ತುಮಕೂರು :

      ಸ್ಪೋಟಕ ಪಟಾಕಿಗಳನ್ನು ಅಧಿಕೃತವಾಗಿ ಪರವಾನಗಿ(ಅನುಮತಿ) ಪಡೆದ ಮಾರಾಟಗಾರರು ಮಾತ್ರ ಆದೇಶಾನುಸಾರ ಮಾರಾಟ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸೂಚನೆ ನೀಡಿದರು.

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಪಾಲಿಸಬೇಕಾದ ನಿಯಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯ ಹಾಗೂ ಪಟಾಕಿ ಸಿಡಿಸಿದ ನಂತರ ಘನತ್ಯಾಜ್ಯ ವಸ್ತುಗಳಿಂದ ಮಾಲಿನ್ಯ ಉಂಟಾಗುವುದರಿಂದ ಸರಣಿ ಸ್ಪೋಟಕ ಪಟಾಕಿಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ ಎಂದರು.

      ಸಾರ್ವಜನಿಕರು ದೀಪಾವಳಿ ಹಬ್ಬದ ಸಮಯದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿಯನ್ನ ಸಿಡಿಸಬೇಕು. ಶಾಲಾ ಕಾಲೇಜುಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ ಎಂದು ತಿಳಿಸಿದರಲ್ಲದೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ದೀಪಾವಳಿ ಹಬ್ಬದ ದಿನದಿಂದ 7 ದಿನಗಳವರೆಗೆ ಪಟಾಕಿ ಸಿಡಿಸುವುದರ ಬಗ್ಗೆ ಮೇಲ್ವಿಚಾರಣೆ ಮಾಡಬೇಕು. ಪಾಲಿಕೆ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು, ಎಲ್ಲ ಪಂಚಾಯಿತಿಗಳು ಸಾಮೂಹಿಕ ಪಟಾಕಿ ಸಿಡಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಪಟಾಕಿ ಸಿಡಿತ ಪ್ರಕ್ರಿಯೆಯನ್ನು ನಿಗಧಿತ ಸಮಯದಲ್ಲಿ ನಡೆಯುವಂತೆ ನಿಗಾ ವಹಿಸಬೇಕು ಹಾಗೂ ನಿಷೇಧಿತ ಸ್ಫೋಟಕ ಪಟಾಕಿಗಳ ಮಾರಾಟವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸಂಬಂಧಿಸಿದ ಠಾಣಾಧಿಕಾರಿಗಳನ್ನು ತಪ್ಪಿತಸ್ಥರೆಂದು ನಿರ್ಣಯಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 22 times, 1 visits today)