ಗುಬ್ಬಿ :

     ಪಟ್ಟಣದ ಪರಿಸರ ಕಾಪಾಡಬೇಕಾದ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳೇ ಮುಂದೆ ನಿಂತು ತಮ್ಮ ಕಚೇರಿ ಆವರಣದಲ್ಲಿದ್ದ ಮರವೊಂದನ್ನು ಕಡಿದು ಧರೆರುಳಿಸಿರುವ ಘಟನೆ ಶನಿವಾರ ನಡೆದಿದೆ.

      ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಉದ್ಯಾನವನಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಗಿಡ ನೆಟ್ಟು ಪೋಷಿಸುವ ಜವಾಬ್ದಾರಿ ಕೆಲಸ ಮಾಡಬೇಕಾದ ಪಪಂ ಅಧಿಕಾರಿಗಳು ಕಚೇರಿ ಆವರಣದಲ್ಲಿದ್ದ ಸುಮಾರು 30 ವರ್ಷದ ಹಳೆಯ ಹೊಂಗೇಮರವನ್ನು ಕಡಿದಿದ್ದಾರೆ. ಕೆಲ ದಿನಗಳ ಹಿಂದೆ ಒಣಗಿದ ರೀತಿ ಕಾಣುವಂತೆ ಮಾಡಲಾಗಿ ನಂತರ ತುಂಡರಿಸಲಾಗಿದೆ. ಶುದ್ದ ಗಾಳಿ ಒದಗಿಸುವ ಕೆಲಸ ಸ್ಥಳೀಯ ಸಂಸ್ಥೆಯಾದ ಪಟ್ಟಣ ಪಂಚಾಯಿತಿ ಜವಾಬ್ದಾರಿ ಎನ್ನುವುದು ಮರೆತು ಇನ್ನೂ ಹಸಿಯಾದ ಮರವನ್ನು ಕಡಿಯುವ ಅಗತ್ಯವೇನಿತ್ತು ಎನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

      ಬೆಳಿಗ್ಗೆ ಕಚೇರಿ ಸಮಯಕ್ಕೆ ಮುನ್ನವೇ ಧರೆಗುರುಳಿದ ಹೊಂಗೇಮರದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಪರಸರ ಕಾಳಜಿವಹಿಸಬೇಕಿದ್ದ ಅಧಿಕಾರಿಗಳು ಈ ಕೃತ್ಯವೆಸಗಿರುವುದು ಸರಿಯಲ್ಲ ಎನ್ನುವ ದೂರು ವಾಟ್ಸ್‍ಪ್ ಸಂದೇಶದಲ್ಲಿ ಚರ್ಚೆಯಾಯಿತು. ಈ ಬಗ್ಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಪ್ರಶ್ನಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಅರಣ್ಯ ಇಲಾಖೆಗೆ ದೂರು ನೀಡಿ ಸುಂದರವಾಗಿದ್ದ ಹೊಂಗೇಮರಕ್ಕೆ ವಿಷಪ್ರಾಸನ ಮಾಡಿಸಲಾಗಿದೆ ಎಂದು ಶನಿವಾರ ಬೆಳಿಗ್ಗೆ ಮರವನ್ನು ಕಡಿಸಲಾಗಿದೆ ಎಂದು ದೂರಿದ್ದಾರೆ.

      ಪಾದರಸ ನೀಡುವ ಮೂಲಕ ಒಣಗಿಸುವ ಪ್ರಯತ್ನ ಮಾಡಲಾಗಿ ಇನ್ನೂ ಹಸಿಯಾಗಿದ್ದ ಮರವನ್ನು ಕಡಿಯಲಾಗಿದೆ. ಯಾರಿಗೂ ತೊಂದರೆ ಕೊಡದೆ ತನ್ನ ಪಾಡಿಗೆ ಬೆಳೆದಿದ್ದ 30 ವರ್ಷ ವಯಸ್ಸಿನ ಮರಕ್ಕೆ ಕೊಡಲಿ ಪೆಟ್ಟು ನೀಡಿದ ಪಪಂ ಅಧಿಕಾರಿಗಳು ಈ ಬಗ್ಗೆ ಸ್ಪಲ್ಪವೂ ಕರುಣೆಯೂ ತೋರುತ್ತಿಲ್ಲ. ತಮ್ಮ ಜವಾಬ್ದಾರಿ ಮರೆತು ಪರಿಸರ ನಾಶಕ್ಕೆ ಮುಂದಾದ ಅಧಿಕಾರಿಗಳು ಮಾಡಿರುವ ಹೇಯಕೃತ್ಯಕ್ಕೆ ಅರಣ್ಯ ಇಲಾಖೆ ತಕ್ಕ ಕಾನೂನು ಕ್ರಮವಹಿಸಬೇಕು. ಪರಿಸರ ಕಾಳಜಿ ವಹಿಸಬೇಕಾದ ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ಮರ ಕಡಿದಿರುವ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಶಿಸ್ತು ಕ್ರಮವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಜಿ.ಎಸ್.ಮಂಜುನಾಥ್ ಆಗ್ರಹಿಸಿದರು.

 

(Visited 9 times, 1 visits today)