ಸದಸ್ಯರನ್ನು ನಿರ್ಲಕ್ಷ್ಯಿಸಿ ಕಾಮಗಾರಿ ಪಟ್ಟಿ ಅನುಮೋದನೆ ಸರಿಯಲ್ಲ

ಗುಬ್ಬಿ:

      ಅಂಗನವಾಡಿ ಕೇಂದ್ರಗಳ ದುರಸ್ಥಿ ಮತ್ತು ಎಲೆಕ್ಟ್ರಿಕ್ ಕೆಲಸದ ಪಟ್ಟಿ ಸಿದ್ಧಪಡಿಸಿದ ಶಿಶು ಅಭಿವೃದ್ಧಿ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಸದಸ್ಯರನ್ನೇ ನಿರ್ಲಕ್ಷ್ಯಿಸಿ ತಯಾರಾದ ಕಾಮಗಾರಿಗಳ ಪಟ್ಟಿಯನ್ನು ಅನುಮೋದನೆಗೆ ತಂದಿರುವುದು ಸರಿಯಲ್ಲ. ನಮ್ಮಗಳ ಗಮನಕ್ಕೆ ಬಾರದ ಈ ಗುತ್ತಿಗೆ ಮತ್ತು ಕಾಮಗಾರಿ ಪಟ್ಟಿ ರದ್ದುಪಡಿಸಿ ಮರುಪಟ್ಟಿ ತಯಾರಿಸಬೇಕು ಎಂದು ತಾಪಂ ಸದಸ್ಯೆ ಮಮತಾ ಯೋಗೀಶ್ ಆಗ್ರಹಿಸಿದರು.

      ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಅಂಗನವಾಡಿ ಕೇಂದ್ರಗಳ ಕೆಲಸದ ಪಟ್ಟಿ ಅನುಮೋದನೆಗೆ ಬಂದ ಸಂದರ್ಭದಲ್ಲಿ ಗರಂ ಆದ ಸದಸ್ಯೆ ಮಮತಾ ಈ ಕೆಲಸಗಳನ್ನು ಕಮೀಷನ್‍ಗೆ ಮಾರಾಟ ಮಾಡಿದಂತೆ ಕಾಣುತ್ತಿದೆ. ಚುನಾಯಿತ ಪ್ರತಿನಿಧಿಗಳಾದ ನಮ್ಮ ಗಮನಕ್ಕೆ ಬಾರದೆ ನಮ್ಮ ವ್ಯಾಪ್ತಿಯಲ್ಲಿ ಗುರುತಿಸಲಾದ ಕೆಲಸಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಅಧಿಕಾರಿಗಳು ಕೇವಲ ಅನುಮೋದನೆಗೆ ಪಟ್ಟಿ ಹಿಡಿದು ಸಭೆಗೆ ಬರುವ ಮುನ್ನಾ ನಮಗೆ ಈ ಕೆಲಸಗಳ ಬಗ್ಗೆ ಮಾಹಿತಿ ನೀಡದಿರಲು ನಿಖರ ಕಾರಣ ನೀಡಬೇಕು ಎಂದು ಒತ್ತಾಯಿಸಿದರು.

      ಕೆಲಸ ಅನುಷ್ಠಾನದ ಬಗ್ಗೆ ಶಿಶು ಅಭಿವೃದ್ದಿ ಅಧಿಕಾರಿಗಳು ಪಂಚಾಯತ್ ರಾಜ್ ಇಲಾಖೆ ಮೇಲೆ ಹೇಳುತ್ತಾರೆ. ಅವರ ಇವರ ಮೇಲೆ ಹೇಳುತ್ತಾರೆ. ನಮ್ಮನ್ನು ಏನೆಂದು ತಿಳಿದಿದ್ದಾರೆ. ನಮ್ಮ ಗಮನಕ್ಕೆ ಬಾರದ ಈ ಕೆಲಸದ ಪಟ್ಟಿ ಮರು ತಯಾರು ಮಾಡಬೇಕು ಎಂದು ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿ ಕಳೆದ ಬಾರಿ 16 ಲಕ್ಷ ರೂಗಳನ್ನು ಒಬ್ಬರೇ ಗುತ್ತಿಗೆದಾರರಿಗೆ ನೀಡಿ ನಮಗೆ ದಿಕ್ಕು ತಪ್ಪಿಸಿ ಕೆಲಸಗಳು ಅಪೂರ್ಣಗೊಂಡಿವೆ ಎಂದ ಅವರು ಕೃಷಿ ಇಲಾಖೆಯಲ್ಲೂ ಕೂಡಾ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಅಗತ್ಯ ಮಾಹಿತಿ ನೀಡುತ್ತಿಲ್ಲ. ಪಡೆದವರೇ ಪಡೆದುಕೊಳ್ಳುವ ದಂಧೆ ನಡೆದಿದೆ. ಟಾರ್ಪಲ್ ಪ್ರತಿವರ್ಷ ಮಾರಾಟವಾಗುತ್ತಿವೆ ಎಂದು ದೂರಿದರು.

      ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇ-ಸ್ವತ್ತು ಮಾಡಿಕೊಡಲು 5 ಸಾವಿರದಿಂದ 10 ಸಾವಿರ ರೂಗಳವರೆಗೆ ವಸೂಲಿ ಮಾಡಿದ ನಿದರ್ಶನ ಸಾಕಷ್ಟಿವೆ. ಪಿಡಿಓಗಳು ಈ ಮಟ್ಟಕ್ಕೆ ಇಳಿದಿದ್ದು ಅಲ್ಲದೇ ಆರು ತಿಂಗಳಿಂದ ಎರಡು ವರ್ಷ ಖಾತೆದಾರರನ್ನು ಅಲೆದಾಡಿಸಿದ್ದುಂಟು. ಈ ಬಗ್ಗೆ ಗಂಭೀರ ತೀರ್ಮಾನವನ್ನು ಸಭೆ ಕೈಗೊಳ್ಳಬೇಕಿದೆ. ಪಂಚಾಯಿತಿ ಕಚೇರಿಯಲ್ಲಿ ನೋಟೀಸ್ ಮೂಲಕ ಯಾವ ದಾಖಲೆಗೆ ಇಂತಿಷ್ಟು ಶುಲ್ಕ ಎಂದು ಸಾರ್ವಜನಿಕರಿಗೆ ತಿಳಿಸುವಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ ಸದಸ್ಯ ಅ.ನ.ಲಿಂಗಪ್ಪ ಸಭೆಯಲ್ಲೇ ಅಲೆದಾಡಿದ ಗ್ರಾಹಕರಿಗೆ ನೇರ ಮೊಬೈಲ್ ಕರೆ ಮಾಡಿ ಹಣ ವಸೂಲಿ ಬಗ್ಗೆ ಅರ್ಜಿದಾರರಿಂದಲೇ ರುಜುವಾತು ಮಾಡಿದರು.

     ಕಾರ್ಮಿಕ ಇಲಾಖೆಯಿಂದ ಕೊರೋನಾ ಸಂದರ್ಭದಲ್ಲಿ ಹಂಚಲಾಗಿದ್ದ ದಿನಸಿ ಕಿಟ್ ವಿತರಣೆ ಬಗ್ಗೆ ಮಾಹಿತಿ ಕೇಳಿದ ಸದಸ್ಯೆ ಮಮತಾ
ಅವರು ಕಿಟ್ ವಿತರಣೆಯಲ್ಲಿ ಜನಪ್ರತಿನಿಧಿಗಳ ಆಹ್ವಾನ ಮಾಡದ ಬಗ್ಗೆ ಹಾಗೂ ಯಾರಿಗೆ ಕಿಟ್ ನೀಡಲಾಗಿದೆ ಎಂಬ ಮಾಹಿತಿ ನೀಡಬೇಕು ಎಂದು ಕಾರ್ಮಿಕ ನಿರೀಕ್ಷಕಿ ಅಧಿಕಾರಿಣಿಗೆ ಸೂಚಿಸಿ, ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಸಿಹಿ ನೀರು ಬರುತ್ತಿಲ್ಲ ಎಂಬ ದೂರುಗಳು ಸಾಕಷ್ಟಿವೆ. ಈ ಬಗ್ಗೆ ಇಂಜಿನಿಯರ್ ಕ್ರಮವಹಿಸಲು ತಿಳಿಸಿದರು. ನಂತರ ಮಾತನಾಡಿದ ಎಇಇ ರಮೇಶ್ ಈ ಬಗ್ಗೆ ಒಂದು ತಿಂಗಳ ಹಿಂದೆ ಕ್ರಮವಹಿಸಿ ಅಧಿಕೃತ ಸಂಸ್ಥೆಯೊಂದು ಈ ಕೆಲಸ ಮಾಡುತ್ತಿದೆ. ತಾಂತ್ರಿಕ ಅಳತೆಯಲ್ಲಿ ಶುದ್ಧೀಕರಣ ಮಾಡಲು ಯಂತ್ರವನ್ನು ಮಾರ್ಪಡಿಸುತ್ತಿದ್ದಾರೆ ಎಂದರು.

      ಪಂಚಾಯಿತಿ ಕಚೇರಿಯಲ್ಲಿ ದೂರದರ್ಶನ ಮೂಲಕ ಬಡ ವಿದ್ಯಾರ್ಥಿಗಳಿಗೆ ಪಾಠ ಕಲಿಕೆ ಅನುವು ಮಾಡಲು ಪಿಡಿಓಗಳಿಗೆ ಆದೇಶಿಸಲು ತಾಪಂ ಇಒ ಮುಂದಾಗಬೇಕು. ಈಗಾಗಲೇ ದೂರದರ್ಶನದಲ್ಲಿ ಮಕ್ಕ ಳಿಗೆ ಪಾಠ ಬರುತ್ತಿದೆ. ಟಿವಿ ಇಲ್ಲದ ಮಕ್ಕಳು ಶಿಕ್ಷಣಕ್ಕೆ ತೊಂದರೆ ಆಗದಂತೆ ಕ್ರಮವಹಿಸಲು ಸರ್ಕಾರ ಸೂಚಿಸಿದೆ. ಈ ಬಗ್ಗೆ ಸಭೆ ತೀರ್ಮಾನಿಸಬೇಕು ಎಂದ ಬಿಇಓ ಸೋಮಶೇಖರ್, ತಾಲ್ಲೂಕಿನಲ್ಲಿ 29 ಸಾವಿರ ಮಕ್ಕಳು ಮರುದಾಖಲೆ ಆಗಿದ್ದಾರೆ.

      ಈ ಜತೆಗೆ ನಮ್ಮ ಶಿಕ್ಷಕವರ್ಗ ಮನೆಗಳಿಗೆ ತೆರಳಿ 23 ಸಾವಿರಕ್ಕೂ ಅಧಿಕ ಮಕ್ಕಳಿಗೆ ಮನೆಯ ಪಾಠ ನಡೆಸಿದ್ದಾರೆ. ದೇವಾಲಯ ಆವರಣ, ಸಮುದಾಯಭವನ ಬಳಸಿಕೊಂಡು ಸಾಮಾಜಿಕ ಅಂತರ ಕಾದು ಪಾಠ ಪ್ರವಚನ ನಡೆಸಲಾಗಿದೆ. ಬಿಸಿಯೂಟ ಯೋಜನೆಯಲ್ಲಿ ಮಕ್ಕಳಿಗೆ ದಿನಸಿ ಆಹಾರ ಪದಾರ್ಥವನ್ನು ಮನೆಗೆ ನೀಡಲಾಗಿದೆ ಎಂದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಹಿಂದುಳಿದವರ್ಗ, ಆರೋಗ್ಯ ಹೀಗೆ ಅನೇಕ ಇಲಾಖೆ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ತಾಪಂ ಅಧ್ಯಕ್ಷೆ ಅನುಸೂಯ ನರಸಿಂಹಮೂರ್ತಿ, ತಾಪಂ ಇಒ ನರಸಿಂಹಯ್ಯ ಇತರರು ಇದ್ದರು.

(Visited 27 times, 1 visits today)

Related posts