ಗುಬ್ಬಿ: 

       ಮೈನಿಂಗ್ ನಡೆಯುವ ಸ್ಥಳಗಳಿಗಿಂತ ಭಿನ್ನವಾಗಿ ಕೆರೆಕಟ್ಟೆಗಳಲ್ಲಿ ಮಣ್ಣು ತೆಗೆಯುವ ಕೆಲಸ ನಿರಂತರವಾಗಿ ತಾಲ್ಲೂಕಿನ ಕಸಬ ಹೋಬಳಿಯಲ್ಲಿ ಹೆಚ್ಚಾಗಿ ನಡೆದಿದೆ. ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕೆರೆಕಟ್ಟೆಗಳಲ್ಲಿ ನಿಯಮ ಮೀರಿ ಮಣ್ಣು ಸಾಗಿಸಿರುವುದು ಪ್ರಕೃತಿಗೆ ವಿರುದ್ಧವಾದದ್ಧು ಎಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.

      ಗುಬ್ಬಿ ಪಟ್ಟಣದ ಹೊರವಲಯದಲ್ಲಿ ಹಾದು ಹೋಗುತ್ತಿರುವ ಹೆದ್ದಾರಿ ಸರ್ವಿಸ್ ರಸ್ತೆ ನಿರ್ಮಾಣದಲ್ಲಿ ಫ್ಲೈಓವರ್ ಸೇತುವೆಗಳ ನಿರ್ಮಾಣ ಮಾಡಬೇಕಾಗಿರುವ ಕಾರಣ ಮಣ್ಣಿನ ಅಗತ್ಯತೆ ಇತ್ತು. ಆದರೆ ಮಣ್ಣು ಸಮೀಪದಲ್ಲೇ ಹುಡುಕಲು ಮುಂದಾದ ಗುತ್ತಿಗೆದಾರರು ರಸ್ತೆ ನಿರ್ಮಾಣದ ಅಕ್ಕಪಕ್ಕದ ಕೆರೆಕಟ್ಟೆ, ಗೋಮಾಳ, ಗೋಕಟ್ಟೆ, ಅರಣ್ಯ ಪ್ರದೇಶ ಸ್ಥಳಗಳ ಜತೆಗೆ ರೈತರ ಜಮೀನಿನಲ್ಲಿ ಸಹ ಮಣ್ಣು ಸಾಗಿಸಲು ಆರಂಭಿಸಿದರು. ದಿನ ಕಳೆದಂತೆ ಕೆರೆಗಳ ಆಕೃತಿಯೇ ವಿಚಿತ್ರವಾಗಿದ್ದು ಕೆಲ ಪ್ರಜ್ಞಾವಂತ ರೈತರಲ್ಲಿ ಆತಂಕ ತಂದಿದೆ. ಸರ್ಕಾರದ ನಿಯಮ ಪ್ರಕಾರ ನಾಲ್ಕೈದು ಅಡಿಗಳಿಂತ ಆಳ ತೊಡುವಂತಿಲ್ಲ. ಆದರೆ ಸುಮಾರು 50 ಅಡಿಗಳ ಆಳಕ್ಕೂ ಹೊರಟ ಜೆಸಿಬಿ ಯಂತ್ರಗಳು ಬಿಡುವಿಲ್ಲದೇ ಹಗಲಿರುಳು ಮಣ್ಣು ತೆಗೆದಿರುವುದು ತಾಲ್ಲೂಕು ಅಡಳಿತ ಗಮನಿಸಲಿಲ್ಲ ಎಂದು ದೂರುತ್ತಿದ್ದಾರೆ.

      ಪಟ್ಟಣದ ಸುತ್ತಲಿನ ಕೆರೆಗಳಲ್ಲೇ ಮಣ್ಣು ತೆಗೆಯುತ್ತಿರುವ ಬಗ್ಗೆ ತಿಳಿದೂ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನಲಾಗುತ್ತಿದೆ. ಹೆದ್ದಾರಿ ರಸ್ತೆ ಕೆಲಸ ಸಾರ್ವಜನಿಕರ ಉದ್ದೇಶಕ್ಕೆ ಸರಿಯೇ ಆಗಿದ್ದರೂ ನಮ್ಮ ಪ್ರಕೃತಿಯ  ವಿರುದ್ಧ ಕೆರೆಗಳನ್ನೇ ಹಾಳು ಮಾಡುವುದು ಸರಿಯಲ್ಲ. ಈ ಬಗ್ಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹೊದಲೂರು, ಕಿಟ್ಟದಕುಪ್ಪೆ, ರಂಗನಾಥಪುರ, ಹೊನ್ನವಳ್ಳಿ, ಬಿಲ್ಲೇಪಾಳ್ಯ ಕಟ್ಟೆ, ಅರುವೇಸಂದ್ರ ಹೀಗೆ ಹಲವು ಭಾಗದಲ್ಲಿ ಲೆಕ್ಕವಿಲ್ಲದಂತೆ ಮಣ್ಣು ತೆಗೆಯಲಾಗಿದೆ. ನಿಯಮ ಮೀರಿ 50 ಕ್ಕೂ ಅಧಿಕ ಅಡಿಗಳ ಆಳದಲ್ಲಿ ಮಣ್ಣು ಲೂಟಿ ಮಾಡಲು ರಸ್ತೆ ಗುತ್ತಿಗೆದಾರರಿಗೆ ಅನುಮತಿ ನೀಡಿದವರ್ಯಾರು ಎಂಬುದು ನಮ್ಮ ಪ್ರಶ್ನೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಎಸ್.ಮಂಜುನಾಥ್ ಪ್ರಶ್ನಿಸಿದ್ದಾರೆ.

      ಕೆರೆಗಳಲ್ಲಿ ಬಗೆದ ರೀತಿ ನೀಡಿದರೆ ಯಾವುದೇ ಗಣಿಗಾರಿಕೆಗೆ ಸಾಟಿ ಇಲ್ಲ ಎಂಬಂತಿದೆ. ಮೈನಿಂಗ್ ಪ್ರದೇಶದಲ್ಲಿ ಕಾಣುವಂತೆ ಕೆರೆಗಳಲ್ಲಿ ತೋಡಲಾಗಿದೆ. ಮಣ್ಣಿನ ಪದರಗಳು ಲೆಕ್ಕಕ್ಕೆ ಸಿಗುತ್ತಿಲ್ಲ. ಈ ಜತೆಗೆ ಹಳ್ಳಿಗಾಡಿನ ರಸ್ತೆಯಲ್ಲಿ ಮಣ್ಣು ತುಂಬಿದ ಟಿಪ್ಪರ್ ಲಾರಿಗಳ ಓಡಾಟ ಕೂಡಾ ಡಾಂಬರ್ ರಸ್ತೆಗಳನ್ನು ಹಾಳು ಮಾಡಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಗಮನಹರಿಸಿಲ್ಲ. ಗ್ರಾಮೀಣ ಭಾಗದ ರಸ್ತೆಗಳೂ ಸಹ ಗುಂಡಿ ಬಿದ್ದಿದ್ದು, ಮಳೆ ಬಂದರೆ ಸಂಪೂರ್ಣ ಹಾಳಾಗಲಿದೆ. ಈ ನಷ್ಟ ಕೇಳುವರಿಲ್ಲ. ಅರಣ್ಯ ಪ್ರದೇಶದ ಸ್ಥಳದಲ್ಲಿ ಕೊರೆದ ಯಂತ್ರಗಳ ಕೆಲಸಕ್ಕೆ ಅರಣ್ಯ ಪ್ರದೇಶದ ಮರಗಿಡಗಳ ಬೇರು ನಾಶವಾಗಿದೆ. ಮರಳು ಮಾಫಿಯಾ ನಡೆಸುವವರಂತೆ ಕೆರೆಗಳನ್ನು ಯಾವುದೇ ಆದೇಶವಿಲ್ಲದೇ ಮನಬಂದಂತೆ ಮಣ್ಣು ತೆಗೆಯಲು ಇವರ ಬೆನ್ನ ಹಿಂದೆ ಸಹಕಾರ ನೀಡಿದವರ್ಯಾರು ಎಂದು ಅಧಿಕಾರಿಗಳಿಗೆ ತಿಳಿದಿದೆ. ಆದರೂ ಗುತ್ತಿಗೆದಾರರ ವಿರುದ್ಧ ಈವರೆವಿಗೆ ಕ್ರಮವಹಿಸಿಲ್ಲ. ಕೇಳಿದರೆ ಹಾರಿಕೆ ಉತ್ತರ ಸಜ್ಜಾಗಿರುತ್ತದೆ ಎಂದು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ವಿನಯ್‍ಕುಮಾರ್ ಕಿಡಿಕಾರಿದರು.

      ಒಟ್ಟಾರೆ ಹಾಳಾದ ಕೆರೆಕಟ್ಟೆಗಳ ಮೊದಲಿನ ರೂಪ ತರುವಲ್ಲಿ ತಾಲ್ಲೂಕು ಆಡಳಿತ ಜವಾಬ್ದಾರಿ ವಹಿಸಬೇಕಿದೆ. ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಸಂಬಂದಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಿಲ್ಲೆಯಲ್ಲಿದೆಯೇ ಎಂಬ ಪ್ರಶ್ನೆ ಸಾಕಷ್ಟು ಬಾರಿ ಕೇಳಿ ಬಂದಿದೆ.

      ಈ ರೀತಿ ಭೂಮಿಯ ಮಣ್ಣು ಲೂಟಿ ಮಾಡಿದರೂ ಇತ್ತ ಸುಳಿಯದ ಇಲಾಖೆ ಹಾಗೂ ಪರಿಸರನಾಶಕ್ಕೆ ಮುಂದಾದವರ ವಿರುದ್ಧ ಹೋರಾಟ ನಡೆಸಲಾಗುವುದು. ತಾಲ್ಲೂಕು ಅಧಿಕಾರಿಗಳಿಂದ ನ್ಯಾಯ ಸಿಗದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತರು ಎಚ್ಚರಿಸಿದ್ದಾರೆ.

(Visited 16 times, 1 visits today)