ಗುಬ್ಬಿ :

      ನಾಪತ್ತೆಯಾಗಿದ್ದ ವ್ಯಕ್ತಿಯ ಹುಡುಕಾಟದಲ್ಲಿ ವಿಳಂಬ ಅನುಸರಿಸಿದ್ದ ಗುಬ್ಬಿ ಪೊಲೀಸ್ ಠಾಣೆಯ ಮುಂದೆ ಕೆಂಚನಹಳ್ಳಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಎಚ್ಚೆತ್ತ ಪೊಲೀಸರು ತನಿಖೆ ಚುರುಕುಗೊಳಿಸಿ ಒಂದೇ ತಾಸಿನಲ್ಲೇ ನಾಪತ್ತೆ ವ್ಯಕ್ತಿ ಶವವಾಗಿರುವ ಮಾಹಿತಿ ಕಲೆ ಹಾಕಿ ಶವ ಕೂಡಾ ಪತ್ತೆ ಮಾಡಿದ ಘಟನೆ ಸೋಮವಾರ ನಡೆದಿದೆ.

      ಕಳೆದ ಬುಧವಾರ ಬೆಳಿಗ್ಗೆ ಮನೆಯಿಂದ ಟೈರ್ ಖರೀದಿ ಮಾಡಿ ಬರುವುದಾಗಿ ಹೊರಟ ನಿಟ್ಟೂರು ಹೋಬಳಿ ಕೆಂಚನಹಳ್ಳಿಯ ಜೆಸಿಬಿ ಯಂತ್ರ ಆಪರೇಟರ್ ಲಕ್ಷೀರಾಜು(37) ನಂತರದಲ್ಲಿ ನಾಪತ್ತೆಯಾಗಿದ್ದರು.

     ಈ ಸಂಬಂಧ ದೂರು ನೀಡಿದ ಲಕ್ಷ್ಮೀರಾಜು ಸಂಬಂಧಿಕರು ಕಿಡ್ನಾಪ್ ಆಗಿರುವ ಅನುಮಾನದ ಕೆಲ ವಿಚಾರವನ್ನು ಮೌಖಿಕವಾಗಿ ತಿಳಿಸಿದ್ದರೆನ್ನಲಾಗಿದೆ.

      ಆದರೂ 6 ದಿನಗಳ ವಿಳಂಬ ಅನುರಿಸಿದ್ದ ಕಾರಣ ಸೋಮವಾರ ದಿಢೀರ್ ಠಾಣೆಗೆ ಮುತ್ತಿಗೆ ಹಾಕಿದ ಕೆಂಚನಹಳ್ಳಿ ಗ್ರಾಮಸ್ಥರು ಹಾಗೂ ಮೃತನ ಸಂಬಂಧಿಕರು ನಾಪತ್ತೆ ಪ್ರಕರಣದಲ್ಲಿ ನ್ಯಾಯ ಒದಗಿಸಿಕೊಡಲು ಒತ್ತಾಯ ಮಾಡಿದ್ದಾರೆ.

      ನಂತರದಲ್ಲಿ ಎಚ್ಚೆತ್ತ ಪೊಲೀಸರು ತನಿಖೆ ಚುರುಕುಗೊಳಿಸಿ ಅನುಮಾನದ ವ್ಯಕ್ತಿಗಳ ವಿಚಾರಣೆ ನಡೆಸಿ ನಾಪತ್ತೆಯಾದ ಲಕ್ಷ್ಮೀರಾಜು ಅನುಮಾನಾಸ್ಪದವಾಗಿ ಶವವಾಗಿರುವ ವಿಚಾರ ಕಲೆ ಹಾಕಿದರು. ನಿಟ್ಟೂರಿನ ಖಾಸಗಿಶಾಲೆಯ ಹಿಂಬದಿಯಲ್ಲಿ ಮೃತನ ಶವ ಇರುವುದಾಗಿ ತನಿಖೆಯಲ್ಲಿ ತಿಳಿದು ಸ್ಥಳಕ್ಕೆ ದೌಡಾಯಿಸಿದರು. ಆದರೆ ಠಾಣೆ ಮುಂದೆ ಜಮಾಯಸಿದ್ದ ಮೃತನ ಸಂಬಂಧಿಕರ ಆಕ್ರೋಶದ ಕಟ್ಟೆ ಒಡೆದು ನ್ಯಾಯ ಒದಗಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ನಾವು ಪ್ರತಿಭಟನೆಗೆ ಮುಂದಾದ ಕಾರಣವಷ್ಟೇ ತನಿಖೆ ಚುರುಕುಗೊಳಿಸಿದ್ದಾರೆ. ಈ ಕೆಲಸವನ್ನು ಮುಂಚಯೇ ಮಾಡಬಹುದಿತ್ತು ಎಂದು ರೋದಿಸಿದ ಮೃತನ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

      ನಾಪತ್ತೆಯಾಗಿದ್ದ ಲಕ್ಷ್ಮೀರಾಜು ಸುತ್ತ ಅನೈತಿಕ ಸಂಬಂಧದ ಅನುಮಾನದ ಹುತ್ತ ಇರುವ ಕಾರಣ ಆರು ದಿನಗಳಿಂದ ಹುಡುಕಾಟ ನಡೆಸಿದ್ದ ಸಂಬಂಧಿಕರಿಂದ ದೂರು ಪಡೆದು ಮತ್ತಷ್ಟು ಅನುಮಾನದ ವ್ಯಕ್ತಿಗಳ ವಿಚಾರಣೆ ನಡೆಸಲು ಮುಂದಾದ ಗುಬ್ಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆದರೆ ವಿಳಂಬ ಅನುಸರಿಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದ ಮೃತನ ಸಂಬಂಧಿಕರು ಲಕ್ಷ್ಮೀರಾಜು ಕೊಲೆ ಮಾಡಿರುವ ಶಂಕೆ ಬಲವಾಗಿದೆ. ಆರೋಪಿಗಳನ್ನು ಹುಡುಕಿ ಕಠಿಣ ಶಿಕ್ಷೆಗೆ ಗುರಿ ಮಾಡಲು ಆಗ್ರಹಿಸಿದರು.

      ಸುಮಾರು 4 ತಾಸು ಠಾಣೆ ಮುಂದೆ ಕುಳಿತ ಸಂಬಂಧಿಕರು ನ್ಯಾಯ ಕೊಡುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಡಿವೈಎಸ್‍ಪಿ ಕುಮಾರಪ್ಪ ಕೆಂಚನಹಳ್ಳಿ ಗ್ರಾಮಸ್ಥರನ್ನು ಸಂತೈಸುವ ಕೆಲಸ ಮಾಡಿ ನ್ಯಾಯ ಒದಗಿಸುವ ಭರವಸೆ ನೀಡಿದರು.

(Visited 7 times, 1 visits today)