ತುಮಕೂರು:

      ನಗರಕ್ಕೆ ಸಮೀಪವಿರುವ ಬೆಳಗುಂಬ ರೆಡ್‍ಕ್ರಾಸ್ ಕಟ್ಟಡದಲ್ಲಿ ನಡೆಯುತ್ತಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ತಹಶೀಲ್ದಾರ್ ಮೋಹನ್ ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಮೋಹನ್ ಸೇರಿದಂತೆ ಹಲವರು ಗುರುವಾರ ಭೇಟಿ ನೀಡಿ ಸೋಂಕಿತರಿಗೆ ಸಿಗುತ್ತಿರುವ ಸೌಲಭ್ಯಗಳು ಮತ್ತು ಸ್ವಚ್ಚತೆಗೆ ಆಧ್ಯತೆ ನೀಡಿರುವುದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಿ.ಸಿ.ಗೌರಿಶಂಕರ್ ಬೆಳಗುಂಬ ರೆಡ್ ಕ್ರಾಸ್ ಕಟ್ಟಡದಲ್ಲಿ ವಿವಿಧ ಸಂಘ ಸಂಸ್ಥೆಗಳೊಡಗೂಡಿ ಮುರಳೀಧರ್ ಹಾಲಪ್ಪ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಛೇರ್ಮೆನ್ ನಾಗಣ್ಣ ಅವರು ಕೋವಿಡ್ ಆರೈಕೆ ಕೇಂದ್ರವನ್ನು ಆರಂಭಿಸಿರುವುದು ಈ ಭಾಗದ ಜನರಿಗೆ ಅಷ್ಟೇ ಅಲ್ಲದೇ ವಿವಿಧೆಡೆಗಳಿಂದ ಬರುವ ಸೋಂಕಿತರಿಗೂ ಅನುಕೂಲವಾಗಿದೆ ಎಂದರು. 

ಇಲ್ಲಿ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಸೋಂಕಿತರಿಗೆ ಔಷಧಿ, ಊಟೋಪಚಾರ, ಹಣ್ಣುಗಳು, ಡ್ರೈಫ್ರೂಟ್ಸ್ ಸೇರಿದಂತೆ ಮನೆಗಿಂತಲೂ ಇಲ್ಲೇ ಹೆಚ್ಚಿನ ಸೌಲಭ್ಯಗಳನ್ನು ಸೋಂಕಿತರು ಪಡೆದುಕೊಂಡು ಗುಣಮುಖರಾಗಿ ಮನೆಗೆ ವಾಪಸ್ಸಾಗುತ್ತಿದ್ದಾರೆ ಎಂದು ಶ್ಲಾಘಿಸಿದರು.

      ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ವಿವಿಧ ಸಂಘ ಸಂಸ್ಥೆಗಳು ಕೊರೋನ ವಿರುದ್ಧ ಹೋರಾಡಲು ಕೈಜೋಡಿಸಿ, ಸೇವೆಗೆ ಮುಂದಾಗಿದ್ದಾರೆ. ಹೋಂ ಕ್ವಾರಂಟೈನ್‍ನಲ್ಲಿರುವವರನ್ನು ಇವರೇ ಸ್ವತಃ ಖುದ್ದು ಭೇಟಿ ಮಾಡಿ ಸೋಂಕಿತರನ್ನು ಇಲ್ಲಿರುವ ಕೇರ್ ಸೆಂಟರ್‍ಗೆ ಕರೆ ತಂದು ಆರೈಕೆ ಮಾಡುತ್ತಿದ್ದಾರೆ. ತಾಲ್ಲೂಕಿನ ಜನರ ಪರವಾಗಿ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ ಎಂದರು.
ತುಮಕೂರು ಗ್ರಾಮಾಂತರವೂ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ವ್ಯಾಕ್ಸಿನೇಷನ್ ಅಭಾವ ಸೃಷ್ಠಿಯಾಗಿದ್ದು, 18 ವರ್ಷ ಮೇಲ್ಪಟ್ಟವರು ಆನ್‍ಲೈನ್‍ನಲ್ಲಿ ನೊಂದಾಯಿಸಿದ್ದರೂ ವ್ಯಾಕ್ಸಿನ್ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ವ್ಯಾಕ್ಸಿನ್ ಬಗ್ಗೆ ಹೆಚ್ಚು ಗಮನ ಹರಿಸಿ ವ್ಯಾಕ್ಸಿನ್ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

      ಕೆಪಿಸಿಸಿ ಮಾಧ್ಯಮ ವಿಶ್ಲೇಷಕರು ಹಾಗೂ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಮಾತನಾಡಿ, ಈ ಕೋವಿಡ್ ಕೇರ್ ಸೆಂಟರ್‍ನಲ್ಲಿ ಇಲ್ಲಿಯವರೆಗೂ 59 ಮಂದಿ ಸೋಂಕಿತರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿಯೊಬ್ಬರೂ ಇಲ್ಲಿ ಸಿಗುವ ಸೌಲಭ್ಯಗಳನ್ನು ನೋಡಿ ಅವರಿಗೆ ಧೈರ್ಯ ಬಂದಿದೆ. ಬೆಳಿಗ್ಗೆ ತಿಂಡಿ, ಊಟದ ವ್ಯವಸ್ಥೆ, ಔಷಧಿ, ಪ್ರೋಟೀನ್, ವಿಟಮಿನ್ ಹಣ್ಣುಗಳು, ಡ್ರೈಫ್ರೂಟ್ಸ್, ಜ್ಯೂಸ್ ಸೇರಿದಂತೆ ಮನೆಯ ವಾತಾವರಣದಂತೆಯೇ ಇಲ್ಲಿಯೂ ಸೋಂಕಿತರನ್ನು ಆರೈಕೆ ಮಾಡಲಾಗುತ್ತಿದೆ ಎಂದರು.

(Visited 4 times, 1 visits today)