ಗುಬ್ಬಿ:

     ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ದತೆ ನಡೆಸಿರುವ ಗುಬ್ಬಿ ತಾಲ್ಲೂಕಿನ 14 ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ 19 ತುರ್ತು ಮಾರ್ಗಸೂಚಿ ಅನ್ವಯ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲು ಸಕಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್  ತಿಳಿಸಿದರು.

      ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನ ಒಟ್ಟು 3360 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಸನ್ನದ್ದರಾಗಿದ್ದಾರೆ. ಈ ನೋಂದಾಯಿತ ಮಕ್ಕಳಿಗೆ ಪರೀಕ್ಷಾ ವೇಳಾಪಟ್ಟಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾರ್ಗಸೂಚಿಯನ್ನು ತಿಳಿಸಲಾಗುತ್ತಿದೆ. ಜತೆಗೆ ಪೋಷಕರಿಗೂ ಅಗತ್ಯ ಮಾಹಿತಿ ರವಾನೆ ಮಾಡಲಾಗುತ್ತಿದೆ ಎಂದರು.

      ಜೂನ್ 25 ರಿಂದ ಆರಂಭವಾಗುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಹಾಗೂ ಇಲಾಖಾ ಸಿಬ್ಬಂದಿಗಳಿಗೆ ಕಡ್ಡಾಯ ಮಾಸ್ಕ್ ಬಳಕೆಗೆ ಸೂಚಿಸಲಾಗಿದೆ. ಜತೆಗೆ ದೇಹದ ತಪಮಾನ ತಿಳಿಯಲು ಸ್ಕ್ರೀನಿಂಗ್ ವ್ಯವಸ್ಥೆ ಹಾಗೂ ಸ್ಯಾನಿಟೇಜರ್ ಬಳಸಲು ವ್ಯವಸ್ಥೆ ಮಾಡಲಾಗುವುದು. ತಾಲ್ಲೂಕಿನ 14 ಪರೀಕ್ಷೆ ಕೇಂದ್ರವು ಸಕಲ ಸಿದ್ದತೆಯೊಂದಿಗೆ ತುರ್ತು ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆಗೆ ಚಿದಂಬರಾಶ್ರಮ ಪರೀಕ್ಷಾ ಕೇಂದ್ರವನ್ನು ಹೆಚ್ಚುವರಿಯಾಗಿ ಸಿದ್ದಗೊಳಿಸಿಕೊಳ್ಳಲಾಗಿದೆ. ಯಾವುದೇ ಕಂಟೈನ್ಮೆಂಟ್ ಏರಿಯಾಗೆ ಪರೀಕ್ಷಾ ಕೇಂದ್ರ ಒಳಪಟ್ಟಲ್ಲಿ ಈ ತುರ್ತು ಕೇಂದ್ರ ಬಳಸಿಕೊಳ್ಳಲಾಗುವುದು ಎಂದರು.

      ಪ್ರತಿ ಕೇಂದ್ರದ ಕೊಠಡಿಗೆ 18 ಮಕ್ಕಳು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುವುದು. ಈ ಜತೆಗೆ ಕೇಂದ್ರದಲ್ಲಿ ಎರಡು ಹೆಚ್ಚುವರಿ ಕೊಠಡಿಯನ್ನು ಸಜ್ಜುಗೊಳಿಸಿ ಸೋಂಕಿತ ಅಥವಾ ಶಂಕಿತ ವಿದ್ಯಾರ್ಥಿಗಳಿದ್ದಲ್ಲಿ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಲಾಗುವುದು. ಈ ಜತೆಗೆ ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಔಷಧಿ ಸಿಂಪಡಣೆ ಮಾಡಲಾಗುವುದು ಎಂದ ಅವರು ಮೂರು ತಿಂಗಳ ಅಂತರದಲ್ಲಿ ಪಾಠ ಪ್ರವಚನ ಮರೆಯಬಾರದು ಎಂಬ ಕಾರಣಕ್ಕೆ ಪುನರ್‍ಮನನ ಮಾಡಲು ಶಿಕ್ಷಕರು ಶ್ರಮಪಡುತ್ತಿದ್ದಾರೆ ಎಂದರು.

      ವಸತಿಶಾಲಾ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಿದ್ದು, ಹೊರ ಜಿಲ್ಲೆಯ ಮಕ್ಕಳು ಅವರ ಊರಿನ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಈ ಜತೆಗೆ ಹಾಸ್ಟೆಲ್ ವಿದ್ಯಾರ್ಥಿಗಳು ಪರೀಕ್ಷೆ ವೇಳೆಗೆ ಹಾಸ್ಟೆಲ್‍ನಲ್ಲೇ ಉಳಿದುಕೊಂಡು ಊಟ ವಸತಿ ಅನುಕೂಲ ಪಡೆದುಕೊಳ್ಳಬಹುದಾಗಿದೆ. ಸಾರಿಗೆ ವ್ಯವಸ್ಥೆ ಕೂಡಾ ಸಮಸ್ಯೆಯಾಗಿರುವ ಕಾರಣ ಪರೀಕ್ಷಾ ವೇಳೆಗೆ ಸರ್ಕಾರಿ ಬಸ್ ಸಂಚಾರ ಆರಂಭವಾಗಿರುತ್ತದೆ. ಬಸ್ಸಿನ ಅನಾನುಕೂಲವಾಗಿದ್ದಲ್ಲಿ ಅಂತಹ ಗ್ರಾಮಗಳಿಗೆ ಖಾಸಗಿ ಶಾಲಾ ವಾಹನಗಳನ್ನು ಬಳಸಿಕೊಂಡು ಮಕ್ಕಳಿಗೆ ಅನುವು ಮಾಡಲಾಗುವುದು. ಒಟ್ಟಾರೆ ಎಲ್ಲಾ ವ್ಯವಸ್ಥೆಯೊಂದಿಗೆ ಮಕ್ಕಳಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಸಲಾಗುವುದು ಎಂದರು.

(Visited 15 times, 1 visits today)