ಗುಬ್ಬಿ:

      ಗ್ರಾಮಗಳ ಸಂಪರ್ಕ ರಸ್ತೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಿರ್ವಹಿಸಿ 3.17 ಕೋಟಿ ರೂಗಳ ಅವ್ಯವಹಾರ ಮಾಡಿದ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮವಹಿಸಬೇಕು ಎಂದು ತಾಲ್ಲೂಕಿನ ಮಲ್ಲೇನಹಳ್ಳಿ ಹಟ್ಟಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

      ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯ ನಮ್ಮ ಊರು ನಮ್ಮ ರಸ್ರೆ ಕೆಲಸವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಜಂಟಿಯಾಗಿ ರೂಪಿಸಿ ತಾಲ್ಲೂಕಿನ ಜೈನಿಗರಹಳ್ಳಿಯಿಂದ ಸೋಮಲಾಪುರ ಸಂಪರ್ಕಿಸುವ 5.10 ಕಿಮೀ ದೂರ ಕ್ರಮಿಸುವ ಡಾಂಬರ್ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ವರ್ಷವಾದರೂ ಕೆಲಸ ಆರಂಭವಾಗಲಿಲ್ಲ. ನಂತರದಲ್ಲಿ ತರಾತುರಿಯಲ್ಲಿ ಈ ವರ್ಷದ ಮಾರ್ಚ್‍ನಲ್ಲಿ ಕೆಲಸ ಆರಂಭಿಸಿ ಮೊದಲಿನಿಂದಲೂ ಕಳಪೆ ಕಾಮಗಾರಿಯನ್ನು ಮಾಡುತ್ತಲೇ ಬಂದಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ದೂರಿದರೂ ಪ್ರಯೋಜನವಾಗಿಲ್ಲ. 

      ಜನಪ್ರತಿನಿಧಿಗಳಿಂದಲೂ ತಡೆಯಲು ಸಾಧ್ಯವಾಗದೇ ಮೂರ್ನಾಲ್ಕು ತಿಂಗಳಲ್ಲೇ ರಸ್ತೆ ಡಾಂಬರ್ ಬರಿಗೈಗೆ ಬರುತ್ತಿತ್ತು. ಮಳೆಗಾಲದಲ್ಲಿ ಸಂಪೂರ್ಣ ಹಾಳಾಗಿದೆ. ಸಾರ್ವಜನಿಕ ಹಣ ಈ ರೀತಿ ಫೋಲಾಗಿರುವುದು ಅಧಿಕಾರಿಗಳ ಕೆಲಸಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಕಿಡಿಕಾರಿದರು.

      ಶ್ರೀಕಂಠೇಶ್ವರ ಕನ್ಸ್‍ಟ್ರಕ್ಷನ್ ಕಂಪೆನಿಯ ಗುತ್ತಿಗೆದಾರ ಶಿವಾನಂದಯ್ಯ ಗುತ್ತಿಗೆ ಪಡೆದು ಈ ಮಟ್ಟದ ಕಳಪೆ ಕೆಲಸ ಮಾಡಿರುವುದು ವಿಪರ್ಯಾಸ. ಗುಣಮಟ್ಟ ಪರಿಶೀಲನೆ ಒಂದು ದಿನಕ್ಕೂ ನಡೆದಿಲ್ಲ. ಅಧಿಕಾರಿಗಳು ಇತ್ತ ಕಡೆ ಸುಳಿದಿಲ್ಲ. ಗ್ರಾಮೀಣ ಭಾಗದ ಮುಗ್ದ ಜನರಿಗೆ ಈ ಕಳಪೆ ಕಂಡುಬರಲಿಲ್ಲ. ಈಗ ನಾಲ್ಕು ತಿಂಗಳಲ್ಲಿ ಈ ರಸ್ತೆಯ ಪರಿಚಯವಾಗಿದೆ. ಜತೆಗೆ ಗುತ್ತಿಗೆದಾರರು, ಅಧಿಕಾರಿಗಳ ಕಾರ್ಯ ವೈಖರಿ ಎತ್ತಿಹಿಡಿದಿದೆ ಎಂದು ವ್ಯಂಗ್ಯವಾಡಿದ ಸ್ಥಳೀಯ ಮುಖಂಡ ಜುಂಜೇಗೌಡ ತಿಂಗಳ ಹಿಂದೆ ಈ ರಸ್ತೆ ಕಳಪೆ ಬಗ್ಗೆ ಮಾತನಾಡಿದಾಗ ಪುಸಲಾಯಿಸಿದ ಅಧಿಕಾರಿಗಳು ನಂತರದಲ್ಲಿ ಗುಂಡಿಗಳು ನಿರ್ಮಾಣವಾದಲ್ಲಿ ಮಾತ್ರ ಡಾಂಬರ್ ತೆಗೆದು ಮತ್ತೊಮ್ಮೆ ರಸ್ತೆ ಮಾಡುವುದಾಗಿ ಹೇಳಿ ಅಲ್ಲಿನ ಜಲ್ಲಿ ಕಲ್ಲನ್ನು ಮತ್ತೊಮ್ಮೆ ಬಳಸಿಕೊಳ್ಳಲು ಅಲ್ಲಿಯೇ ಶೇಖರಿಸುತ್ತಿದ್ದಾರೆ. ಹೊಸ ರಸ್ತೆ ಎಂದು ಹೇಳಿ ಮತ್ತೊಮ್ಮೆ ಹಳೇ ಮಾದರಿಯಲ್ಲೇ ರಸ್ತೆ ನಿರ್ಮಿಸಲಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಸಚಿವರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಬೇಕಿದೆ ಎಂದರು.

       ಮಳೆ ಬಂದ ನಂತರದಲ್ಲಿ ರಸ್ತೆಯಲ್ಲೇ ನಿಂತ ನೀರು ಡಾಂಬರ್ ಕಿತ್ತು ಗುಂಡಿ ಬಿದ್ದಿದೆ. ಕೇವಲ ವಾರದಲ್ಲಿ ಇಡೀ 5 ಕಿಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಕೀಳು ಗುಣಮಟ್ಟ ರಸ್ತೆ ತಾಲ್ಲೂಕಿನಲ್ಲಿ ಕಂಡಿಲ್ಲ. ಈ ಜತೆಗೆ ಮೂರು ಹಂತದ ಕೆಲಸದಲ್ಲಿ ಗ್ರಾಮಗಳಲ್ಲಿ ಸಿಸಿ ರಸ್ತೆ ಕೂಡಾ ಕಳಪೆಯಾಗಿದೆ. ಜತೆಗೆ ಬಾಕ್ಸ್ ಚರಂಡಿಯಂತೂ ನೀರು ಸರಾಗವಾಗಿ ಹರಿಯದಂತೆ ಮಾಡಲಾಗಿದೆ. ಈ ಬಗ್ಗೆ ಜನರು ಹಿಡಿಶಾಪವಾಗುತ್ತಿದ್ದಾರೆ. ಮನೆ ಮುಂದೆ ನಿಂಂತ ಚರಂಡಿ ನೀರು ಸೊಳ್ಳೆಗಳನ್ನು ಹೆಚ್ಚಿಸಿದೆ. ದುರ್ವಾಸನೆ ಮನೆಯಲ್ಲಿ ಹರಡಿ ನೆಮ್ಮದಿಯಾಗಿ ಇರಲು ಸಾಧ್ಯವಾಗಿಲ್ಲ ಎಂದು ಗೊಲ್ಲರಹಟ್ಟಿ ಮಹಿಳೆಯರು ಶಾಪ ಹಾಕಿದರು. ಈ ಜತೆಗೆ ಪ್ರತಿ ಮನೆಯ ಮುಂದೆ ಸ್ಲ್ಯಾಬ್ ಹಾಕಿಕೊಡಬೇಕಾದ ಗುತ್ತಿಗೆದಾರರು ಹಟ್ಟಿಯಲ್ಲಿನ 50 ಕ್ಕೂ ಅಧಿಕ ಮನೆಗಳಿಗೆ ಕಾಂಕ್ರಿಟ್ ಸ್ಲ್ಯಾಬ್ ಹಾಕಿಕೊಟ್ಟಿಲ್ಲ. ಕಲ್ಲು ಚಪ್ಪಡಿ ಹಾಕಿಕೊಂಡು ಮನೆಗೆ ಓಡಾಡುತ್ತಿದ್ದಾರೆ ಎಂದು ನಿರ್ಲಕ್ಷ್ಯಕ್ಕೆ ಮತ್ತೊಂದು ಸಾಕ್ಷಿ ನೀಡಿದರು.

      ಜೈನಿಗರಹಳ್ಳಿಯಿಂದಲೂ ನೇರ ಸೋಮಲಾಪುರದ ಬಳಿಯ ರಾಜ್ಯ ಹೆದ್ದಾರಿ ಸಂಪರ್ಕಿಸುವ ಈ ರಸ್ತೆ ದಾರಿಯುದ್ದಕ್ಕೂ ಗುಂಡಿಗಳಿಂದ ಕೂಡಿದೆ. ರಸ್ತೆಯ ಎರಡೂ ಬದಿಗಳಲ್ಲಿ ಡಾಂಬರ್ ಕಿತ್ತು ಬರುತ್ತಿದೆ. ಈ ಬಗ್ಗೆ ಗಲಾಟೆ ಮಾಡಲಾಗಿ ಕಿತ್ತುಹೋದ ಸ್ಥಳವಷ್ಟೇ ದುರಸ್ಥಿಗೆ ಮುಂದಾಗಿದ್ದಾರೆ. ವಾಸ್ತವದಲ್ಲಿ ಇಡೀ ರಸ್ರೆಯೇ ಸಂಪೂರ್ಣ ಕಳಪೆಯಾಗಿದೆ. ತಾಂತ್ರಿಕವಾಗಿ ಜಲ್ಲಿ ಮತ್ತು ಮಣ್ಣು ಬಳಸುವಲ್ಲೂ ನಿರ್ಲಕ್ಷ್ಯವಹಿಸಿದ್ದಾರೆ. ಅಧಿಕಾರಿಗಳು ಮುಂದೆ ನಿಂತು ರಸ್ತೆ ಹೊಸದಾಗಿ ಪುನರ್ ನಿರ್ಮಿಸಿಕೊಡಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುತ್ತೇವೆ ಎಂದು ಆಗ್ರಹಿಸಿದ ಗ್ರಾಮಸ್ಥರು ಗುತ್ತಿಗೆದಾರರು ಮತ್ತು ಅಧಿಕಾರಿಗಳು ಮುಂದೆ ನಿಂತು ನಡೆಯದ ಕೆಲಸದಲ್ಲಿ ಗುಣಮಟ್ಟ ನಿರೀಕ್ಷಿಸುವಂತಿಲ್ಲ. ಮೂರು ಕೋಟಿಗೂ ಅಧಿಕ ಹಣ ಯಾವ ಮಟ್ಟಕ್ಕೆ ಬಳಸಲಾಗಿದೆ ಎಂದು ನೋಡಿದರೆ ತಿಳಿಯುತ್ತದೆ. ಇದಕ್ಕೆ ಇಂಜಿನಿಯರ್ ಸೋಮನಾಥ್ ಸಾಥ್ ನೀಡಿದ್ದಾರೆ. ಈ ಬಗ್ಗೆ ಶಾಸಕರ ಗಮನಕ್ಕೂ ತಂದಿದ್ದೇವೆ. ಆದರೂ ಕಣ್ಣು ಒರೆಸುವ ತಂತ್ರವನ್ನು ಬಳಸಿ ಕೇವಲ 300 ಮೀಟರ್ ಮಾತ್ರ ದುರಸ್ಥಿ ನಡೆಸಲಾಗುತ್ತಿದೆ ಎಂದು ದೂರಿದರು.

(Visited 18 times, 1 visits today)