ಕೋವಿಡ್ -19 ನಿಗ್ರಹ; ಇಂದಿನಿಂದ ‘ಕೋವಿಶೀಲ್ಡ್’ ಲಸಿಕಾ ವಿತರಣೆ

 ತುಮಕೂರು : 

      ಕೋವಿಡ್ -19 ನಿಗ್ರಹಕ್ಕಾಗಿ ಬಿಡುಗಡೆಗೊಂಡಿರುವ ‘ಕೋವಿಶೀಲ್ಡ್’ ಲಸಿಕಾ ವಿತರಣಾ ಅಭಿಯಾನ ದೇಶದಾದ್ಯಂತ ಇಂದಿನಿಂದ (ಜನವರಿ 16) ಪ್ರಾರಂಭಗೊಳ್ಳಲಿದ್ದು, ಜಿಲ್ಲೆಯಲ್ಲಿ ಲಸಿಕೆ ನೀಡಲು ಮಾರ್ಗಸೂಚಿ ಅನ್ವಯ ಸಕಲ ಸಿದ್ಧತೆ ಜಿಲ್ಲಾಡಳಿತ ಮಾಡಿಕೊಂಡಿದೆ.

      ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯನ್ನು ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಅನುಸರಿಸಿ ವಿತರಣೆ ಮಾಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.

      ಮಾನ್ಯ ಪ್ರಧಾನಮಂತ್ರಿಗಳು ಲಸಿಕಾ ವಿತರಣೆಗೆ ಚಾಲನೆ ನೀಡಿದ ಬಳಿಕ ಜಿಲ್ಲೆಯಲ್ಲಿ ಲಸಿಕಾ ವಿತರಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತೆಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಅರೆ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಮುಂಚೂಣಿಯ ಕೊರೋನಾ ಯೋಧರಿಗೆ ಲಸಿಕೆ ವಿತರಿಸಲಾಗುವುದು ಎಂದು ತಿಳಿಸಿದರು.

      ಸಭೆಯಲ್ಲಿ ಮಾತನಾಡಿದ ಡಿಎಚ್‍ಒ ಡಾ. ನಾಗೇಂದ್ರಪ್ಪ ಅವರು, ಜಿಲ್ಲೆಯಲ್ಲಿ ಲಸಿಕೆ ವಿತರಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್ -19 ಲಸಿಕೆ ಹಾಕಿಸಿಕೊಳ್ಳಲು 20ಸಾವಿರ ಮಂದಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ 12 ಸಾವಿರ ಮಂದಿಗೆ ಲಸಿಕೆ ನೀಡಲಾಗುತ್ತದೆ. ಈ ಪೈಕಿ ಮೊದಲ ದಿನ ಇಂದು( ಜನವರಿ 16ರಂದು) 1,211 ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು. ಉಳಿದ ಫಲಾನುಭವಿಗಳಿಗೆ ಸೋಮವಾರದಿಂದ ಮುಂದುವರೆಯಲಿರುವ ಲಸಿಕಾ ಅಭಿಯಾನದಲ್ಲಿ ಲಸಿಕೆ ನೀಡಲಾಗುತ್ತದೆ ಎಂದರು.

      ಮೊದಲ ಹಂತದ 13 ಕೇಂದ್ರಗಳಲ್ಲಿ ಲಸಿಕಾ ವಿತರಣೆ ನಡೆಯಲಿದೆ. ಜಿಲ್ಲೆಗೆ 12 ಸಾವಿರ ‘ಕೋವಿಶೀಲ್ಡ್’ ಡೋಸ್ ಲಸಿಕೆ ಬಂದಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಛೇರಿ ಆವರಣದಲ್ಲಿರುವ ಜಿಲ್ಲಾ ಲಸಿಕಾ ಉಗ್ರಾಣದಲ್ಲಿ ಲಸಿಕೆ ಶೇಖರಿಸಲಾಗಿತ್ತು. ಈ ಲಸಿಕೆಯನ್ನು ಶುಕ್ರವಾರ 13 ವಿತರಣಾ ಕೇಂದ್ರಗಳಿಗೆ ರವಾನಿಸಲಾಗಿದೆ. ಜಿಲ್ಲಾಸ್ಪತ್ರೆ, ಶ್ರೀದೇವಿ ಮೆಡಿಕಲ್ ಕಾಲೇಜು, ಕ್ಯಾತ್ಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರ, ಕೋತಿ ತೋಪಿನ ನಗರ ಆರೋಗ್ಯ ಕೇಂದ್ರ ಹಾಗೂ ಜಿಲ್ಲೆಯ 9 ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಿಸಲಾಗುವುದು ಎಂದು ತಿಳಿಸಿದರು.

      ಸರ್ಕಾರದ ಮಾರ್ಗಸೂಚಿ ಅನ್ವಯ ಸುರಕ್ಷಿತವಾಗಿ ಲಸಿಕೆ ವಿತರಣೆ ಮಾಡಲಾಗುವುದು. ಮುಂದಿನ ಹಂತದಲ್ಲಿಯೂ ಯಶಸ್ವಿ ಲಸಿಕಾ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

      ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಡಾ. ಕೇಶವ್‍ರಾಜ್, ಡಾ. ಮೋಹನ್ ದಾಸ್, ಡಾ. ಸನತ್ ಮತ್ತಿತರರು ಭಾಗವಹಿಸಿದ್ದರು.

(Visited 5 times, 1 visits today)

Related posts

Leave a Comment