ಹುಳಿಯಾರು:

      ಸರ್ಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿಸಲು ಹುಳಿಯಾರು ಮಾರುಕಟ್ಟೆಯಲ್ಲಿ ಕಛೇರಿ ತೆರೆಯಲಾಗಿದೆ. ಆದರೆ ಕಛೇರಿ ತೆಗೆದು ವಾರವಾದರೂ ಇನ್ನೂ ನೋಂದಣಿ ಪ್ರಕ್ರಿಯೆ ಮಾತ್ರ ಆರಂಭವಾಗಿಲ್ಲ. ಪರಿಣಾಮ ನಿತ್ಯ ನೂರಾರು ರೈತರು ಎಪಿಎಂಸಿಗೆ ಅಲೆಯುವಂತ್ತಾಗಿದೆ.

      ಈ ವರ್ಷ ಉತ್ತಮ ಮಳೆ ಬಂದ ಪರಿಣಾಮ ತಾಲೂಕಿನಲ್ಲಿ ರಾಗಿ ಬಂಪರ್ ಬೆಳೆ ಬಂದಿದೆ. ಅಲ್ಲದೆ ಕೋವಿಡ್‍ನಿಂದಾಗಿ ಹಳ್ಳಿಗೆ ಮರಳಿದ ಯುವ ರೈತರು ಉತ್ಸುಕರಾಗಿ ರಾಗಿ ಬೆಳೆದಿದ್ದಾರೆ. ಕಳೆದ 2 ವರ್ಷಗಳಿಂದ ರಾಗಿ ಖರೀದಿ ಕೇಂದ್ರ ತೆರೆದಿದ್ದರಿಂದ ಈ ವರ್ಷವೂ ತೆರೆಯುವ ನಿರೀಕ್ಷೆಯೊಂದಿಗೆ ಮಾರುಕಟ್ಟೆಗೆ ರಾಗಿ ಬಿಡದೆ ಸಂಗ್ರಹಿಸಿಟ್ಟಿದ್ದಾರೆ. ಹೆಸರು ನೊಂದಾಯಿಸಲು ಅಗತ್ಯವಾದ ಬೆಳೆ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಪ್ರತಿ ಕೈಯಲ್ಲಿಟ್ಟುಕೊಂಡು ಕಾಯುತ್ತಿದ್ದರು.

      ರೈತರ ನಿರೀಕ್ಷೆಯಂತೆ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಕುಸಿದಿರುವುದರಿಂದ ಸರ್ಕಾರ ಮಧ್ಯ ಪ್ರವೆಶಿಸಿ ಒಂದು ಕ್ವಿಂಟಾಲ್‍ಗೆ 3295 ರೂ. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವುದಾಗಿ ಘೋಷಿಸಿತ್ತು. ಈ ಮೂಲಕ ರೈತರ ನೆರವಿಗೆ ಬಂದ ಸರ್ಕಾರ ಡಿಸೆಂಬರ್ 28 ರಿಂದ ಜನವರಿ 14 ರ ವರೆವಿಗೆ ನೋಂದಣಿ ಪ್ರಕ್ರಿಯೆ ಆರಂಭಿಸಿ ಜನವರಿ 16 ರಿಂದ ಮಾರ್ಚಿ 31 ರ ವರೆವಿಗೆ ಖರೀದಿ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿತ್ತು.

      ಈ ಬಗ್ಗೆ ಪತ್ರಿಕೆಗಳಲ್ಲಿ ಪ್ರಚಾರ ಸಹ ಮಾಡಿತ್ತು. ಎಪಿಎಂಸಿ ಬಳಿ ಬ್ಯಾನರ್‍ಗಳನ್ನು ಕಟ್ಟಿ ನೋಂದಣಿಗೆ ರೈತರನ್ನು ಆಹ್ವಾನಿಸಿತ್ತು. ಅಲ್ಲದೆ ಹುಳಿಯಾರು ಎಪಿಎಂಸಿಯಲ್ಲಿ ಕಛೇರಿ ತೆರೆದು ನೋಂದಣಿಗೆ ಸಿಬ್ಬಂದಿ ನೇಮಿಸಿತ್ತು. ಆದರೆ ನೋಂದಣಿಗೆ ಹಸಿರು ನಿಶಾನೆ ನೀಡದೆ ರೈತರು ಕಛೇರಿಗೆ ಅಲೆಯುವಂತೆ ಮಾಡಿದೆ. ಇಲ್ಲಿರುವ ಸಿಬ್ಬಂದಿಗೂ ಸಹ ನಿರ್ದಿಷ್ಠ ದಿನಾಂಕ ತಿಳಿದಿಲ್ಲ. ಹಾಗಾಗಿ ರೈತರು ನಿತ್ಯ ನೋ ಂದಣಿಯ ಆಸೆಯೊತ್ತು ಎಪಿಎಂಸಿಗೆ ಬರುವುದು ತಪ್ಪಿಲ್ಲ.

      ಸರ್ಕಾರ ಘೋಷಿಸಿದ ದಿನಾಂಕದಿಂದ ನೋಂದ ಣಿ ಪ್ರಕ್ರಿಯೆ ಆರಂಭವಾಗದಿರದ ಬಗ್ಗೆ ಎಪಿಎಂಸಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಮಗೂ ಇದಕ್ಕೂ ಸಂಬಂಧವಿಲ್ಲ ರಾಜ್ಯ ಸಹಕಾರ ಮಾರಾಟ ಮಹಾಮಂಡಳದವರು ಅಥವಾ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಕೇಳಬೇಕೆನ್ನುತ್ತಾರೆ. ನೋಂದಣಿಗೆ ನೇಮಿಸುರುವ ಸಿಬ್ಬಂದಿಗೆ ಕೇಳಿದರೆ ಪಾಸ್‍ವರ್ಡ್, ಯೂಸರ್ ನೇಮ್ ಕೊಟ್ಟಿಲ್ಲ ನಾನೇನು ಮಾಡಲಿ ಎಂದು ಅಸಹಾಯಕತೆ ಪ್ರದರ್ಶಿಸುತ್ತಾರೆ. ಹಾಗಾಗಿ ಜಿಲ್ಲಾಧಿಕಾರಿಗಳು ತಕ್ಷಣ ನೋಂದಣಿ ಪ್ರಕ್ರಿಯೆ ಆರಂಭಿಸಲು ಕ್ರಮ ಕೈಕೊಳ್ಳಬೇಕು ಎನ್ನುವುದು ರೈತರ ಒತ್ತಾಯವಾಗಿದೆ.

(Visited 26 times, 1 visits today)