ಗುಬ್ಬಿ: 

      ಕಾರ್ತಿಕ ಅಮಾವಾಸ್ಯೆ ಹಿನ್ನೆಲೆ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ಮತ್ತು ಶ್ರೀ ಮಲ್ಲಿಕಾರ್ಜುನಸ್ವಾಮಿ ಪಾರ್ವತಮ್ಮನವರ ಹೂವಿನವಾಹನವನ್ನು ಡಿಸೆಂಬರ್ 4 ರ ರಾತ್ರಿ 10.30 ಕ್ಕೆ ಕೋವಿಡ್ ಮಾರ್ಗಸೂಚಿಯಂತೆ ಸರ್ಕಾರ ಆದೇಶ ಪ್ರಕಾರ ಎಲ್ಲಾ ಸಂಪ್ರದಾಯ ಆಚರಿಸಿ ನಡೆಸಲಾಗುವುದು ಎಂದು ತಹಸೀಲ್ದಾರ್ ಬಿ.ಆರತಿ ತಿಳಿಸಿದರು.

      ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಡಿಸೆಂಬರ್ 4 ರ ಶನಿವಾರ ರಾತ್ರಿ ಪುಷ್ಪ ಅಲಂಕೃತ ಹೂವಿನವಾಹನ ಆರಂಭಿಸಿ ಇಡೀ ರಾತ್ರಿ ರಾಜಬೀದಿಯಲ್ಲಿ ಮೆರವಣಿಗೆ ನಡೆಸಲಾಗುವುದು. ಮಾರ್ಗ ಮಧ್ಯೆ ಅಲಂಕಾರಗೊಂಡ ಬಾಳೆ ಕಂದು ಕಡಿಯುವ ಮೂಲಕ ಸ್ವಾಮಿಯ ರಥ ಮುಂದೆ ಸಾಗಲಿದೆ. ಈ ವೇಳೆ ಭಕ್ತರು ಸಲ್ಲಿಸುವ ಪೂಜೆಗೆ ಅನುವು ಮಾಡಲಾಗುತ್ತದೆ. ಪಟಾಕಿ ಸಿಡಿಸಿ ವಾಯುಮಾಲಿನ್ಯ ಮಾಡದಂತೆ ಮನವಿ ಮಾಡಿದರು.

      ರಾತ್ರಿ ಪೂರ್ತಿ ನಡೆಯುವ ಉತ್ಸವ ಡಿಸೆಂಬರ್ 5 ರ ಬೆಳಿಗ್ಗೆ ನಸುಕಿನಲ್ಲಿ ಊರಿನ ಬಂಗ್ಲೋಮಠ ತಲುಪಿ ನಂತರ ಪಲ್ಲಕ್ಕಿಯಲ್ಲಿ ದೇವರ ಇರಿಸಿ ಧೂಳ್ ಮೆರವಣಿಗೆ ನಡೆಸಿ ಸಂಜೆ ವೇಳೆಗೆ ಚಿಕ್ಕ ದೇವಸ್ಥಾನ ತಲುಪುವ ಈ ಉತ್ಸವ ಎಲ್ಲಾ ಆಚರಣೆಯಂತೆ ಜರುಗಲಿದೆ. ಆದರೆ ಭಕ್ತರ ಸಂಖ್ಯೆಗೆ ಕಡಿಮೆ ಮಾಡುವ ಕೋವಿಡ್ ಹಿನ್ನಲೆ ನಿಯಮ ಜಾರಿ ಮಾಡಬೇಕಿದೆ. ಮೂರನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಯಾವುದೇ ಆದೇಶ ಹೊರಡಿಸಿದ್ದಲ್ಲಿ ತಕ್ಷಣ ನಿಯಮ ಪಾಲನೆ ಮಾಡುವುದು ಸಾರ್ವಜನಿಕರ ಕರ್ತವ್ಯ ಎಂದರು.

      ಇಡೀ ಉತ್ಸವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜೊತೆ ನಡೆಯುವ ಮೆರವಣಿಗೆ ಹೋಗುವ ಊರಿನ ಎಲ್ಲಾ ಬೀದಿಗಳನ್ನು ದುರಸ್ಥಿ ಮಾಡಿ ಎಲ್ಲಡೆ ಸ್ಯಾನಿಟೇಜರ್ ಸಿಂಪಡಣೆ, ಸ್ವಚ್ಛತೆ ಕಾರ್ಯದ ಜವಾಬ್ದಾರಿ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದೇ ಸಂದರ್ಭದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲು ತಿಳಿಸಲಾಗಿದೆ. ವಿದ್ಯುತ್ ಸರಬರಾಜುವಿಗೆ ಬೆಸ್ಕಾಂ ಇಲಾಖೆಗೂ ಮಾಹಿತಿ ರವಾನಿಸಲಾಗಿದೆ ಎಂದು ತಿಳಿಸಿದರು.

      ಯಾವ ಕ್ಷಣದಲ್ಲಾದರೂ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಲಿದೆ. ಆ ಕ್ಷಣದಲ್ಲಿ ಭಕ್ತರ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿ ಪಟ್ಟಣದ ಹದಿನೆಂಟು ಕೋಮಿನ ಮುಖಂಡರ ಸಮ್ಮುಖದಲ್ಲೇ ನಡೆಯುವ ಈ ಹೂವಿನವಾಹನ ಬಹಳ ಖ್ಯಾತಿ ಪಡೆದ ಉತ್ಸವವಾಗಿದೆ. ಆದರೆ ಕೋವಿಡ್ ಹಿನ್ನಲೆ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಸೇರಲು ಮನವಿ ಮಾಡಲಾಗುತ್ತಿದೆ. ಸರಳ ಆಚರಣೆ ನಿಟ್ಟಿನಲ್ಲಿ ದೇವಾಲಯ ಆಡಳಿತ ಸಮಿತಿಯು ಹೊರಡಿಸುವ ಕೋವಿಡ್ ನಿಯಮವನ್ನು ಪಾಲಿಸಬೇಕಿದೆ.ಮಾಸ್ಕ್ ಕಡ್ಡಾಯ ಧರಿಸುವುದು, ಸಾಮಾಜಿಕ ಅಂತರ ಕಾದು ಸ್ಯಾನಿಟೇಜರ್ ಬಳಸಬೇಕು. ಜೊತೆಗೆ ವ್ಯಾಕ್ಸಿನ್ ಎರಡನೇ ಡೋಜ್ ಪಡೆದವರು ಮಾತ್ರ ಭಾಗಿಯಾಗಲು ಸೂಚಿಸಲಾಗುವುದು ಎಂದು ವಿವರಿಸಿದರು.

     ಈ ಸಂದರ್ಭದಲ್ಲಿ ಪ್ರೊಬೆಷನರಿ ತಹಶೀಲ್ದಾರ್ ಅಶ್ವಿನಿ, ಪಿಎಸೈ ನಟರಾಜು, ದೇವಾಲಯದ ಕಾರ್ಯನಿರ್ವಣಾಧಿಕಾರಿ ಶ್ವೇತಾ, ಪಪಂ ಆರೋಗ್ಯ ನಿರೀಕ್ಷಕ ಜಯರಾಮ್, ಅರ್ಚಕರಾದ ಶಿವಕುಮಾರ್, ರಾಜು, ದೇವಾಲಯ ಸಿಬ್ಬಂದಿಗಳಾದ ಕಿರಣ್, ಚೇತನಾ, ಮೋಹನ್ ಇತರರು ಇದ್ದರು.

(Visited 21 times, 1 visits today)