ಪೊಲೀಸರ ಗತ್ತು : ಬಡವರ ಅನ್ನಕ್ಕೆ ಕುತ್ತು

       ತುಮಕೂರು ನಗರದ ನಾಗರೀಕರು ಪೊಲೀಸ್ ಇಲಾಖೆಯನ್ನು ಕಂಡು ಬೇಸರಪಟ್ಟುಕೊಳ್ಳುವಂತಹ ದುಸ್ಥಿತಿ ಎದುರಾಗಿದೆ. ಪೊಲೀಸ್ ಇಲಾಖೆ ಅಪರಾಧ ಪ್ರಕರಣಗಳನ್ನ ತಡೆಯುವ ನಿಟ್ಟಿನಲ್ಲಿ ಇನ್ನಿಲ್ಲದ ಕಸರತ್ತನ್ನ ಮಾಡುತ್ತಿದೆಯೇನೋ ಎಂಬ ಭಾವನೆ ಎದುರಾಗುತ್ತಿದೆ. ಅಪರಾಧಗಳ ನಿಯಂತ್ರಣದ ನೇಪತ್ಯದಲ್ಲಿ ಬಡವರ್ಗದ ಜನಸಾಮಾನ್ಯರ ತುತ್ತು ಅನ್ನಕ್ಕೆ ಕುತ್ತು ತರುತ್ತಿದ್ದು, ರಾತ್ರಿ ವೇಳೆಯಲ್ಲಿ ಅನ್ನಕ್ಕಾಗಿ ಹಾಹಾಕಾರ ಪಡುವಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಸಿಲುಕಿ ನಲುಗುತ್ತಿದ್ದು, ಯಾರು ಯಾರನ್ನ, ಯಾವ ರೀತಿಯಲ್ಲಿ ನಿಯಂತ್ರಣಕ್ಕೆ ತರುತ್ತಿದ್ದಾರೆ ಎಂಬುದೇ ಹಾಸ್ಯಾಸ್ಪದವಾಗಿದೆ. ರಾತ್ರಿ 11 ಗಂಟೆ ಕಳೆದರೂ ಬಾರ್ ಅಂಡ್ ರೆಸ್ಟೋರೆಂಟ್‍ಗಳು ರಾಜಾರೋಷವಾಗಿ ತೆರೆಯುತ್ತಿದ್ದು, ಇವುಗಳನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ಅಸಹಾಯಕವಾಗಿದೆಯೇ..? ಎನ್ನುವಂತಹ ಪ್ರಶ್ನೆ ಕಾಡುತ್ತಿದೆ. ಕಾರಣ, ರಾಜ್ಯ ಸರ್ಕಾರ ಮತ್ತು ರಾಜ್ಯ ಅಬಕಾರಿ ಇಲಾಖೆ ಯಾವ ಯಾವ ಹಂತದ ಮದ್ಯ ಮಾರಾಟ ಮಳಿಗೆಗಳಿಗೆ ತೆರೆಯುವ ಮತ್ತು ಮುಚ್ಚುವ ಸಮಯವನ್ನು ನಿಗಧಿಪಡಿಸಿದ್ದು, ಅಬಕಾರಿ ಇಲಾಖೆಯ ಆದೇಶದನ್ವಯ ಮದ್ಯ ಮಾರಾಟಗಾರರು ಇಲಾಖೆಯ ನಿಬಂಧನೆಗಳ ಅನುಸಾರವಾಗಿ ಮದ್ಯ ಮಾರಾಟವನ್ನು ಸ್ಥಗಿತಗೊಳಿಸುತ್ತಿದ್ದಾರೆ.

      ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವ ನೆಪದಲ್ಲಿ, ಜಿಲ್ಲಾ ಕೇಂದ್ರವಾಗಿರುವ ತುಮಕೂರು ನಗರದ ಎಲ್ಲಾ ಹೋಟೆಲ್‍ಗಳು ಮತ್ತು ಅಂಗಡಿಗಳು, ಚಹಾ ಅಂಗಡಿಗಳನ್ನೂ ಸೇರಿದಂತೆ ರಾತ್ರಿ 10ಕ್ಕೆ ಮುಚ್ಚಿಸುತ್ತಿರುವುದರಿಂದ ಕೆಳವರ್ಗದ ಸಾಮಾನ್ಯ ಜನರು ಮತ್ತು ಪ್ರಯಾಣಿಕರು ರಾತ್ರಿಯಲ್ಲಿ ಹಸಿವಿನಿಂದ ಬಳಲುವಂತಹ ಶೋಚನೀಯ ಸ್ಥಿತಿಗೆ ತಂದು ನಿಲ್ಲಿಸಿರುವುದು ಬೇರ್ಯಾರೂ ಅಲ್ಲ, ತುಮಕೂರು ನಗರದ ಪೊಲೀಸರು. ತಾವು ಮಾಡುತ್ತಿರುವ ಕೆಲವು ವಿಚಾರಗಳನ್ನು ಜನಸಾಮಾನ್ಯರು ಗಮನಿಸದಂತೆ ಅವರ ಮನಸ್ಸನ್ನು ಬೇರೆಡೆ ಸೆಳೆಯುವ ಸಲುವಾಗಿ ಇಡೀ ನಗರವನ್ನ ರಾತ್ರಿ 10ರ ನಂತರ ನಿರ್ಜನ ಪ್ರದೇಶವನ್ನಾಗಿಸುವ ತವಕದಲ್ಲಿದ್ದು, ತಾವು ಏನೆಲ್ಲಾ ಸಾಧನೆಗೈದಿದ್ದೇವೆಂಬ ಹುಂಬತನದ ಮಾತುಗಳನ್ನಾಡುತ್ತಿರುವ ಪೊಲೀಸರು ತಮ್ಮ ಅಸಹಾಯಕತನವನ್ನ ತಾವೇ ಪ್ರದರ್ಶನಕ್ಕಿಡುತ್ತಿದ್ದೇವೆಂಬ ಪರಿವಿಲ್ಲದೆ, ಪ್ರಜ್ಞಾವಂತರಲ್ಲದೇ ಜನಸಾಮಾನ್ಯರೆದುರು ಸ್ವಯಂ ಅರೆನಗ್ನರಾಗುತ್ತಿದ್ದಾರೆಂಬ ಅರಿವಿಲ್ಲದೆ ಇಲಾಖೆಯ ಬಗೆಗಿರುವ ಕಿಂಚಿತ್ ನಂಬಿಕೆಗಳನ್ನು ಹುಸಿಗೊಳಿಸಿಕೊಳ್ಳುತ್ತಿದ್ದಾರೆ.

      ರಾತ್ರಿ 10.30 ರ ನಂತರ ಯಾವೊಬ್ಬ ಜನಸಾಮಾನ್ಯನೂ ಎಂದಿನಂತೆ ತಿರುಗಾಡಲು ಸಾಧ್ಯವಾಗುತ್ತಿಲ್ಲ. ಕೊಳಕು ಬಟ್ಟೆಗಳು ಅಥವಾ ಸಾಮಾನ್ಯ ಕೆಳವರ್ಗದ ಜನರು ಧರಿಸುವ ಬಟ್ಟೆಗಳನ್ನು ಧರಿಸಿ, ದ್ವಿಚಕ್ರ ವಾಹನಗಳಲ್ಲಿ ನಗರದ ರಸ್ತೆಗಳಿಗೆ ಸಂಚಾರಕ್ಕಿಳಿದರೆ ಸಾಕು ಅಲ್ಲಲ್ಲಿ ಖಾಕಿ ಪಡೆ ಎಲ್ಲರನ್ನೂ ತಡೆದು ಪ್ರಶ್ನಿಸುತ್ತಿರುವ ಪರಿ ಅಪರಾಧ ಲೋಕದ ಅರಿವಿರದ ಮಂದಿ ಭೀಬತ್ಸತೆಯಿಂದ ಜೀವನ ಸಾಗಿಸುವ ಸ್ಥಿತಿಯಲ್ಲಿದ್ದಾರೆ. ಇದನ್ನು ಯಾವೊಬ್ಬ ಪ್ರಜ್ಞಾವಂತ ಸಂಘಟಕನೂ ಕೂಡಾ ಪ್ರಶ್ನಿಸುತ್ತಿಲ್ಲ. ಇದಕ್ಕೆ ಕಾರಣಗಳು ದೊರೆಯುತ್ತಿಲ್ಲ. ಹಾಗಾದರೆ, ಬಡ ವರ್ಗದ ಕೂಲಿ ಕಾರ್ಮಿಕ ತನ್ನ ರಾತ್ರಿ ವೇಳೆಯ ಕೆಲಸಗಳನ್ನು ಮುಗಿಸಿ ಮನೆಗೆ ಹಿಂತಿರುಗುವುದು ಹೇಗೆ..? ಅನುಮಾನದ ನೆಪದಲ್ಲಿ ಪೊಲೀಸ್ ಸಿಬ್ಬಂಧಿಗಳು ಮತ್ತು ಅಧಿಕಾರಿಗಳು ಪ್ರಶ್ನಿಸುವ ರೀತಿ ಠಾಣೆಗೆ ಕರೆದೊಯ್ದು ರಾತ್ರಿಯೆಲ್ಲಾ ಠಾಣೆಯಲ್ಲಿ ತನಿಖೆಯ ನೆಪದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಎಷ್ಟರಮಟ್ಟಿಗೆ ಸರಿ..?

      ಜಿಲ್ಲೆಯಲ್ಲಾಗಲೀ ಅಥವಾ ನಗರದಲ್ಲಾಗಲೀ ಅಪರಾಧಗಳು ನಿಯಂತ್ರಣಕ್ಕೆ ಬಂದಿವೆ ಎಂಬುದು ಜನಸಾಮಾನ್ಯರ ಅರಿವಿಗೆ ಬರಬೇಕಾದರೆ, ನಗರದ ನಾಗರೀಕ ಮತ್ತು ಒಂಟಿ ಮಹಿಳೆಯರು ನಿರ್ಭಯವಾಗಿ ನಡುರಾತ್ರಿಯಲ್ಲಿ ಏಕಾಂಗಿ ಪಯಣ ಮಾಡಿದಾಗ ಅವÀರಿಗೆ ಯಾವುದೇ ರೀತಿಯ ಭಯವಿಲ್ಲದ ವಾತಾವರಣ ಸೃಷ್ಟಿಯಾಗಿದೆ ಎಂಬುದು ತಿಳಿದ ನಂತರ ನಿರ್ಭಯರಾಗುತ್ತಾರೆ. ಪಟ್ಟಣದ ಜನತೆ ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸುತ್ತಿದ್ದು, ಯಾವುದೇ ರೀತಿಯ ಆತಂಕ-ಆಪತ್ತು ಹಾಗೂ ಅಹಿತಕರ ಘಟನೆಗಳು ಜರುಗದಿದ್ದರೆ, ಜನ ನೆಮ್ಮದಿಯಿಂದಿರುತ್ತಾರೆ. ಆದರೆ, ಅದು ಸಾಧ್ಯವಾಗಿದೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

       ಪ್ರತಿದಿನ ನಗರದಲ್ಲಿರುವ ನಾಲ್ಕು ವೃತ್ತ ನಿರೀಕ್ಷಕರ ವ್ಯಾಪ್ತಿಗೆ ಬರುವ ಎಲ್ಲಾ ಠಾಣೆಗಳಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಅಪರಾಧ ಸಂಖ್ಯೆಗಳನ್ನು ಪ್ರತ್ಯೇಕವಾಗಿ ನೋಡುವ ಬದಲು, ನಗರದ ಉಪಾಧೀಕ್ಷಕರ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳು ಅದರ ಘೋರತೆಯನ್ನ ಅವಲೋಕಿಸಿದರೆ, ನಿಜಕ್ಕೂ ನಿಯಂತ್ರಣಕ್ಕೆ ಬಂದಿದೆಯೇ ಎಂಬ ಯಕ್ಷ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಕೇವಲ ರಸ್ತೆಯ ಇಕ್ಕೆಲಗಳಲ್ಲಿ ತಮ್ಮ ಜೀವನೋಪಾಯಕ್ಕೆ ಆಹಾರ ಪದಾರ್ಥಗಳನ್ನ ಮಾರಾಟ ಮಾಡುವ ಕೆಳವರ್ಗದ ಹೋಟೆಲ್‍ಗಳನ್ನ ರಾತ್ರಿ 10ರ ಸಮಯಕ್ಕೆ ಮುಚ್ಚಿಸುತ್ತಿರುವುದು, ಮುಚ್ಚಿಸುವ ಸಂದರ್ಭಗಳಲ್ಲಿ ಪೊಲೀಸರ ನಡತೆಗಳು ಅವರ ಅವ್ಯಾಚ್ಯ ಶಬ್ಧಗಳು, ಲಾಟಿ-ಬೂಟಿನ ಸದ್ದುಗಳನ್ನು ಗಮನಿಸಿದರೆ, ಇಲಾಖೆಯ ಮೇಲಿರುವ ಗೌರವ ಕ್ಷೀಣಿಸದಿರಲು ಸಾಧ್ಯವೇ..? ರಸ್ತೆಯ ಬದಿಗಳಲ್ಲಿ ವ್ಯಾಪಾರ ಮಾಡುವ ಸಣ್ಣ-ಪುಟ್ಟ ಹೋಟೆಲ್‍ಗಳಲ್ಲಿ ಆಹಾರ ಪದಾರ್ಥಗಳನ್ನು ತಿನ್ನಲು ಆಗಮಿಸುವವರು ಕೂಲಿ ಕಾರ್ಮಿಕರು ಮತ್ತು ಕೆಳ ಹಾಗೂ ಮಧ್ಯಮ ವರ್ಗದ ಜನತೆಯಾಗಿದ್ದು, ಇವರು ತಮ್ಮ ದೈನಂದಿನ ಕೈಂಕರ್ಯಗಳನ್ನು ಪೂರ್ಣಗೊಳಿಸಿ, ಹಸಿವಿನ ಇಂಗಿತಕ್ಕಾಗಿ ಹೋಟೆಲ್‍ಗಳನ್ನೇ ಅವಲಂಬಿಸಿರುತ್ತಾರೆ. ರಾತ್ರಿ ಪಾಳೆಯದ ಕೆಲಸವನ್ನು ಪೂರ್ಣಗೊಳಿಸಿ, ತಮ್ಮ ತಮ್ಮ ಕಾರ್ಖಾನೆಗಳು ಮತ್ತು ಸಂಸ್ಥೆಗಳಿಂದ ಆಗಮಿಸುವ ವೇಳೆಗಾಗಲೇ ರಾತ್ರಿ 10 ಸಮಯ ಅಂತ್ಯವಾಗಿರುತ್ತದೆ. ಕುಟುಂಬವಿಲ್ಲದೇ ಬಾಡಿಗೆ ಕೋಣೆಗಳನ್ನ ಪಡೆದು ಏಕಾಂಗಿ ಜೀವನ ನಡೆಸುವ ಹೋಟೆಲ್ ಅವಲಂಬಿತ ಕಾರ್ಮಿಕ ಮಂದಿ ರಾತ್ರಿಯಲ್ಲಿ ಹಸಿವಿನಲ್ಲಿ ಮಲಗುವಂತಹ ಪರಿಸ್ಥಿತಿ ಎದುರಾಗಿದೆ. ಬೆಂಗಳೂರು-ಮಂಗಳೂರು-ಶಿವಮೊಗ್ಗ-ಹುಬ್ಬಳ್ಳಿ-ದಾರವಾಡ-ರಾಯಚೂರು-ಗುಲ್ಬರ್ಗ ಹೀಗೆ ಹಲವು ಭಾಗಗಳಿಂದ ತಮ್ಮ ಊರಿನೆಡೆ ಪ್ರಯಾಣಿಸುವ ಪ್ರಯಾಣಿಕರು ರಾತ್ರಿ 10 ರ ನಂತರ ತಿನ್ನಲು ಅನ್ನವಿಲ್ಲದೇ ಅಲೆದಾಡುವ ಸ್ಥಿತಿಗೆ ತಂದೊಡ್ಡಿದ್ದು ಯಾರು ..? ತುಮಕೂರು ಪೊಲೀಸರೇ..! ಎನ್ನುವಂತಹ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

      ಪೊಲೀಸ್ ಇಲಾಖೆಯ ಉದ್ಧಟತನದ ವರ್ತನೆಗಳನ್ನು ಪ್ರತಿಭಟಿಸುವ ಅಥವಾ ವಿರೋಧಿಸುವಂತಹ ಯಾವೊಬ್ಬ ಜನಪ್ರತಿನಿಧಿ ನಮ್ಮ ಜಿಲ್ಲೆಯಲ್ಲಿ ಜನ್ಮ ತಾಳಲಿಲ್ಲವೇ ಎಂಬಂತಹ ಹಾಸ್ಯಾಸ್ಪದ ಪ್ರಶ್ನೆ ಜನರಲ್ಲಿ ಮೂಡುತ್ತಿದೆಯಾದರೂ, ಬಾಹ್ಯವಾಗಿ ಪ್ರಶ್ನಿಸುವಂತಹ ಹಂತವನ್ನು ನಮ್ಮ ಜನ ತಲುಪದಿರುವುದು ದುರಾದೃಷ್ಟಕರ. ಇನ್ನಾದರೂ ಜನಪ್ರತಿನಿಧಿಗಳು ಜನಸಾಮಾನ್ಯರಿಂದ, ಜನಸಾಮಾನ್ಯರ ಮತಗಳಿಂದ ಆಯ್ಕೆಯಾಗಿರುವ ಋಣಕ್ಕಾದರೂ ಕೆಳ ವರ್ಗದ ಮತ್ತು ಕೂಲಿ ಕಾರ್ಮಿಕರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂಧಿಸುವ ಮನೋಭಾವವನ್ನ ಬೆಳೆಸಿಕೊಳ್ಳಬೇಕೆಂಬುದು ಪ್ರಜ್ಞಾವಂತರ ಆಶಯವಾಗಿದೆ.

      ಇಂದಿನ ಪ್ರಸ್ತುತ ವಿದ್ಯಾಮಾನದ ವಾಸ್ತವತೆಯನ್ನ ಗಮನಿಸಿದರೆ, ನಾವು ನಿಜಕ್ಕೂ ತುಮಕೂರು ನಗರದಲ್ಲಿ ಸಂಚರಿಸುತ್ತಿದ್ದೇವೆಯೇ..? ಇದು ಗಾಂಧೀಜಿ ಕಂಡಂತಹ ಭಾರತದ ಕರ್ನಾಟಕ ರಾಜ್ಯದಲ್ಲಿರುವ ತುಮಕೂರು ಜಿಲ್ಲೆಯೇ..? ಪೊಲೀಸರು ತಮ್ಮ ಅಸಹಾಯಕತನವನ್ನ ತೋರ್ಪಡಿಸಿಕೊಳ್ಳಲಾಗದೇ ಅಪರಾಧಗಳ ನಿಯಂತ್ರಣದ ನೆಪದಲ್ಲಿ ನಗರದ ನಾಗರೀಕರ ನೆಮ್ಮದಿಯನ್ನ ಹಾಳುಗೆಡವುತ್ತಿದ್ದಾರೆಯೇ..? ಎಂಬಂತಹ ಪ್ರಶ್ನೆಗಳು ಎದುರಾಗುತ್ತಿವೆ. ಇನ್ನಾದರೂ ಪೊಲೀಸ್ ಇಲಾಖೆ ಅಪರಾಧಗಳು ಹೆಚ್ಚಾಗುತ್ತಿರುವೆಡೆ ಗಮನಹರಿಸಿ ನಗರದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ. ನಡುರಾತ್ರಿಯಲ್ಲಿ ಜನಸಾಮಾನ್ಯರು ನಿರ್ಭಯವಾಗಿ ಸಂಚರಿಸುವಂತಾಗಲಿ. ನಗರದ ಪ್ರಮುಖ ರಸ್ತೆಗಳಲ್ಲಿ ನಾಗರೀಕರಿಗೆ, ಜನಸಾಮಾನ್ಯರಿಗೆ ಆಹಾರ ಪದಾರ್ಥಗಳು ಸಿಗುವಂತಾಗಲಿ ಎನ್ನುವುದು ನಮ್ಮ ಅಭಿಮತ.

                                              – ಸಂಪಾದಕ
ಎ.ಎನ್.ಧನಂಜಯ

(Visited 385 times, 1 visits today)