್ದು ಬಿಟ್ಟರೆ ನಾನು ಬ್ಯಾಂಕ್‍ಕಡೆ ಹೋಗಿಲ್ಲ. ಆದರೆ ಬ್ಯಾಂಕ್‍ನವರು ಪಡೆಯದ ಸಾಲಕ್ಕೆ ಈ ನೋಟೀಸ್ ನೀಡಿದ್ದಾರೆ. ಇದರಿಂದ ನಾನು ಮತ್ತು ನಮ್ಮ ಕುಟುಂಬ ಮಾನಸಿಕವಾಗಿ ಕುಗ್ಗಿಹೋಗಿದ್ದು ದಿಕ್ಕೇ ತೋಚದಂತಾಗಿದೆ ಎಂದು ಜಯಮ್ಮ ತಮ್ಮ ಅಳಲನ್ನು ವ್ಯಕ್ತಪಡಿಸಿದರು.

     ಜಯಮ್ಮನ ಪತಿ ಎಂಜಾರಪ್ಪ ಮಾತನಾಡಿ ನಾವು ಓದಿಕೊಂಡವರಲ್ಲ, ಸಾವಿರಕ್ಕೆ ಎಷ್ಟು ಸೊನ್ನೆ ಎಂಬುದೇ ತಿಳಿಯದ ನಾವು ಬಡವರಾಗಿದ್ದು ಕೂಲಿಮಾಡಿ ಬದುಕು ಸಾಗಿಸುತ್ತಿದ್ದೇವೆ ಆದರೆ ಬ್ಯಾಂಕ್‍ನವರು 25 ಲಕ್ಷ ಕೃಷಿ ಸಾಲಪಡೆದಿದ್ದೀರಿ ಎಂದು ಕಂತುಕಟ್ಟಿ ಎಂದು ನನ್ನ ಹೆಂಡತಿಹೆಸರಿಗೆ ನೋಟೀಸ್ ನೀಡಿರುವುದು ನಮಗೆ ಬರಸಿಡಿಲು ಬಡಿದಂತಾಗಿದೆ, ಈ ನೋಟೀಸಿನಿಂದ ಕಂಗಾಲಾಗಿರುವ ನನ್ನ ಹೆಂಡತಿ ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದು, ಈಗ ನೋಟೀಸಿನಿಂದ ಮತ್ತೂ ಕೆಂಗೆಟ್ಟಿಹೋಗಿದ್ದು ಆಕೆ ಮಾನಸಿಕವಾಗಿ ಕುಗ್ಗಿಹೋಗಿದ್ದಾಳೆ, ಕೆನರಾಬ್ಯಾಂಕ್‍ನಂತಹ ಹೊಣೆಗಾರಿಕೆಯಿರುವ ಸಂಸ್ಥೆ ಮುಗ್ದ ಜನರಮೇಲೆ ಇಂತಹ ಅಸ್ತ್ರಬಳಸುತ್ತಿರುವುದು ಆಘಾತವೆನಿಸಿದೆ ತಕ್ಷಣ ಈ ಬ್ಯಾಂಕ್‍ನ ಕೇಂದ್ರಿಯ ಸಂಸ್ಥೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ನೀಡಬೇಕೆಂದು ಅವಲತ್ತು ತೋಡಿಕೊಂಡಿದ್ದಾರೆ.

(Visited 17 times, 1 visits today)