ಹುಳಿಯಾರು : 

      ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳಿಗೆ ಕೊರೊನಾ ಪರೀಕ್ಷೆಗೆ ಕಡ್ಡಾಯವಾಗಿ ಒಳಗಾಗುವ ಅನಿವಾರ್ಯತೆ ಎದುರಾಗಿದೆ.

      ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮುನ್ನ ಆರೋಗ್ಯ ಸ್ಥಿತಿ ಅಂಕಿ-ಅಂಶಗಳನ್ನೂ ದಾಖಲಿಸಬೇಕಾಗಿದೆ. ಇದು ಕಡ್ಡಾಯವಾಗಿದೆ. ಸರ್ಕಾರ ರೂಪಿಸಿರುವ ಎಲ್ಲ ರೀತಿ ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಪಾಲಿಸಬೇಕಿರುವುದು ಅಭ್ಯರ್ಥಿಗಳ ಮೇಲಿ ನ ಹೆಚ್ಚುವರಿ ಹೊಣೆ ಯಾಗಿದೆ.

      ಇದಕ್ಕಾಗಿ ಗ್ರಾಮ ಪಂಚಾಯ್ತಿಯಿಂದ ಓರ್ವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರು ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿಗಳು ಹಾಗೂ ಅವರ ಜತೆ ಬರುವ ಬೆಂಬಲಿಗರ ದೇಹದ ಉಷ್ಣಾಂಶ ಪರೀಕ್ಷೆ (ಥರ್ಮಲ್ ಸ್ಕ್ಯಾನಿಂಗ್) ಮಾಡುವ ಜೊತೆಗೆ ಕೈಗಳೀಗೆ ಸಾನಿಟೈಸ್ ಮಾಡುತ್ತಿದ್ದಾರೆ. ಅಲ್ಲದೆ ಕಡ್ಡಾಯವಾಗಿ ಅಂತರ ಪಾಲನೆ ಮಾಡಿಸುತ್ತಿದ್ದಾರೆ. ಮಾಸ್ಕ್ ಧರಿಸದೆ ಬರುವವರನ್ನು ನಿರ್ಧಾಕ್ಷ್ಯಿಣ್ಯವಾಗಿ ತಡೆಯುತ್ತಿದ್ದಾರೆ.

      ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಗುಂಪು ಗುಂಪಾಗಿ ಜನ ಬರುತ್ತಾರಾದರೂ ಅವರನ್ನು ಕಚೇರಿ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಇದಕ್ಕಾಗಿ ಪೊಲೀಸ್ ಇಲಾಖೆಯಿಂದ ಇಬ್ಬರು ಪೊಲೀಸರನ್ನು ನಿಯೋಜಿಸಿದ್ದು ಇವರು ನಾಮಪತ್ರ ಸಲ್ಲಿಸುವರು ಮತ್ತು ಸೂಚಕರನ್ನು ಮಾತ್ರ ಒಬ್ಬರಾದ ಮೇಲೊಬ್ಬರಂತೆ ಒಳ ಬಿಡುತ್ತಿದ್ದಾರೆ.

      ಒಟ್ಟಾರೆ ಕೋವಿಡ್ ನಿಯಮ ಪಾಲನೆ ಮಾಡುವ ಮೂಲಕ ಸಾಂಕ್ರಾಮಿಕ ರೋಗ ಚುನಾವಣೆ ಸಮಯದಲ್ಲಿ ಹರಡುವುದನ್ನು ತಡೆಯುತ್ತಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಕೊರೊನಾ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಾಧ್ಯವಾದಷ್ಟು ಗುಂಪು ಪ್ರಚಾರ ನಿಲ್ಲಿಸಬೇಕಿದೆ.

(Visited 10 times, 1 visits today)