ದೇವರಾಯನದುರ್ಗ ರಸ್ತೆ ಬದಿಯ ಜಂಗಲ್ ತೆರವಿಗೆ ಡಿಸಿ ಸೂಚನೆ

ತುಮಕೂರು:

      ತುಮಕೂರು ತಾಲ್ಲೂಕು ದೇವರಾಯನದುರ್ಗ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ಜಾತ್ರಾ ಮಹೋತ್ಸವವು ಮಾರ್ಚ್ 13 ರಿಂದ 25ರವರೆಗೆ ಜರುಗಲಿದ್ದು, ಜಾತ್ರಾ ಸಮಯದಲ್ಲಿ ಭಕ್ತಾದಿಗಳಿಗೆ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಆರತಿ ಬಂಡೆಯಿಂದ ದೇವರಾಯನದುರ್ಗ ಗ್ರಾಮದ ರಸ್ತೆವರೆಗೂ ಇರುವ ಹಳ್ಳಗಳನ್ನು ಮುಚ್ಚಿಸಿ, ಡಾಂಬರೀಕರಣಗೊಳಿಸಿ, ರಸ್ತೆ ಬದಿಯಲ್ಲಿರುವ ಜಂಗಲ್ ಅನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.

      ತಮ್ಮ ಕಚೇರಿಯಲ್ಲಿ ಸೋಮವಾರ ಜಾತ್ರಾ ಕಾರ್ಯಕ್ರಮಗಳ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಮಾತನಾಡಿದ ಅವರು ಮಾರ್ಚ್ 20ರಂದು ನಡೆಯಲಿರುವ ಶ್ರೀ ಸ್ವಾಮಿಯ ಬ್ರಹ್ಮರಥೋತ್ಸವದಲ್ಲಿ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕುಡಿಯುವ ನೀರು, ಶೌಚಾಲಯ, ತಾತ್ಕಾಲಿಕ ವಾಹನ ನಿಲ್ದಾಣ, ಬ್ಯಾರಿಕೇಡಿಂಗ್, ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಜಾತ್ರೆ ಕಾರ್ಯಕ್ರಮಗಳು ನಿರ್ವಿಘ್ನವಾಗಿ ಜರುಗಬೇಕು. ಮುಂಜಾಗ್ರತಾ ಕ್ರಮವಾಗಿ ತುರ್ತು ಚಿಕಿತ್ಸಾ ವಾಹನ, ಅಗ್ನಿಶಾಮಕ ವಾಹನದೊಂದಿಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

      ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಳ್ಳಲು ಬರುವ ಭಕ್ತಾದಿಗಳಿಗಾಗಿ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಶ್ರೀ ಕ್ಷೇತ್ರಕ್ಕೆ ಖಾಸಗಿ ವಾಹನಗಳನ್ನು ನಿಷೇಧಿಸಲಾಗುವುದು. ಅಂತಸ್ತು ಬೆಟ್ಟದಿಂದ ಕುಂಭಿ ಬೆಟ್ಟಕ್ಕೆ ಕೆಎಸ್‍ಆರ್‍ಟಿಸಿ ಮಿನಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುವುದು ಎಂದರಲ್ಲದೆ ಸ್ವಾಮಿಯ ರಥಕ್ಕೆ ಅಳವಡಿಸಿರುವ ಹೊಸ ಕಬ್ಬಿಣದ ಗಾಲಿಗಳಿಗೆ ಬಣ್ಣ ಲೇಪಿಸಿ ರಥದ ಪ್ರಾಯೋಗಿಕ ಪರೀಕ್ಷೆ ಮಾಡುವ ಮೂಲಕ ರಥದ ದೃಢತೆ ಬಗ್ಗೆ ಒಂದು ತಿಂಗಳ ಮುಂಚಿತವಾಗಿಯೇ ಲೋಕೋಪಯೋಗಿ ಇಲಾಖೆಯಿಂದ ಧೃಡೀಕರಣ ಪತ್ರ ಪಡೆಯಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

       ಜಾತ್ರೆ ಸಂದರ್ಭದಲ್ಲಿ ಯಾವುದೇ ರೀತಿಯ ಗಲಭೆಗಳು ಉಂಟಾಗದಂತೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಜಿಲ್ಲಾ ಖಜಾನೆಯಿಂದ ದೇವಾಲಯಕ್ಕೆ ಆಭರಣಗಳನ್ನು ತೆಗೆದು ಕೊಂಡು ಬರುವಾಗ ಹಾಗೂ ಹೋಗುವಾಗ ಇಬ್ಬರು ದಪೇದಾರ್ ಸಿಬ್ಬಂದಿ ಮತ್ತು 10 ಜನ ಗನ್ ಮ್ಯಾನ್‍ಗಳನ್ನು ನಿಯೋಜಿಸಿ ಸೂಕ್ತ ರಕ್ಷಣೆ ಒದಗಿಸಬೇಕು. ರಥ ಬೀದಿಯಲ್ಲಿ ತೇರು ಎಳೆಯುವಾಗ ಅನಾನುಕೂಲವಾಗದಂತೆ ವಿದ್ಯುತ್ ಕೇಬಲ್ ಮತ್ತಿತರ ಯಾವುದೇ ರೀತಿಯ ಅಡಚಣೆಗಳಿದ್ದಲ್ಲಿ ಕೂಡಲೇ ತೆರವುಗೊಳಿಸಲು ಕ್ರಮ ವಹಿಸಬೇಕೆಂದು ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಮುಜರಾಯಿ ಇಲಾಖೆ ತಹಶೀಲ್ದಾರ್ ಸಿದ್ದಗಂಗಮ್ಮ, ಪೊಲೀಸ್ ಅಧಿಕಾರಿಗಳು, ದೇವಸ್ಥಾನದ ಅರ್ಚಕರು, ದೇವರಾಯನದುರ್ಗ ಗ್ರಾಮದ ಮುಖಂಡರು ಹಾಜರಿದ್ದರು.

(Visited 73 times, 1 visits today)

Related posts