ಗುಬ್ಬಿ :

      ಸರ್ಕಾರಿ ಫಡ ಜಾಗದ ಮಂಜೂರಾತಿಗೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಕಾರೇಹಳ್ಳಿ ಎಸ್ಕೇಪ್ ಬಳಿ ನಡೆದಿದೆ.

       ಬಿದರೆಹಳ್ಳಿ ಕಾವಲ್ ಗ್ರಾಮಕ್ಕೆ ಸೇರಿದ ಸರ್ವೆ ನಂ.59 ರಲ್ಲಿರುವ 3.17 ಎಕರೆ ಪ್ರದೇಶ ಸಕಾರಿ ಫಡ ಎಂದು ಇಂದಿಗೂ ದಾಖಲೆ ಇದೆ. ಆದರೆ ಈ ಸ್ಥಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇರುವ ಬೀಳು ಜಾಗವಾಗಿದೆ. ಇಲ್ಲಿ ನಿವೇಶನ ವಿಂಗಡಿಸಿ ನಿರ್ಗತಿಕರಿಗೆ ನೀಡಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ 131 ಮಂದಿ ಈ ಸ್ಥಳದಲ್ಲೇ ನಿವೇಶನ ನೀಡುವುದು ಸೂಕ್ತ ಎಂದು ಕೋರಿಕೊಂಡಿದೆ. ಹಲವು ವರ್ಷಗಳಿಂದ ನಿವೇಶನ ಇಲ್ಲದೇ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುವ ಮಂದಿ ಈ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಎಲ್ಲಾ ಜನಾಂಗ ವರ್ಗದ ಮಂದಿ ಇರುವುದಾಗಿ ನಿವೇಶನ ಕೋರಿದ ತಂಡ ತಿಳಿಸುತ್ತಿದೆ.

       ದಲಿತ ಸರ್ವೋದಯ ಸಮಿತಿ ಜಿಲ್ಲಾಧ್ಯಕ್ಷ ದೇವರಾಜು ಮಾತನಾಡಿ ನಿವೇಶನಕ್ಕೆ ಅರ್ಜಿ ಕೋರಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ ಮರುದಿನವೇ ಈ ಸ್ಥಳದಲ್ಲಿ ಒಂದು ಕುಟುಂಬದ ಸದಸ್ಯರು ಗುಡಿಸಲು ನಿರ್ಮಿಸಿಕೊಂಡು ಈ ಸ್ಥಳ ನಮ್ಮದು ಎನ್ನುತ್ತಿದೆ. ಹೆದ್ದಾರಿ ಬದಿಯ ಈ ಸ್ಥಳ ತುಂಬಾ ಬೆಲೆ ಬಾಳುವ ಹಿನ್ನಲೆಯಲ್ಲಿ ಕೂಲಿ ಜನರಿಗೆ ದಕ್ಕದಂತೆ ಮಾಡಲು ಒಂದೇ ಕುಟುಂಬದ ಸಹೋದರರು ಮುಂದಾಗಿದ್ದಾರೆ ಎಂದು ಆರೋಪಿಸಿದರು.

      ಬಿದರೆಹಳ್ಳ ಕಾವಲ್‍ನಲ್ಲಿನ ಸರ್ಕಾರಿ ಸ್ಥಳಗಳು ಎಚ್‍ಎಎಲ್ ಘಟಕಕ್ಕೆ ನೀಡಲಾಗಿದೆ. ಉಳಿದ ಸುಮಾರು 12ಚ ಎಕರೆ ಪ್ರದೇಶದಲ್ಲಿ 3.17 ಎಕರೆ ಪ್ರದೇಶ ನಿರ್ಗತಿಕರ ನಿವೇಶನಕ್ಕೆ ಸೂಕ್ತವಾಗಿದೆ. ಎಲ್ಲಾ ಜನಾಂಗದ ಬಡವರು ಈ ನಿವೇಶನ ಕೋರಿಕೆದಾರರಾಗಿದ್ದಾರೆ. ಆದರೆ ಒಂದು ಕುಟುಂಬದ ಸದಸ್ಯರು ತಾಲ್ಲೂಕಿನ ವಿವಿಧ ಗ್ರಾಮದ 131 ಕುಟುಂಬಕ್ಕೆ ನಿವೇಶನ ದಕ್ಕದಂತೆ ಅಡ್ಡಿಪಡಿಸುತ್ತಿದೆ. ದಿಢೀರ್ ಸರ್ಕಾರಿ ಫಡ ಸ್ಥಳವನ್ನು ನಮ್ಮದು ಎನ್ನುತ್ತಿರುವ ಕುಟುಂಬದಿಂದ ಮುಕ್ತಿಗೊಳಿಸಿ ನಮ್ಮಗಳಿಗೆ ನಿವೇಶನ ಹಂಚಿಕೆ ಮಾಡಿಕೊಡುವಂತೆ ದಲಿತ ಮುಖಂಡ ಲಕ್ಷ್ಮೀಪತಿ ಆಗ್ರಹಿಸಿದರು.

      ಆದರೆ ವಾಗ್ವಾದ ನಡೆಸಿದ ಮತ್ತೊಂದು ಕುಟುಂಬದ ಹಿರಿಯ ಸದಸ್ಯ ನಾರಾಯಣಪ್ಪ ಕಳೆದ ಹಲವು ವರ್ಷದಿಂದ ಈ ಜಮೀನಿನಲ್ಲಿ ಕೃಷಿ ನಡೆಸಿದ್ದೇವೆ. ಅನುಭವದಲ್ಲಿರುವ ನಮ್ಮಗಳ ಕುಟುಂಬದ ಐವರು ಮಂದಿ ಈಗಾಗಲೇ 1998 ರಿಂದ ಈವರೆಗೆ ನಾಲ್ಕು ಬಾರಿ ನಮೂನೆ 57 ರ ಅರ್ಜಿ ಸಲ್ಲಿಸಿದ್ದೇವೆ.

      ಈ ಬಗ್ಗೆ ದಾಖಲೆ ಕೂಡ ತಾಲ್ಲೂಕು ಆಡಳಿತಕ್ಕೆ ನೀಡಿದ್ದೇವೆ. ಈ ನಿಟ್ಟಿನಲ್ಲಿ ಈ ಫಡ ಸ್ಥಳವು ನಮಗೆ ಮಂಜೂರು ಮಾಡಿಕೊಡಬೇಕು ಎಂದು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.  ಕೆಲ ಕಾಲ ವಾಗ್ವಾದ ಘರ್ಷಣೆಗೆ ತಿರುಗುವ ಮುನ್ನ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಸ್ಥಳದಿಂದ ಎರಡು ಗುಂಪುಗಳನ್ನು ಚದುರಿಸಿದರು. ತಾಲ್ಲೂಕು ಕಂದಾಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎರಡು ಗುಂಪುಗಳ ಮನವಿ ಆಲಿಸಿ ಸೂಕ್ತ ನಿರ್ಧಾರವನ್ನು ಜಿಲ್ಲಾಡಳಿತ ಕೈಗೊಳ್ಳಬೇಕಿದೆ.

(Visited 107 times, 1 visits today)