ಗುಬ್ಬಿ : 

      ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ಶಿಕ್ಷಾರ್ಹ ಅಪರಾಧ. ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಧ್ವಜ ವಿರೂಪಗೊಳಿಸಿದ ಪ್ರಕರಣ ವರ್ಷವಾದರೂ ವಿಳಂಭ ಅನುಸರಿಸಿರುವುದು ಸರಿಯಲ್ಲ. ತಾಲ್ಲೂಕು ಆಡಳಿತ ಮತ್ತು ಶಿಕ್ಷಣ ಇಲಾಖಾಧಿಕಾರಿಗಳು ತನಿಖೆ ತೀವ್ರಗೊಳಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಪ್ರಕರಣ ಅಂತ್ಯ ಕಾಣಿಸಿ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.

       ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯೋಧರನ್ನು ಸನ್ಮಾನಿಸಿ ಮಾತನಾಡಿದ ಅವರು ಧ್ವಜ ಪ್ರಕರಣ ವಿಳಂಬವೇ ಪ್ರಶ್ನಾತೀತವಾಗಿದೆ. ಮೂರು ಇಲಾಖೆಗಳು ಈ ಪ್ರಕರಣಕ್ಕೆ ತ್ವರಿತ ಅಂತ್ಯ ಕಾಣಿಸಲು ಮೀನಾಮೇಷ ಎಣಿಸಿವೆ. ಜವಾಬ್ದಾರಿಯಿಂದ ನುಣಚಿಕೊಳ್ಳದೇ ಶೀಘ್ರದಲ್ಲಿ ತನಿಖೆ ಪೂರ್ಣಗೊಳಿಸಲು ತಹಸೀಲ್ದಾರ್ ಅವರಿಗೆ ಸೂಚಿಸಿದರು.

       ಶೋಷಿತವರ್ಗವನ್ನು ಮೇಲೆತ್ತುವ ಮಹತ್ತರ ಆಶಯ ಸಂವಿಧಾನದ್ದಾಗಿದೆ. 70 ವರ್ಷ ಕಳೆದರೂ ಇನ್ನೂ ಸಮಾಜದಲ್ಲಿ ಸಮಾನತೆ ಸಾಧಿಸಲಾಗಿಲ್ಲ. ಮೇಲುಕೀಳು, ಜಾತಿ ಮತ ನಿತ್ಯ ಶೋಷಣೆಯಾಗಿ ಬಿಂಬಿತವಾಗುತ್ತಿದೆ. ಶಿಕ್ಷಣದ ಮೂಲಕ ಸಮಾನತೆ ಸಾಧಿಸಲು ಎಲ್ಲಾ ವರ್ಗದ ಜನರು ಮುಂದಾಗಬೇಕು. ಆ ಕ್ಷಣದಲ್ಲಿ ಮಾತ್ರ ಸಂವಿಧಾನಕ್ಕೆ ಗೌರವ ಸಿಗುತ್ತದೆ ಎಂದ ಅವರು ವಿಶ್ವಮಾನ್ಯತೆ ಪಡೆದ ಸಂವಿಧಾನ ಸರ್ವ ಶ್ರೇಷ್ಠ ನಿಲುವು ಹೊಂದಿದೆ. ಪ್ರಜಾಪ್ರಭುತ್ವಕ್ಕೆ ಅರ್ಥ ನೀಡುವಲ್ಲಿ ಈ ಸಂವಿಧಾನ ಸಾರ್ಥಕ ಗೆಲುವು ಸಾಧಿಸಿದೆ ಎಂದರು.

      ಉಪಸ್ಯಾಕ ಲೋಕೇಶ್ ಮಾತನಾಡಿ ದೇಶಕ್ಕೆಲ್ಲಾ ಒಂದೇ ಕಾನೂನು ಒಂದೇ ಬದುಕು ಕಟ್ಟಿಕೊಡುವಲ್ಲಿ ಸಂವಿಧಾನ ಯಶಸ್ವಿ ಕಂಡಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಕಲ್ಪನೆ ವಿಶ್ವದಲ್ಲೇ ಸರ್ವ ಶ್ರೇಷ್ಠ ಎನಿಸಿತ್ತು. ದೇಶದಲ್ಲಿದ್ದ ಹಲವು ಪಿಡುಗುಗೆ ಮದ್ದು ನೀಡಿದ ಸಂವಿಧಾನ ಎಲ್ಲಾ ಧರ್ಮ, ಜನಾಂಗಕ್ಕೂ ಸಮಾನತೆ ಕಲ್ಪಿಸಿತು ಎಂದರು.

      ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿಎಸ್‍ಎಫ್ ಯೋಧ ವೇಣುಗೋಪಾಲ್ ಪುಲ್ವಾಮಾದಲ್ಲಿ ನಡೆದ ಬಾಂಬ್ ದಾಳಿ ಬಗ್ಗೆ ವಿವರಿಸಿ 44 ಮಂದಿ ಸಾವನ್ನಪ್ಪಿದ ಘಟನೆ ಬಗ್ಗೆ ಭಾವುಕರಾದರು. ಈ ದಾಳಿಯಲ್ಲಿ ಕೊದಲೆಳೆಯಲ್ಲಿ ಪಾರಾದ ನಾನು ತಾಲ್ಲೂಕು ಆಡಳಿತದ ಸನ್ಮಾನ ಸ್ವೀಕರಿಸುತ್ತಿದ್ದೇನೆ ಎಂದು ತಮ್ಮ ಗಡಿ ಭಾಗದಲ್ಲಿನ ಕರ್ತವ್ಯದ ಅನುಭವ ಹಂಚಿಕೊಂಡರು.

      ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರ ತಂಡ ರಾಷ್ಟ್ರಧ್ವಜ ವಿರೂಪಗೊಳಿಸಿದ ಪ್ರಕರಣಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿ ಶಾಸಕರಿಗೆ ಮನವಿ ಸಲ್ಲಿಸಿದರು. ನಂತರ ಬಿಎಸ್‍ಎಫ್ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ, ಜಿಪಂ ಸದಸ್ಯರಾದ ಡಾ.ನವ್ಯಾಬಾಬು, ಜಿ.ಎಚ್.ಜಗನ್ನಾಥ್, ತಾಪಂ ಅಧ್ಯಕ್ಷೆ ಅನುಸೂಯ, ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಉಪಾಧ್ಯಕ್ಷೆ ಮಹಾಲಕ್ಷ್ಮೀ ಹಾಗೂ ಪಪಂ ಎಲ್ಲಾ ಸದಸ್ಯರು ಹಾಜರಿದ್ದರು.

(Visited 10 times, 1 visits today)