ಹುಳಿಯಾರು : 

     ರೈತರು ಈ ದೇಶದ ಮೂಲನಿವಾಸಿಗಳು, ದೆಹಲಿ ಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಅನ್ನದಾತರ ಸಮಸ್ಯೆಗಳನ್ನು ಆಲಿಸದ ಕೇಂದ್ರ ಸರ್ಕಾರ ಕಣ್ಣು, ಕಿವಿ ಇಲ್ಲದ ಹೃದಯಹೀನ ಸರ್ಕಾರ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಟೀಕಿಸಿದರು.

      ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ ಹೆದ್ದಾರಿ ಬಂದ್ ಬೆಂಬಲಿಸಿ ಹೊಸಹಳ್ಳಿ ಚಂದ್ರಣ್ಣ ಬಣದ ರೈತ ಸಂಘದಿಂದ ಹುಳಿಯಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 234 ಬಂದ್ ಹಾಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

       ಕೇಂದ್ರ ಸರ್ಕಾರ ಕೃಷಿ ಕಾಯ್ದೆ ತಿದ್ದು ಪಡಿಯು ರೈತನ ಮರಣ ಶಾಸನವಾಗಿದೆ ಹಾಗಾಗಿ ಕೊರೆಯುವ ಚಳಿಯಲ್ಲಿ 90 ವರ್ಷದವರೆಗಿನ ವಯೋವೃದ್ಧರು ಸೇರಿದಂತೆ ಮಹಿಳೆಯರು ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇವರೆಲ್ಲರೂ ಅಪ್ಪಟ ರೈತರ ವಿನಹ ಭಯೋತ್ಪಾದಕರಲ್ಲ. ಆದರೂ ಅದಾನಿ, ಅಂಬಾನಿಗಾಗಿ ದೇಶದ ರೈತರನ್ನು ಪ್ರಧಾನಿಗಳು ದೇಶದ್ರೋಹಿಗಳು ಎಂದಿದ್ದಾರೆ. ಇದು ಖಂಡನಾರ್ಹವಾಗಿದ್ದು ಇನ್ನಾದರೂ ಪ್ರಧಾನಿಗಳು ತಮ್ಮ ತಪ್ಪನ್ನು ತಿದ್ದಿ ಕಾಯ್ದೆ ಹಿಂಪಡೆಯದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

      ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಈಶ್ವರಪ್ಪ ಅವರು ಮಾತನಾಡಿ ಮಳೆ, ಚಳಿ, ವಿಷಜಂತುಗಳಿಗೆ ಹಂಜದೆ ದೇಶದ ಜನರಿಗೆ ಅನ್ನ ನೀಡುವ ರೈತರು ದೇವರಿಗೆ ಸಮಾನ. ಇಂತಹ ರೈತರ ಪರವಾಗಿ ದೇಶದ ಕಾನೂನುಗಳು ಇದ್ದರೆ ದೇಶದ ಅಭಿವೃದ್ಧಿ ಸಾಧ್ಯ ಮತ್ತು ರೈತ ಪರ ನಿಲ್ಲುವ ಸರ್ಕಾರ ದೀಘಕಾಲ ಉಳಿಯುತ್ತದೆ. ಆದರೆ ರೈತರ ಪ್ರತಿಭಟನೆಯ ಸುತ್ತಲೂ ಬೇಲಿ ನಿರ್ಮಿಸಿ, ರಸ್ತೆಗೆ ಮೊಳೆ ಒಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ಅನೀತಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದಿದ್ದಾರೆ.

ತಾಲೂಕು ಅಧ್ಯಕ್ಷ ಕಂದಿಕೆರೆ ನಾಗರಾಜು ಮಾತನಾಡಿ ರೈತರು ದೆಹಲಿಯಲ್ಲಿ ನಡೆಸುತ್ತಿರುವುದು ಕಾಯ್ದೆಗಳ ವಿರುದ್ಧವೇ ವಿನಃ ದೇಶದ ವಿರುದ್ಧ ಅಲ್ಲ. ಈ ಸತ್ಯವನ್ನು ದೇಶದ ಜನರು ಅರಿತು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದರಲ್ಲದೆ ಪ್ರಾಣಗಳು ಉರುಳಿದರೂ ಕೃಷಿ ಕಾಯಿದೆಗಳನ್ನು ಹಿಂದಕ್ಕೆ ಪಡೆಯುವ ತನಕ ಹೋರಾಟ ನಿಲ್ಲುವುದಿಲ್ಲ. ಇದನ್ನು ಪ್ರಧಾನಿಗಳು ಅರ್ಥ ಮಾಡಿಕೊಂಡು ರೈತರ ಹೋರಾಟಕ್ಕೆ ಸ್ಪಂಧಿಸಬೇಕು ಎಂದರು.

     ಕರಿಯಪ್ಪ, ಎಸ್.ಸಿ.ಬೀರಲಿಂಗಯ್ಯ, ಹೂವಿನ ತಿಮ್ಮಸ್ವಾಮಿ, ಜಯಮ್ಮ, ರಂಗಮ್ಮ, ಪುಷ್ಪಾಬಾಯಿ, ಸಾಕುಬಾಯಿ, ನೀರಾಈರಣ್ಣ, ಆಟೋ ಅಹಮದ್, ಪ್ರಕಾಶ್, ಜಯಣ್ಣ, ರಂಗಸ್ವಾಮಿ, ನಿಂಗರಾಜು, ನಾಗರಾಜು, ಡಿ.ಎಸ್.ಎಸ್ ರಂಗಸ್ವಾಮಿ, ಪೆದ್ದಾಬೋವಿ, ಚಂದ್ರಶೇಖರರಾವ್, ರಂಗಸ್ವಾಮಿ ಮತ್ತಿತರರು ಇದ್ದರು.

(Visited 22 times, 1 visits today)