ಗುಬ್ಬಿ:

      ಪಟ್ಟಣದ ಐತಿಹಾಸಿಕ ಪ್ರಸಿದ್ದ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ, ಪಾರ್ವತಮ್ಮ ಸಮೇತ ಅಮರಗೊಂಡ ಮಲ್ಲಿಕಾರ್ಜುನಸ್ವಾಮಿ ಹೂವಿನ ವಾಹನಗಳ ಮಹೋತ್ಸವ ಸೋಮವಾರ ರಾತ್ರಿ ಧಾರ್ಮಿಕ ವಿಧಿವತ್ತಾಗಿ ಜರುಗಿತು.

      ಕಾರ್ತಿಕ ಅಮಾವಾಸ್ಯೆಯ ಪ್ರಯುಕ್ತ ಪ್ರತಿವರ್ಷದಂತೆ ಎರಡು ರಥಗಳನ್ನು ಸಂಪೂರ್ಣ ಪುಷ್ಪಾಲಂಕರಗೊಳಿಸಿ ರಾತ್ರಿ 11 ರ ಸಮಯಕ್ಕೆ ಆರಂಭವಾಗುವ ವಾಹನ ಮಹೋತ್ಸವ ಪಟ್ಟಣದ ಪ್ರಮುಖಬೀದಿಗಳಲ್ಲಿ ಸಂಚರಿಸಿತು. ವಿದ್ಯುತ್ ದೀಪಾಲಂಕರದಿಂದ ಕಂಗೊಳಿಸುತ್ತಿದ್ದ ರಥಗಳು ಚಲಿಸಿದಂತೆ ಭಕ್ತರು ಬಾಳೆಯ ಅಂಬು ಹಾಯುವ ಮೂಲಕ ಪೂಜೆ, ಹರಕೆ ಸಲ್ಲಿಸುವುದು ಹಿಂದಿನಿಂದ ನಡೆದು ಪದ್ದತಿ. ಇಂದಿಗೂ ಹಲವು ಭಕ್ತರ ಕುಟುಂಬ ಪದ್ದತಿಯನ್ನು ಚಾಚು ತಪ್ಪದೇ ನಡೆಸಿದರು. ಭಕ್ತರು ತಮ್ಮ ಮನೆ ಹಾಗೂ ಅಂಗಡಿಗಳ ಮುಂದೆ ಬಾಳೆಗಿಡವನ್ನು ಅಲಂಕರಿಸಿ ವಾಹನ ಬರುವಿಕೆಗೆ ಕಾಯುತ್ತಾರೆ.

      ಬಾಳೆಗಿಡದ ಅಂಬುವಿಗೆ ಮಾಡಿದ ಅಲಂಕಾರ, ರಂಗೋಲಿ ಚಿತ್ತಾರವು ನೋಡಿಗರನ್ನು ಆಕರ್ಷಿಸುತ್ತಿತ್ತು. ಇಡೀ ರಾತ್ರಿ ಪಟ್ಟಣದಲ್ಲಿ ಸಂಚರಿಸಿದ ವಾಹನ ಬಂಗ್ಲೋಮಠದ ಬಳಿ ನಿಂತ ನಂತರ ಮುಂಜಾನೆಯಿಂದ ಆರಂಭವಾಗುವ ಧೂಳ್ ಮೆರವಣಿಗೆಯಲ್ಲಿ ಪಲ್ಲಕ್ಕಿ ಉತ್ಸವ ಭಕ್ತರ ಮನೆಗೆ ತೆರಳಿ ನಂತರ ದೇವಾಲಯವನ್ನು ಸೇರುತ್ತದೆ. ಈ ಆಚರಣೆ ಪಟ್ಟಣದಲ್ಲಿ ಹಬ್ಬದ ಸಂಭ್ರಮ ಮೂಡಿಸಿತ್ತು. ಭಕ್ತರ ಮನೆಯಲ್ಲಿ ಸಡಗರ ಮೂಡಿತ್ತು. ಪಟಾಕಿ ಸಿಡಿಸಿ ಸಂಭ್ರಮಿಸುವ ಭಕ್ತರು ಈ ಬಾರಿ ಪಟಾಕಿ ಮಾಲಿನ್ಯ ಹಾಗೂ ಕೊರೋನಾ ನಿಯಮ ಪಾಲನೆಗೆ ಒತ್ತು ನೀಡಿ ತಾಲ್ಲೂಕು ಆಡಳಿತದ ಆದೇಶದಂತೆ ಪಟಾಕಿ ಸಿಡಿಮದ್ದು ನಿಷೇಧವನ್ನು ಸ್ವಯಂಪ್ರೇರಿತರಾಗಿ ಹೇರಿಕೊಂಡರು.

(Visited 13 times, 1 visits today)