ಹುಳಿಯಾರು : 

      ಹುಳಿಯಾರು ಹೋಬಳಿಯು ಕಾಂಗ್ರೆಸ್ ಭದ್ರಕೋಟೆಯಾಗಿದ್ದು ಈ ಬಾರಿಯ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಅವರು ಹೇಳಿದರು.

      ಹುಳಿಯಾರಿನ ಪಪಂ ಮಾಜಿ ಸದಸ್ಯ ಧನುಷ್ ರಂಗನಾಥ್ ಅವರ ಮನೆಯಲ್ಲಿ ನಡೆದ ಯುವ ಕಾಂಗ್ರಸ್ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ಟಿ.ಬಿ.ಜಯಚಂದ್ರ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ 4 ಬಾರಿಯೂ ಹುಳಿಯಾರು ಹೋಬಳಿ ಲೀಡ್ ಕೊಟ್ಟಿತ್ತು. ಕಳೆದ ಬಾರಿ ಜಯಚಂದ್ರ ಅವರ ಪುತ್ರ ಸಂತೋಷ್ ಸ್ಪರ್ಧಿಸಿದ್ದಾಗಲೂ ಹೆಚ್ಚು ಮತಗಳು ಈ ಹೋಬಳಿಯಿಂದ ಬಂದಿತ್ತು. ಹುಳಿಯಾರು ಗ್ರಾಮ ಪಂಚಾಯ್ತಿಗೂ ಸಹ ಕಾಂಗ್ರೆಸ್ ಬೆಂಬಲಿತರೇ ಹೆಚ್ಚು ಮಂದಿ ಗೆದ್ದು ಅಧಿಕಾರ ಹಿಡಿದಿದ್ದರು ಎಂದು ವಿವರಿಸಿದರು.

     ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ 6 ತಿಂಗಳ ಒಳಗಾಗಿ ಚುನಾವಣೆ ಮಾಡಬೇಕಿದ್ದರೂ ಹುಳಿಯಾರು ಪಂಚಾಯ್ತಿಗೆ ಮೇಲ್ದರ್ಜೆಗೇರಿ ಎರಡ್ಮೂರು ವರ್ಷಗಳು ಕಳೆದಿದ್ದರೂ ಸಹ ಚುನಾವಣೆ ಮಾಡಲಿಲ್ಲ. ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ 6 ತಿಂಗಳ ಒಳಗೆ ಚುನಾವಣೆ ಮಾಡಬೇಕೆಂಬ ನಿಯಮಗಳಿದ್ದರೂ ಆಡಳಿತಾಧಿಕಾರಿ ನೇಮಿಸಿ ವರ್ಷ ಕಳೆದರೂ ಚುನಾವಣೆ ಮಾಡಲಿಲ್ಲ. ಹುಳಿಯಾರಿನಲ್ಲಿ ಅಧಿಕಾರಿಗಳ ಮೂಲಕ ಆಡಳಿತ ನಡೆಸುತ್ತಿದ್ದು ಯಾವೂದೆ ನಿಯಮ, ಕಾನೂನು ಇಲ್ಲಿಗೆ ಅನ್ವಯವಾಗುತ್ತಿಲ್ಲ ಎಂದು ದೂರಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹುಲಿಕುಂಟೆ ಶಶಿಧರ್ ಅವರು ಮಾತನಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮತಮ್ಮಲ್ಲಿನ ಮನಸ್ಥಾಪ, ಭಿನ್ನಾಭಿಪ್ರಾಯ ಬದಿಗಿಟ್ಟು ಪಟ್ಟಣ ಪಂಚಾಯ್ತಿ ಚುನಾವಣೆಗೆ ಗೆದ್ದೇಗೆಲ್ಲುವ ಸಂಕಲ್ಪದೊಂದಿಗೆ ಒಗ್ಗಟ್ಟಾಗಿ ಸಂಘಟನೆ ಮಾಡಬೇಕಿದೆ. ಟಿ.ಬಿ,ಜಯಚಂದ್ರ ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮತದಾರರಿಗೆ ನೆನಪು ಮಾಡಿ, ಜೆಡಿಎಸ್, ಬಿಜೆಪಿಯ ಅಭಿವೃದ್ಧಿ ರಹಿತ ಆಡಳಿತದ ಬಗ್ಗೆ ಅರಿವು ಮೂಡಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಸೆಳೆಯಲು ಎಲ್ಲರೂ ಟೊಂಕ ಕಟ್ಟಿ ನಿಲ್ಲಬೇಕು ಎಂದು ಕರೆ ನೀಡಿದರು.

     ಹುಳಿಯಾರು ಯೂತ್ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್, ಪಪಂ ಮಾಜಿ ಸದಸ್ಯ ಧನುಷ್ ರಂಗನಾಥ್, ಎಸ್‍ಆರ್‍ಎಸ್ ದಯಾನಂದ್, ಎಚ್.ಆರ್.ವೆಂಕಟೇಶ್, ಕೆಂಕೆರೆ ಶಿವಕುಮಾರ್, ಸೊಸೈಟಿ ರಾಮಣ್ಣ, ಪ್ರಸನ್ನಕುಮಾರ್, ಬಡಗಿರಾಜು, ರವಿ, ಹರೀಶ್, ಧನುಷ್, ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.

(Visited 7 times, 1 visits today)