ಕೊರಟಗೆರೆ:

       ಸಿರಿದೇವಿಗೆ ಮೀಸಲಾದ ಕರುನಾಡಿನ ಏಕೈಕ ಧಾರ್ಮಿಕ ಪುಣ್ಯಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ಸನ್ನಿಧಾನಕ್ಕೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬರುತ್ತೀದ್ದ ಲಕ್ಷಾಂತರ ಭಕ್ತರಲ್ಲಿ ಸಾವಿರಕ್ಕೂ ಕಡಿಮೆ ಭಕ್ತರು ಆಗಮಿಸಿ ಸಾಮಾಜಿಕ ಅಂತರದ ಮೂಲಕ ಶುಕ್ರವಾರ ಮುಂಜಾನೆಯಿಂದಲೇ ದರ್ಶನ ಪಡೆದಿದ್ದಾರೆ.

       ಕಲ್ಪತರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೀತಾ ಸಮೀಪದ ಗೊರವನಹಳ್ಳಿ ಶ್ರೀಕ್ಷೇತ್ರದ ಮಹಾಲಕ್ಷ್ಮೀ ದೇವಿಯ ದರ್ಶನ ಪಡೆದ ನೂರಾರು ಭಕ್ತಾಧಿಗಳು ಕಲಿಯುಗದ ದೇವತೆ ಎಂದೇ ಪ್ರಸಿದ್ದಿ ಪಡೆದಿರುವ ಕಮಲಮ್ಮ ತಾಯಿಯ ಬೃಂದಾವನದ ದರ್ಶನ ಪಡೆದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಣೆ ಮಾಡಿರುವುದೇ ವಿಶೇಷವಾಗಿದೆ.

      ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದ ಆಡಳಿತ ಅಧಿಕಾರಿ ಡಾ.ನಂದಿನಿದೇವಿ ನೇತೃತ್ವದಲ್ಲಿ ಪೊಲೀಸ್-ಕಂದಾಯ ಮತ್ತು ಗ್ರಾಪಂ ಸಹಕಾರದಿಂದ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಕೊವೀಡ್-19 ಆದೇಶ ಪಾಲನೆಯ ಜೊತೆ ಸಾಮಾಜಿಕ ಅಂತರದ ಬಗ್ಗೆ ಆರೋಗ್ಯದ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

      ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಹಾಲಕ್ಷ್ಮೀ ದೇವಾಲಯ ಮತ್ತು ದೇವಿಗೆ ವಿಶೇಷ ಹೂವು ಮತ್ತು ವಿದ್ಯುತ್ ದ್ವೀಪದ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಹೂವು-ಹಣ್ಣು-ಕಾಯಿ ಮತ್ತು ಪ್ರಸಾದವನ್ನು ಸಂಪೂರ್ಣವನ್ನು ನಿಷೇದ ಮಾಡುವುದರ ಜೊತೆ ದೇವಾಲಯದ ಸುತ್ತಮುತ್ತಲು ವಿಶೇಷ ಪೊಲೀಸ್ ಭದ್ರತೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

       ಕೊರೊನಾ ರೋಗದ ಲಾಕ್‍ಡೌನ್-ಸಿಲ್‍ಡೌನ್‍ನ ಕರಿನೆರಳು ಗೊರವನಹಳ್ಳಿ ದೇವಾಲಯಕ್ಕೆ ತಟ್ಟಿರುವುದೇ ಭಕ್ತರ ಸಂಖ್ಯೆ ಇಳಿಮುಖ ಆಗಲು ಪ್ರಮುಖ ಕಾರಣವಾಗಿದೆ. ದೇವಿಯ ದರ್ಶನಕ್ಕೆ ಆಗಮಿಸಿದ ನೂರಾರು ಭಕ್ತರು ಐಶ್ವರ್ಯದ ಬದಲಾಗಿ ಆರೋಗ್ಯ ಭಾಗ್ಯವನ್ನು ನೀಡುವಂತೆ ಮಹಾಲಕ್ಷ್ಮೀ ದೇವಿಯ ಬಳಿಯಲ್ಲಿ ಬೇಡಿಕೊಂಡಿದ್ದು ವಿಶೇಷವಾಗಿ ಕಂಡುಬಂದಿದೆ.

(Visited 14 times, 1 visits today)