ಕೋವಿಡ್ ತಪಾಸಣೆಗೆ ಬಾರದ ಜನ

ಹುಳಿಯಾರು:

      ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ.

      ಗ್ರಾಪಂ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷ ಕೆ.ಸಿ.ವಿಕಾಸ್ ಹಾಗೂ ಪಿಡಿಓ ಬಲರಾಮಯ್ಯ ಆರೋಗ್ಯ ಇಲಾಖೆಯ ಮೇಲೆ ಒತ್ತಡ ತಂದು ಹಳ್ಳಿಹಳ್ಳಿಯಲ್ಲಿ ಕೊರೋನಾ ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ.

      ಪ್ರಾರಂಭದಲ್ಲಿ 2500 ಜನಸಂಖ್ಯೆಯುಳ್ಳ ಕೆಂಕೆರೆಯಲ್ಲಿ 2 ಸಲ ಕೊವಿಡ್ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಮೊದಲ ದಿನ 41 ಎರಡನೇ ದಿನ 52 ಮಂದಿ ಮಾತ್ರ ತಪಾಸಣೆ ಮಾಡಿಸಿಕೊಂಡಿದ್ದಾರೆ. 616 ಜನಸಂಖ್ಯೆಯುಳ್ಳ ಕೆ.ಸಿ.ಪಾಳ್ಯದಲ್ಲಿ 28 ಮಂದಿ ಹಾಗೂ 389 ಜನಸಂಖ್ಯೆಯುಳ್ಳ ಗೊಲ್ಲರಹಟ್ಟಿಯಲ್ಲಿ 58 ಮಂದಿ ಮಾತ್ರ ತಪಾಸಣೆ ಮಾಡಿಸಿಕೊಂಡಿದ್ದಾರೆ.

ಸಾಕಷ್ಟು ತಿಳಿ ಹೇಳಿದರೂ ಜನ ಬರುತ್ತಿಲ್ಲ. ಕೋವಿಡ್ ಪರೀಕ್ಷೆಯ ದಿನ ಮನೆಗೆ ಬೀಗ ಹಾಕಿ ಹೊಲತೋಟಕ್ಕೆ ಹೋಗುತ್ತಾರೆ. ಒಟ್ಟಾರೆ ಕೋವಿಡ್ ಪರೀಕ್ಷೆಗೆ ಬರುವ ಜನರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಜನರ ಸಹಕಾರ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಗ್ರಾಪಂ ಸದಸ್ಯ ವಿಕಾಸ್ ಹೇಳಿದರು.

      ಗ್ರಾಮ ಪಂಚಾಯಿತಿ ಪಿಡಿಒ ಬಲರಾಮಯ್ಯ ಮಾತನಾಡಿ, ಆಶಾ, ಅಂಗನವಾಡಿ, ಗ್ರಾಪಂ ಸದಸ್ಯರು, ಸಿಬ್ಬಂದಿ ಎಲ್ಲರೂ ಮನೆಗಳಿಗೆ ತೆರಳಿ ಮನವೊಲಿಸುವ ಕಾರ್ಯ ಮಾಡುತ್ತಿದ್ದೇವೆ. ಆದರೂ ನಿರೀಕ್ಷಿಸಿದ ಮಟ್ಟದಲ್ಲಿ ಪ್ರಗತಿ ಸಾಧಿಸಲಾಗುತ್ತಿಲ್ಲ. ಸಾರ್ವಜನಿಕರು ಭಯಪಡದೆ ರೋಗ ನಿಯಂತ್ರಿಸಲು ಸಹಕರಿಸಬೇಕು ಎಂದರು. ಕೆಂಕೆರೆ ಗ್ರಾಪಂ ವ್ಯಾಪ್ತಿಯ ಕೆ.ಎಸ್.ಪಾಳ್ಯ ಗ್ರಾಮವೊಂದನ್ನು ಬಿಟ್ಟು ಉಳಿದ ಎಲ್ಲಾ ಊರುಗಳಲ್ಲೂ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 165 ಮಂದಿಗೆ ಸೋಂಕು ದೃಢವಾಗಿದ್ದು ಇಲ್ಲಿಯವರೆಗೆ 127 ಮಂದಿ ಗುಣಮುಖರಾಗಿದ್ದಾರೆ. ಐವರು ಸಾವನ್ನಪ್ಪಿದ್ದಾರೆ. 14 ಮಂದಿ ಹೋಮ್ ಕ್ವಾರಂಟೈನ್, 13 ಸಿಸಿ ಸೆಂಟರ್, 6 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೊಂದು ಗ್ರಾಮದಲ್ಲಿ ತಪಾಸಣೆ ಮಾಡಲಿದ್ದು ಬರದಲೇಪಾಳ್ಯ, ಹೊನ್ನಯ್ಯನಪಾಳ್ಯದಲ್ಲಿ ಶಿಬಿರ ನಡೆಯಲಿದೆ.

(Visited 4 times, 1 visits today)

Related posts

Leave a Comment