ಗುಬ್ಬಿ :

      ಬೇಸಿಗೆಯ ಕಾಲದಲ್ಲಿ ತೆಂಗಿನಗಿಡಗಳನ್ನು ಉಳಿಸಿಕೊಳ್ಳಲು ಹನಿನೀರಾವರಿಗೆ ಅಳವಡಿಸಿಕೊಂಡ ಪೈಪ್‍ಲೈನ್‍ಗಳನ್ನು ಕಿಡಿಗೇಡಿಗಳು ಹಾಳು ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಅಮ್ಮನಘಟ್ಟ ಗ್ರಾಪಂ ಅಧ್ಯಕ್ಷ ಬಸವರಾಜು ತಮ್ಮ ಅಳಲು ತೋಡಿಕೊಂಡರು.

      ತಾಲ್ಲೂಕಿನ ಕಸಬ ಹೋಬಳಿ ತಿಪ್ಪೂರು ಗ್ರಾಮದ ಸೆರ್ವೆ ನಂಬರ್ 36ರಲ್ಲಿನ ನನ್ನ ಹೆಸರಿನ 35 ಗುಂಟೆ ಜಮೀನಿನ ತಕರಾರು ಈಗಾಗಲೇ ಕಳೆದ 14 ವರ್ಷದಿಂದ ನಿರಂತರವಾಗಿ ನಡೆದಿದೆ. ನನ್ನ ಹೆಸರಿನ ಜಮೀನಿನಲ್ಲಿ ನಾನು ಬೆಳೆಸಿದ ತೆಂಗಿನಸಸಿಗಳಿಗೆ ನೀರುಣಿಸಲು ಹರಸಾಹಸ ಪಡಡುವಂತಾಗಿದೆ. ಬೇಸಿಗೆಯಲ್ಲಿ ಇರುವ ಕೊಂಚ ನೀರನ್ನು ಹನಿನೀರಾವರಿ ಮೂಲಕ ನೀರು ನೀಡಲು ಪೈಪ್‍ಲೈನ್ ಅಳವಡಿಸಿದ ಮರುದಿನ ಎಲ್ಲಾ ಪೈಪ್‍ಲೈನ್ ಕಿತ್ತು ಪ್ಲಾಸ್ಟಿಕ್ ಪೈಪ್ ಕತ್ತರಿಸಿ ತುಂಡು ತುಂಡು ಮಾಡಲಾಗಿದೆ. ಈ ಬಗ್ಗೆ ಗುಬ್ಬಿ ಠಾಣೆಯಲ್ಲಿ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

       ಪಕ್ಕದ ಜಮೀನನಲ್ಲೇ ಕೃಷಿ ನಡೆಸುವಾತ ಈ 35 ಗುಂಟೆ ಜಮೀನಿನ ವಿಚಾರದಲ್ಲಿ ನ್ಯಾಯಾಲಯ ಮೆಟ್ಟಿಲೇರಿದ್ದರು. ಒಟ್ಟು 7 ಪ್ರಕರಣ ದಾಖಲಿಸಿ ಸೋಲು ಕಂಡರೂ ವಿನಾಕಾರಣ ನನಗೆ ತೊಂದರೆ ನೀಡುತ್ತಿದ್ದಾರೆ. 35 ಗುಂಟೆ ಜಮೀನಿನ ವಿಚಾರದಲ್ಲಿ ಕಳೆದ 16 ವರ್ಷದಿಂದ ಹಿರಿಯರು ಸಂಧಾನ ಮಾಡಿದರೂ ಪ್ರಯೋಜನವಾಗಿಲ್ಲ. ರಸ್ತೆ ಬಿಡುವ ವಿಷಯಕ್ಕೂ ರಾಜೀ ನಡೆದು ಒಪ್ಪಿಕೊಂಡರೂ ನಂತರದಲ್ಲಿ ತೊಂದರೆ ನೀಡಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಲಾಗಿದೆ. ಗುಬ್ಬಿ ಠಾಣೆಗೆ ಪಿಎಸ್‍ಐ ಬದಲಾವಣೆ ಆದಂತೆ ಒಮ್ಮೊಮ್ಮೆ ದೂರು ನೀಡುತ್ತಾ ವಿನಾಕಾರಣ ನನಗೆ ತೊಂದರೆ ನೀಡಲಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು.

      ಈ ಬಾರಿ ಸಿಪಿಐ ಅವರ ಬಳಿ ದೂರು ನಾನು ಖುದ್ದು ನೀಡಿದ್ದೇನೆ. ಈತನ ವರ್ತನೆಗೆ ಕೆಲ ಮುಖಂಡರ ಸಾಥ್ ಕೂಡ ಇದೆ. ರಾಜಕಾರಣಿಗಳ ಒತ್ತಡವನ್ನೂ ತರುವ ವ್ಯಕ್ತಿಯ ಬಳಿ ಯಾವ ದಾಖಲೆಯೂ ಇಲ್ಲ. ಈ ಬಗ್ಗೆ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ನ್ಯಾಯ ಕೊಡಬೇಕಾಗಿದೆ ಮನವಿ ಮಾಡಿದರು. ನನ್ನ ಹೆಸರಿನಲ್ಲಿ ಖಾತೆ ಇದ್ದರೂ ಜಮೀನನಲ್ಲಿನ ತೆಂಗಿನಸಸಿಗಳನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಹದ್ದುಬಸ್ತು ಮಾಡಿಕೊಳ್ಳಲು ಸರ್ವೆ ಕೂಡಾ ಮಾಡಿಸಲಾಗಿದೆ. ಅಲ್ಲಿಯೂ ನನ್ನ ಜಮೀನು ನನ್ನದಾಗಿಯೇ ಗುರುತಿಸಲಾಗಿದೆ. ಆದರೂ ತೊಂದರೆ ನೀಡುವ ಜತೆಗೆ ಹನಿನೀರಾವರಿ ಪೈಪ್‍ಲೈನ್‍ಗಳನ್ನು ಮೂರು ಬಾರಿ ಹಾಳು ಮಾಡಲಾಗಿದೆ.

      ಲಕ್ಷಾಂತರ ರೂಗಳ ನಷ್ಟ ಅನುಭವಿಸಿದ್ದೇನೆ. ಈ ಬಗ್ಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
 

(Visited 46 times, 1 visits today)