ತುಮಕೂರು :

      ಮಹಾತ್ಮ ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಮೇಯರ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ನಗರದ ಭದ್ರಮ್ಮ ಛತ್ರದ ಸರ್ಕಲ್‍ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

       ಮೇಯರ್ ಫರಿದಾ ಬೇಗಂ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸಂಸದ ಅನಂತ್‍ಕುಮಾರ್ ಹೆಗಡೆಯವರು ದೇಶಕ್ಕೆ ಸ್ವತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿ ಬಗ್ಗೆ ಅವಹೇಳನವಾಗಿದೆ ಹೇಳಿಕೆ ನೀಡಿರುವುದು ತಪ್ಪು. ಅನಂತ್ ಕುಮಾರ್ ಹೆಗಡೆ ಕೇವಲ ನಾಲ್ಕು ವರ್ಷಕ್ಕೆ ಮನೆಗೆ ಹೋಗುವವರು ಆದರೆ ಮಹಾತ್ಮ ಗಾಂಧಿ ಈ ಭೂಮಂಡಲ ಇರುವವರೆಗೂ ಅಜರಾಮರವಾಗಿರುವವರು. ಅವರ ವಿರುದ್ಧ ಹೇಳಿಕೆ ಮಾತನಾಡುವುದು ಖಂಡನೀಯ ಎಂದರು.

      ಒಂದು ಪಕ್ಷ ಸಿಕ್ಕದೆ, ಸ್ಥಾನ ಸಿಕ್ಕದೆ ಎಂದು ಮನಸ್ಸಿಗೆ ಬಂದಂತೆ ಸಿಎಎ, ಎನ್‍ಆರ್ಸಿ ತಂದರೂ ನಮಗೆ ಭಯವಿಲ್ಲ. ನಾವೆಲ್ಲಾ ಭಾರತೀಯರು ಒಂದೇ, ನಮ್ಮನ್ನು ಬೇರೆ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ಸಂವಿಧಾನದ ಬಗ್ಗೆ ಅವಹೇಳನ ಮಾಡುವುದು, ಗಾಂಧಿ ಬಗ್ಗೆ ವಿವಾದ ಹೇಳಿಕೆ ನೀಡುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

      ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಗಾಂಧೀಜಿಯವರ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಹೆಗಡೆಯವರನ್ನು ಮಾನ, ಮರ್ಯಾದೆ ಇದ್ದರೆ ಪಕ್ಷದಿಂದ ಉಚ್ಚಾಟನೆ ಮಾಡಲಿ. ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಗಾಂಧಿಯನ್ನೇ ಅವಹೇಳಿಸುವ ಬಿಜೆಪಿಯವರ ಅಜೆಂಡಾ ಏನು ಎಂದು ಪ್ರಶ್ನಿಸಿದರು.

      ಸಿಎಎ ಜಾರಿಗೆ ತಂದು ದೇಶವನ್ನು ಇಬ್ಬಾಗ ಮಾಡಲು ಹೊರಟಿದ್ದಾರೆ. ಈ ಹಿಂದೆ ಮೋದಿಯವರು ಮಠಕ್ಕೆ ಬಂದು ಹೋಗಿ ಈಗ ಮಠಕ್ಕೆ ಆಹಾರವನ್ನು ನಿಲ್ಲಿಸಿದ್ದಾರೆ. ಅವರು ಶ್ರೀಗಳ ಮಠಕ್ಕೆ ಬಂದದ್ದು ಇದಕ್ಕೇನಾ. ಹಿಂದಿನಿಂದಲೂ ದಾಸೋಹಕ್ಕೆ ಹೆಸರುವಾಸಿಯಾಗಿರುವ ಸಿದ್ದಗಂಗಾ ಮಠದ ದಾಸೋಹವನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ ಎಂದ ಅವರು ಅನಂತಕುಮಾರ್ ಹೆಗಡೆ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಳ್ಳದಿದ್ದರೆ ಮುಂದಿನ ದಿನಗಳನ್ನು ಗಂಭೀರ ಹೋರಾಟ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರೆ ಸುಜಾತ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಕುಮಾರಸ್ವಾಮಿ, ಗೀತ ಎಸ್.ವಿ, ನರಸಿಂಹಮೂರ್ತಿ, ಮೆಹಬೂಬ್ ಪಾಷ, ಮಂಗಳಮ್ಮ, ಗುರುಪ್ರಸಾದ್, ದೀಪಕ್ ರಾಜು, ಕೆಜಿಎನ್ ರಫೀಕ್ ಸೇರಿದಂತೆ ಮೊದಲಾದವರು ಇದ್ದರು.

(Visited 5 times, 1 visits today)