ತುಮಕೂರು: ರಾಜ್ಯದ ನಂದಿನಿ ತುಪ್ಪ ಕಳೆದ ಆರೇಳು ವರ್ಷಗಳ ನಂತರ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಕೆಗಾಗಿ ಮತ್ತೆ ಟಿಟಿಡಿ ದೇವಾಲಯಕ್ಕೆ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಹಾಲು ಒಕ್ಕೂಟದಿಂದ ಟಿಟಿಡಿ ದೇವಾಲಯಕ್ಕೆ ತುಪ್ಪ ಕೊಂಡೊಯ್ಯುವ ಟ್ಯಾಂಕರ್ ವಾಹನಕ್ಕೆ ತುಮುಲ್ ಅಧ್ಯಕ್ಷ ಹಾಗೂ ಶಾಸಕ ಹೆಚ್.ವಿ. ವೆಂಕಟೇಶ್ ಚಾಲನೆ ನೀಡಿದರು.
ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ನೇರವಾಗಿ ತುಪ್ಪ ಪೂರೈಸುವ ಅವಕಾಶವನ್ನು ಕೆಎಂಎಫ್ ತನ್ನ ವ್ಯಾಪ್ತಿಯ ಹಾಲು ಒಕ್ಕೂಟಗಳಿಗೆ ಕಲ್ಪಿಸಿರುವುದರಿಂದ ತುಪ್ಪವನ್ನು ಟ್ಯಾಂಕರ್ ಮೂಲಕ ಟಿಟಿಡಿಗೆ ಪೂರೈಸುವ ಕಾರ್ಯವನ್ನು ತುಮುಲ್ ಆರಂಭಿಸಿದೆ.
ಟಿಟಿಡಿಗೆ ತುಪ್ಪ ಕೊಂಡೊಯ್ಯುವ ಟ್ಯಾಂಕರ್ ವಾಹನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ತುಮುಲ್ ಅಧ್ಯಕ್ಷ ಹಾಗೂ ಶಾಸಕ ಹೆಚ್.ವಿ. ವೆಂಕಟೇಶ್ ಅವರು, ತುಮಕೂರು ಹಾಲು ಒಕ್ಕೂಟದಲ್ಲಿ ಪ್ರಸ್ತುತ ಪ್ರತಿದಿನ ೧೦ಲಕ್ಷದ ೫೦ಸಾವಿರ ಲೀಟರ್ ಹಾಲು ದಾಖಲೆ ಪ್ರಮಾಣದಲ್ಲಿ ಶೇಖರಣೆಯಾಗುತ್ತಿದೆ ಎಂದರು.
ಪ್ರತಿದಿನ ಶೇಖರಣೆಯಾಗುತ್ತಿರುವ ಹಾಲಿನ ಪೈಕಿ ಬೆಂಗಳೂರಿಗೆ ೧.೯೫ ಲಕ್ಷ ಲೀಟರ್ ಹಾಲು ಹಾಗೂ ತುಮಕೂರಿನಲ್ಲಿ ೧.೨೦ ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಕೇರಳದಲ್ಲಿ ಸರಾಸರಿ ೫೦ ರಿಂದ ೬೦ಸಾವಿರ ಲೀಟರ್ ಹಾಲು ಹಾಗೂ ಬಾಂಬೆಯಲ್ಲಿ ೧ ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಯಾದ ಕ್ಷೀರಭಾಗ್ಯ ಯೋಜನೆಯಡಿ ಪ್ರತಿದಿನ ಶಾಲಾ ಮಕ್ಕಳಿಗೆ ಕುಡಿಯಲು ಹಾಲು ವಿತರಿಸುವ ಸಲುವಾಗಿ ೮೦ ಸಾವಿರ ಲೀಟರ್ ಹಾಲು ವಿನಿಯೋಗಿಸಲಾಗುತ್ತಿದೆ ಎಂದರು.
ನಾನು ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ನಾದ ಬಳಿಕ ಎಲ್ಲ ನಿರ್ದೇಶಕರು ಹಾಗೂ ಆಡಳಿತ ಮಂಡಳಿಯವರು ಸಕ್ರಿಯವಾಗಿ ಒಕ್ಕೂಟದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಉತ್ತಮ ಆಡಳಿತ ನಡೆಯಲು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತುಮುಲ್ ನಿರ್ದೇಶಕರಾದ ಡಿ. ಕೃಷ್ಣಕುಮಾರ್, ಮಹಾಲಿಂಗಪ್ಪ, ಎಂ.ಕೆ. ಪ್ರಕಾಶ್, ಭಾರತಿ ಶ್ರೀನಿವಾಸ್, ಚಿ.ನಾ.ಹಳ್ಳಿಯ ಪ್ರಕಾಶ್, ನಂಜೇಗೌಡ, ನಾಗೇಶ್‌ಬಾಬು, ಸಿದ್ದಲಿಂಗಯ್ಯ, ಚಂದ್ರಶೇಖರರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
(Visited 1 times, 1 visits today)