ಹುಳಿಯಾರು:

     19 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಹುಳಿ ಯಾರು ಅಣೇಕಟ್ಟೆ ರಸ್ತೆ ಕಾಮಗಾರಿಯು ತೀರ ಕಳಪೆಯಿಂದ ಕೂಡಿದ್ದು ಅತ್ತ ಡಾಂಬಾರ್ ಹಾಕಿಕೊಂಡು ಹೋಗುತ್ತಿದ್ದರೆ ಇತ್ತ ಕಿತ್ತೋಗುತ್ತಿದೆ ಎಂದು ಆರೋಪಿಸಿ ಸಾರ್ವ ಜನಿಕರು ಸಿಡಿದೆ ದ್ದು ಗುತ್ತಿಗೆದಾರನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಹುಳಿಯಾರಿನಲ್ಲಿ ಶುಕ್ರವಾರ ನಡೆಯಿತು.

      ಹುಳಿಯಾರು ಅಣೇಕಟ್ಟೆ ರಸ್ತೆಯನ್ನು ಮೇಲ್ದರ್ಜೆಗೇರಿಸಿ 19 ಕೋಟಿ ರೂ. ವೆಚ್ಚದಲ್ಲಿ ಡಾಂಬಾರಿಕರಣ ಮಾಡಲಾಗುತ್ತಿದೆ. ಆದರೆ ಹಳೆಯ ಡಾಂಬಾರ್ ಕೀಳದೆ ಅದರ ಮೇಲೆಯೇ ಹೊಸ ಡಾಂಬಾರ್ ಹಾಕಲಾಗುತ್ತಿದೆ. ಪರಿಣಾಮ ಡಾಂಬಾರ್ ಹಾಕಿದ ಮರುಕ್ಷಣವೇ ಜಲ್ಲಿ ಕಲ್ಲುಗಳು ಮೇಲೇಳುತ್ತಿದೆಯಲ್ಲದೆ ರಸ್ತೆಯ ಅಂಚಿನಲ್ಲಿ ಕಿತ್ತೋಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿತ್ತು.

      ಹಾಲಿ ರಸ್ತೆಯನ್ನು ಎರಡೂ ಕಡೆಯಲ್ಲೂ 1 ಮೀಟರ್ ಅಗಲೀಕರಣ ಸಹ ಮಾಡಬೇಕಿದೆಯಾದರೂ ಕೆಲವೆಡೆ ಅಗಲೀಕರಿಸಿ ಕೆಲವೆಡೆ ಕೈ ಬಿಟ್ಟಿದ್ದಾರೆ. ಅಲ್ಲದೆ ಹುಳಿಯಾರು ಪಟ್ಟಣದಲ್ಲಿ ತೀರ ಕಳಪೆಯ ಚರಂಡಿ ಕಾಮಗಾರಿ ಮಾಡಿದ್ದು ಕ್ಯೂರಿಂಗ್ ಮಾಡದೆ ನಿರ್ಲಕ್ಷ್ಯಿಸಿದ್ದ ಪರಿಣಾಮ ಚರಂಡಿ ಸ್ಲ್ಯಾಬ್‍ಗಳು ತುಂಡಾಗಿದೆ. ಆದರೂ ಯಾವೊಬ್ಬ ಎಂಜಿನಿಯರ್ ಸಹ ಕಾಮಗಾರಿ ಪರಿಶೀಲನೆಗೆ ಬಂದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

      ಸ್ಥಳಕ್ಕೆ ಪಿಡಬ್ಲ್ಯೂಡಿ ಎಂಜಿನಿಯರ್ ಸೋಮಶೇಖರ್ ಹಾಗೂ ಚಂದ್ರಶೇಖರ್ ಅವರು ಆಗಮಿಸಿ ಸಾರ್ವಜನಿಕರ ಅಹಾವಾಲು ಆಲಿಸಿದರು. ಈ ಸಂದರ್ಭದಲ್ಲಿ ರಸ್ತೆ ಡಾಂಬರೀಕರಣದ ಗುಣಮಟ್ಟವನ್ನು ಕಾಲಿನಲ್ಲಿಯೇ ಕೆರೆದು, ಚರಂಡಿ ಕಾಮಗಾರಿಯ ಗುಣಮಟ್ಟವನ್ನು ತುಂಡಾಗಿರುವ ಸ್ಲ್ಯಾಬ್ ಗಳನ್ನು ತಂದು ಕಳಪೆ ಕಾಮಗಾರಿ ಆಗುತ್ತಿರುವ ಬಗ್ಗೆ ಸಾರ್ವಜನಿಕರು ಎಂಜಿನಿಯರ್‍ಗೆ ತೋರಿಸಿಕೊಟ್ಟರಲ್ಲದೆ ಎಸ್ಟಿ ಮೆಂಟ್‍ನಲ್ಲಿ ಇರುವಂತೆ ಕಾಮಗಾರಿ ಮಾಡಿಸುವಂತೆ ಪಟ್ಟು ಹಿಡಿದರು.

      ಇದಕ್ಕೆ ಎಂಜಿನಿಯರ್ ಸೋಮಶೇಖರ್ ಅವರು ಈ ಕಾಮಗಾರಿಯು ಹಳೆಯ ರಸ್ತೆಯ ಮೇಲೆಯೇ ಹೊಸ ಡಾಂಬರ್ ಹಾಕುವುದಾಗಿದೆ. ಅಲ್ಲದೆ ರಸ್ತೆಯ ಡಾಂಬಾರ್ ಪರ್ಸಂಟೇಜ್ ಪರಿಶೀಲಿಸಿದರೆ ಎಸ್ಟಿಮೆಂಟ್ ಪ್ರಕಾರನೇ ಇದೆ. ಅಲ್ಲದೆ ಡಾಂಬಾರ್ ಸೆಟ್ ಆಗುವ ಮೊದಲೇ ವಾಹನಗಳು ಓಡಾಡಿದ ಪರಿಣಾಮ ಕಿತ್ತೋಗಿದೆ ಅಷ್ಟೆ. ಹಾಕಿರುವ ಡಾಂಬಾರ್ ಸೆಟ್ ಆಗಲು ಬಿಡಿ ಎಂದು ಗುತ್ತಿಗೆದಾರರ ಪರ ಮಾತನಾಡಿದರು. ಅಲ್ಲದೆ ಕಿತ್ತೋಗಿದೆಯ ಹೋಗಲಿ ಬಿಡು ಅದಕ್ಯಾಕೆ ತಲೆ ಕೆಡಿಸಿಕೊಳ್ತಿರಿ ಮತ್ತೆ ಮಾಡಿಕೊಡ್ತಿವಿ ಎಂದರು.

      ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಗುಣಮಟ್ಟದ ಕಾಮಗಾರಿ ಕಾಪಾಡುವಲ್ಲಿ ವಿಫಲರಾಗಿ ಈಗ ಗುತ್ತಿಗೆದಾರರ ಪರ ಮಾತನಾಡುತ್ತಿದ್ದಿರಲ್ಲ. ನಿಮ್ಮ ಕೈಯಲ್ಲಿ ಗುಣಮಟ್ಟ ಕಾಪಾಡಲು ಆಗಲಿಲ್ಲ ಎಂದರೆ ಹೇಳಿ ನಾವು ಲೋಕಾಯುಕ್ತಕ್ಕೆ ದೂರು ಕೊಡುತ್ತೇವೆ ಎಂದರು. ಆಗ ಗುತ್ತಿಗೆದಾರ ಪ್ರಸನ್ನ ಅವರಿಗೆ ಕಿತ್ತೋಗಿರುವ ಎಲ್ಲಾ ಕಡೆಯೂ ಮತ್ತೆ ಡಾಂಬಾರ್ ಹಾಕುವಂತೆಯೂ, ಚರಂಡಿಗಳ ಸ್ಲ್ಯಾಬ್‍ಗಳನ್ನು ಪುನಃ ಮಾಡುವಂತೆಯೂ ಎಂಜಿನಿಯರ್ ಸೂಚಿಸಿ ಪ್ರಕರಣಕ್ಕೆ ಇತಿಶ್ರೀ ಹಾಡಿದರು.

(Visited 21 times, 1 visits today)