ಚೇಳೂರು ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ!!

ಗುಬ್ಬಿ :

      ನಿತ್ಯ ಸಾವಿರಾರು ಮಂದಿ ಸಂಚರಿಸುವ ಪ್ರಮುಖ ಚೇಳೂರು ರಸ್ತೆ ಹಾದು ಹೋಗುವ ಮಧ್ಯೆ ಪಟ್ಟಣದ ರೈಲ್ವೆ ನಿಲ್ದಾಣದಿಂದ ಅಂಡರ್‍ಪಾಸ್ ಸೇತುವೆ ದಾಟಿ ಸಾಗುವ ಒಂದು ಕಿಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದುರಸ್ಥಿ ಕಾರ್ಯಕ್ಕೆ ಸ್ಥಳೀಯ ಪಟ್ಟಣ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಜವಾಬ್ದಾರಿ ವಹಿಸದೆ ಒಬ್ಬರನ್ನಬ್ಬರು ದೂರುತ್ತಿದ್ದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಸುತ್ತಮುತ್ತಲಿನ ಗ್ರಾಮಸ್ಥರು ಚೇಳೂರು ರಸ್ತೆ ಬಂದ್ ಮಾಡಿ ಮೂರು ತಾಸು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.

        ಬೆಳಿಗ್ಗೆ ಚೇಳೂರು ಮತ್ತು ಅಮ್ಮನಘಟ್ಟ ಸಾಗುವ ಸರ್ಕಲ್ ಬಳಿ ರಸ್ತೆ ತಡೆ ನಡೆಸಿದ ನಾಗರೀಕ ಹೋರಾಟ ಸಮಿತಿ ಹಾಗೂ ನೂರಾರು ಗ್ರಾಮಸ್ಥರು ಒಂದು ಕಿಮೀ ರಸ್ತೆ ದುರಸ್ಥಿ ಕಾರ್ಯ ನಡೆಸಿ ಅಗಲೀಕರಣ ಮಾಡುವಂತೆ ಆಗ್ರಹಿಸಿ ಧರಣಿ ನಡೆಸಿದರು.

      ಈ ಹಿಂದೆ ರೈಲ್ವೆ ಇಲಾಖೆ ಗೇಟ್ ತೆಗೆದು ಅಂಡರ್‍ಪಾಸ್ ಸೇತುವೆ ನಿರ್ಮಾಣ ಮಾಡಲಾಯಿತು. ಅವೈಜ್ಞಾನಿಕವಾಗಿ ನಿರ್ಮಾಣವಾದ ಈ ಅಂಡರ್‍ಪಾಸ್ ಸೇತುವೆ ಹೆಚ್ಚುವರಿ ಒಂದು ಕಿಮೀ ದೂರ ಕ್ರಮಿಸುವಂತಾಯಿತು. ಬೇಸತ್ತ ಸಾರ್ವಜನಿಕರು ರೈಲ್ವೆ ಇಲಾಖೆಯನ್ನು ದೂಷಿಸುತ್ತಾ ಗುಂಡಿಗಳಿರುವ ಮಣ್ಣಿನ ರಸ್ತೆಯಲ್ಲೇ ಸಂಚರಿಸಿದರು. ಈ ಬಗ್ಗೆ ಕಳೆದ ಮೂರು ವರ್ಷದಿಂದ ಕಾದು ಬೇಸತ್ತ ನೂರಾರು ಮಂದಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ನ್ಯಾಯ ಕೇಳಿದರು.

      ರೈಲ್ವೆ ಇಲಾಖೆಯಿಂದ ನಿರ್ಮಾಣವಾದ ಹೆಚ್ಚುವರಿ ಒಂದು ಕಿಮೀ ರಸ್ತೆಯ ಜವಾಬ್ದಾರಿ ಹೊರುವವರ್ಯಾರು ಎನ್ನುವ ಸ್ಥಿತಿ ತಲುಪಿತು. ರೈಲ್ವೆ ಹಳಿಯ ಆಜಾಬಾಜು ರಸ್ತೆಯಲ್ಲಿ ಒಂದು ಭಾಗ ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬಂದರೆ, ಮತ್ತೊಂದು ಭಾಗ ಸ್ಥಳೀಯ ಪಟ್ಟಣ ಪಂಚಾಯಿತಿಗೆ ಬರುತ್ತದೆ ಎನ್ನಲಾಗಿತ್ತು. ಆದರೆ ಪಟ್ಟಣ ಪಂಚಾಯಿತಿ ನಮಗೆ ಬರುವುದಿಲ್ಲ ಎಂಬ ಉತ್ತರ ನೀಡಿ ಗ್ರಾಮಸ್ಥರನ್ನು ಕೆರಳಿಸಿತ್ತು. ಲೋಕೋಪಯೋಗಿ ಇಲಾಖೆ ಕೂಡಾ ನಮಗೆ ಬರುವುದಿಲ್ಲ ಎನ್ನುವ ವಾದ ಮುಂದಿಟ್ಟಿತ್ತು. ಒಟ್ಟಾರೆ ಈ ರಸ್ತೆ ರಿಪೇರಿ ಮಾಡುವವರ್ಯಾರು ಎಂದು ಪ್ರತಿಭಟನಾಕಾರರು ಕೂಗಾಡಿದರು. ಸ್ಥಳಕ್ಕೆ ಬಂದ ಉಪತಹಸೀಲ್ದಾರ್ ಖಾನ್ ಹಾಗೂ ಕಂದಾಯ ಸಿಬ್ಬಂದಿಯನ್ನು ಎರಡು ತಾಸು ದಿಗ್ಬಂಧನಕ್ಕೆ ಒಳಪಡಿಸಿದರು.

     ಪ್ರತಿಭಟನಾ ನೇತೃತ್ವ ವಹಿಸಿದ್ದ ಎಚ್.ಟಿ.ಭೈರಪ್ಪ ಮಾತನಾಡಿ ಕಳೆದ ಮೂರು ವರ್ಷದಿಂದ ಈ ಹೆಚ್ಚುವರಿ ರಸ್ತೆ ಸಂಚಾರಕ್ಕೆ ಯೋಗ್ಯವಿಲ್ಲವಾಗಿದೆ. ಈ ಬಗ್ಗೆ ರೈಲ್ವೆ ಜವಾಬ್ದಾರಿಯಿಂದ ವಿಮುಕ್ತವಾಯಿತು. ಲೋಕೋಪಯೋಗಿ ಇಲಾಖೆ ರಸ್ತೆಯ ನಿರ್ವಹಣೆಯನ್ನು ಸೃಳೀಯ ಪಟ್ಟಣ ಪಂಚಾಯಿತಿಗೆ ವಹಿಸಿರುವ ಬಗ್ಗೆ ಲಿಖಿತ ದಾಖಲೆ ತೋರುತ್ತಿದ್ದಾರೆ. ಆದರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಈ ರಸ್ತೆ ಗ್ರಾಮೀಣ ಭಾಗವಾಗಿದೆ. ನಮಗೆ ಬರುವುದಿಲ್ಲ ಎನ್ನುತ್ತಿದ್ದಾರೆ.

      ರಸ್ತೆಯ ಯಜಮಾನಿಕೆ ವಹಿಸದೆ ಇಲಾಖೆಗಳ ಬಗ್ಗೆ ತಾಲ್ಲೂಕು ಆಡಳಿತ ಕ್ರಮವಹಿಸಬೇಕಿದೆ. ಸಾರ್ವಜನಿಕರನ್ನೇ ದಿಕ್ಕು ತಪ್ಪಿಸುವ ಹೇಳಿಕೆ ನೀಡುವ ಎರಡೂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಾಲ್ಲೂಕು ಆಡಳಿತ ಸೂಕ್ತ ಕ್ರಮವಹಿಸಿ ವಾರದೊಳಗೆ ರಸ್ತೆ ಅಭಿವೃದ್ದಿ ಪಡಿಸಬೇಕು ಎಂದು ಆಗ್ರಹಿಸಿದರು.

      ಗ್ರಾಪಂ ಸದಸ್ಯ ಯತೀಶ್‍ಕುಮಾರ್ ಮಾತನಾಡಿ ಮಂಡಿಯುದ್ದದ ಗುಂಡಿಗಳಿರುವ ಈ ರಸ್ತೆ ಮೂರು ವರ್ಷದ ಹಿಂದೆ ದಿಢೀರ್ ನಿರ್ಮಾಣವಾಯಿತು. ಅಂಡರ್‍ಪಾಸ್ ರಸ್ತೆಗಾಗಿ ಹೆಚ್ಚುವರಿ ರಸ್ತೆ ಗುಬ್ಬಿ ಪಟ್ಟಣಕ್ಕೆ ಸುತ್ತುಬಳಸಿ ಹೋಗುವಂತಾಯಿತು. ನಿತ್ಯ ಸಾವಿರಾರು ಮಂದಿ ಸಂಚರಿಸುವ ಈ ರಸ್ತೆಯಲ್ಲಿ ಬಿದ್ದು ಕೈ ಕಾಲು ಮೂಳೆ ಮುರಿದ ಘಟನೆ ಸಾಕಷ್ಟು ನಡೆದಿದೆ. ಮಳೆ ಬಂದರೆ ಅಂಡರ್‍ಪಾಸ್ ರಸ್ತೆ ಉಪಯೋಗಕ್ಕೆ ಬರುವುದಿಲ್ಲ. ಈ ಬಗ್ಗೆ ರೈಲ್ವೆ ಇಲಾಖೆ ಗಂಭೀರ ಉತ್ತರ ನೀಡುತ್ತಿಲ್ಲ. ಉಡಾಫೆಯ ಉತ್ತರ ಕೇಳಿ ಬೇಸತ್ತ ಜನ ಪ್ರತಿಭಟನೆ ನಡೆಸಿದ್ದಾರೆ. ಶೀಘ್ರದಲ್ಲಿ ಸೂಕ್ತ ರಸ್ತೆ ನಿರ್ಮಾಣವಾಗದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

      ಇದೇ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಜಿ.ಎನ್.ಬೆಟ್ಟಸ್ವಾಮಿ, ಪಪಂ ಸದಸ್ಯರಾದ ಜಿ.ಎನ್.ಅಣ್ಣಪ್ಪಸ್ವಾಮಿ, ಶಶಿಕುಮಾರ್, ಜಿ.ಸಿ.ಕೃಷ್ಣಮೂರ್ತಿ, ಶಿವಕುಮಾರ್ ತಾಪಂ ಸದಸ್ಯ ರಾಜಣ್ಣ ಧರಣಿಯಲ್ಲಿ ಪಾಲ್ಗೊಂಡು ರಸ್ತೆ ದುರಸ್ಥಿಗೆ ಆಗ್ರಹಿಸಿದರು. ಎರಡು ತಾಸುಗಳ ಬಳಿಕ ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆ ಎಇಇ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು ಉಪತಹಸೀಲ್ದಾರ್ ಗೋವಿಂದರೆಡ್ಡಿ, ಖಾನ್ ಅವರ ಸಮ್ಮುಖದಲ್ಲೇ ತಾಂತ್ರಿಕ ಸಮಸ್ಯೆ ಆಲಿಸಿದರು. ಲೋಕೋಪಯೋಗಿ ಇಲಾಖೆ ಕಳೆದ 15 ತಿಂಗಳ ಹಿಂದೆಯೇ ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಈ ಭಾಗದ 3.25 ಕಿಮೀ ರಸ್ತೆ ನಿರ್ವಹಣೆ ವಹಿಸಿರುವ ಲಿಖಿತ ದಾಖಲೆ ತೋರಿದರು. ನಂತರ ಸ್ಥಳದಿಂದ ಕಾಲ್ಕಿತ್ತಿದ್ದ ಪಪಂ ಮುಖ್ಯಾಧಿಕಾರಿ ನಾಗೇಂದ್ರ ಅವರನ್ನು ಕರೆಸಿ ಛೀಮಾರಿ ಹಾಕಿದ ಮುಖಂಡರು ಪಪಂ ವ್ಯಾಪ್ತಿಯಲ್ಲೇ ರಸ್ತೆ ಅಭಿವೃದ್ದಿಗೆ ಆಗ್ರಹಿಸಿದರು.

      ನಂತರ ಉಪತಹಸೀಲ್ದಾರ್ ಗೋವಿಂದರೆಡ್ಡಿ ಎಲ್ಲಾ ದಾಖಲೆ ಪರಿಶೀಲಿಸಿ ಶೀಘ್ರದಲ್ಲಿ ರಸ್ತೆ ಅಭಿವೃದ್ದಿ ಮಾಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಇದೇ ಸಂದರ್ಭದಲ್ಲಿ ರೈಲ್ವೆ ಇಲಾಖೆಗೂ ಮನವಿಪತ್ರ ಸಲ್ಲಿಸಿ ಸ್ಕೈವಾಕ್ ಸೇತುವೆಯನ್ನು ರೈಲ್ವೆ ನಿಲ್ದಾಣದಿಂದ ಹೊರಭಾಗಕ್ಕೆ ವಿಸ್ತರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವಂತೆ ಮನವಿ ಮಾಡಿದರು.

      ಪ್ರತಿಭಟನೆಯಲ್ಲಿ ಮುಖಂಡರಾದ ಸಿ.ಆರ್.ಶಂಕರ್‍ಕುಮಾರ್, ಬಿ.ಲೋಕೇಶ್, ನಾಗಸಂದ್ರ ವಿಜಯ್‍ಕುಮಾರ್, ಯತೀಶ್, ಬಿ.ಲೋಕೇಶ್, ನಾಗಭೂಷಣ್, ಕೃಷ್ಣಪ್ಪ, ಕುಮಾರ್, ಸಿದ್ದರಾಮಯ್ಯ, ವಕೀಲ ಪ್ರಕಾಶ್ ಇತರರು ಇದ್ದರು.

(Visited 16 times, 1 visits today)

Related posts

Leave a Comment